ಭಟ್ಕಳ: ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಗ್ರಾಮ ಆಡಳಿತಾಧಿಕಾರಿಗಳು ಸುಮಾರು 30 ವರ್ಷಗಳ ಮೇಲ್ಪಟ್ಟು ಪದೋನ್ನತಿಯನ್ನು ನಿವೃತ್ತಿ ಅಂಚಿನಲ್ಲಿ ಪಡೆಯುತ್ತಿರುವುದರಿಂದ ರಾಜ್ಯದಲ್ಲಿನ 1196 ಗ್ರೇಡ್-1 ಗ್ರಾಪಂ ಹಾಗೂ 304 ಕಸಬಾ ಹೋಬಳಿ ವೃತ್ತಗಳನ್ನು "ಗ್ರೇಡ್-1 ಗ್ರಾಮ ಆಡಳಿತ ಅಧಿಕಾರಿ " ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸಿ, ರಾಜಸ್ವ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಗ್ರೇಡ್-1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಪರಿಷ್ಕರಿಸಿ, ಮೇಲ್ದರ್ಜೆಗೇರಿಸಿ, ಪದೋನ್ನತಿ ಮಾಡಬೇಕು.
ಅಂತರ್ ಜಿಲ್ಲಾ ಪತಿ-ಪತ್ನಿ ಪ್ರಕರಣಗಳ ವರ್ಗಾವಣೆಗೆ ಚಾಲನೆ ನೀಡಿ, ಅಂತಿಮ ಆದೇಶಕ್ಕಾಗಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕು. ಕೆಸಿಎಸ್‌ಆರ್ ನಿಯಮಾವಳಿಗಳಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕದಿರಲು ಹಾಗೂ ಮೆಮೋ ಹಾಕುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಕಂದಾಯ ಇಲಾಖೆಯ 3 ವರ್ಷಗಳ ಸೇವೆಯನ್ನು ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆಗಾಗಿ ಕಂದಾಯ ಇಲಾಖೆಯಲ್ಲಿ ಹೊಸ ಮಾರ್ಗಸೂಚಿ ರಚಿಸಬೇಕು.ಆಯುಕ್ತಾಲಯದ ಅಡಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಜ್ಯೇಷ್ಠತೆಯನ್ನು ರಾಜ್ಯಮಟ್ಟದ ಜ್ಯೇಷ್ಠತೆಯನ್ನಾಗಿ ಪರಿಗಣಿಸಬೇಕು. ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಇದುವರೆಗೂ ಆಗಿರುವ ಎಲ್ಲ ಅಮಾನತುಗಳನ್ನು ತಕ್ಷಣವೇ ರದ್ದುಪಡಿಸಬೇಕು. ಪ್ರಯಾಣ ಭತ್ಯೆ ದರವನ್ನು ₹500ರಿಂದ ₹3000 ಗಳಿಗೆ ಹೆಚ್ಚಿಸಬೇಕು.
ರಾಜ್ಯದ ಗ್ರಾಮ ಸಹಾಯಕರಿಗೆ ಸೇವಾಭದ್ರತೆ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ. ಮನವಿಯನ್ನು ಸಹಾಯಕ ಆಯುಕ್ತೆ ಡಾ. ನಯನಾ ಸ್ವೀಕರಿಸಿದರು. ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.