ಕೊಪ್ಪಳ: ನಗರ, ಪಟ್ಟಣಗಳ ಸ್ವಚ್ಛತೆ ಕಾಪಾಡುವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಕಾರಣರಾದ ಸಫಾಯಿ ಕರ್ಮಚಾರಿಗಳಿಗೆ ನಿಯಮಾನುಸಾರ ಅಗತ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ಅಧಿಕಾರಿಗಳಿಗೆ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ವಿಜಿಲೆನ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಫಾಯಿ ಕರ್ಮಚಾರಿಗಳು ಕಾರ್ಯನಿರ್ವಹಿಸಲು ಮೂಲಭೂತವಾಗಿ ಅವರಿಗೆ ಸುರಕ್ಷಾ ಕಿಟ್‌ಗಳ ಅಗತ್ಯವಿರುತ್ತದೆ. ಕೈಗವಸು, ಮುಖಗವಸು, ಬೂಟ್‌ಗಳು, ಸಮವಸ್ತç ಸೇರಿದಂತೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಜಿಲ್ಲೆಯ ಯಾವುದೇ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮ್ಯಾನುವಲ್ ಸ್ಕ್ವಾಯವೆಂಜಿಂಗ್ ನಡೆಯಬಾರದು. ಅಂತಹ ಪ್ರಕರಣಗಳು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ನಿಯಮಾನುಸಾರ ಕರ್ಮಚಾರಿಗಳಿಗೆ ಬೆಳಗಿನ ತಿಂಡಿ ಒದಗಿಸಬೇಕು. ಕಾಲಕಾಲಕ್ಕೆ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಆರೋಗ್ಯ ತಪಾಸಣೆ ಮಾಡಿಸಬೇಕು. ನಿಯಮದ ವ್ಯಾಪ್ತಿಯಲ್ಲಿ ವೈದ್ಯಕೀಯ ವೆಚ್ಚ ಪಾವತಿ ಅಥವಾ ಮರುಪಾವತಿಗೆ ಕ್ರಮ ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಹೇಳಿದರು.ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರಗಳು ಇರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಕೊರತೆ ಇರುವ ಕಡೆಗಳಲ್ಲಿ ಅನುದಾನ ಕಾಯ್ದಿರಿಸಿ ನಿಯಮಾನುಸಾರ ಖರೀದಿ ಪ್ರಕ್ರಿಯೆ ನಡೆಸಬೇಕು. ಮ್ಯಾನುವಲ್ ಸ್ಕ್ವಾವೆಂಜರ್ ಪದ್ಧತಿ ನಿಷೇಧದ ಬಗ್ಗೆ ಜಾಗೃತಿ ಮೂಡಿಸಬೇಕು. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯನುಸಾರ ವೇತನ ಸಕಾಲಕ್ಕೆ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.ಸಫಾಯಿ ಕರ್ಮಚಾರಿಗಳಿಗೆ ನಿವೇಶನ ಹಂಚಿಕೆ ಮಾಡಲು ಜಮೀನು ಖರೀದಿ, ಲೇಔಟ್ ನಿರ್ಮಾಣ ಸೇರಿದಂತೆ ಮನೆ ನಿರ್ಮಿಸಿಕೊಳ್ಳಲು ಅನುಕೂಲ ಕಲ್ಪಿಸಿಕೊಡಬೇಕು. ನಗರ ಸ್ಥಳೀಯ ಸಂಸ್ಥೆ ಮಾತ್ರವಲ್ಲದೆ ಕಾರ್ಮಿಕ ಇಲಾಖೆಯಿಂದ ಸಫಾಯಿ ಕರ್ಮಚಾರಿಗಳಿಗೆ ಇರುವ ಸೌಲಭ್ಯಗಳನ್ನು ಪರಿಶೀಲಿಸಿ ಅರ್ಹರಿಗೆ ಸೌಲಭ್ಯ ತಲುಪಿಸಲು ಕ್ರಮ ವಹಿಸಬೇಕು ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ ಮಾತನಾಡಿ, ಕೊಪ್ಪಳ ಹಾಗೂ ಗಂಗಾವತಿ ನಗರಸಭೆ, ಕುಷ್ಟಗಿ ಹಾಗೂ ಕಾರಟಗಿ ಪುರಸಭೆ ಮತ್ತು ಯಲಬುರ್ಗಾ ಹಾಗೂ ಕುಕನೂರು ಪಟ್ಟಣ ಪಂಚಾಯತಿಗಳಲ್ಲಿ ಅಗತ್ಯಕ್ಕನುಸಾರ ಸಕ್ಕಿಂಗದದ ಮಷಿನ್ ವಾಹನಗಳನ್ನು ಖರೀದಿಸಿದ್ದು ಕೆಲವೆಡೆ ಖಾಸಗಿ ಸಕ್ಕಿಂಗ್ ಯಂತ್ರಗಳ ಮೂಲಕ ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆ ನಿರ್ವಹಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆ ಅನ್ವಯ ಅಕ್ಟೋಬರ್‌ವರೆಗೆ ಆರ್.ಟಿ.ಜಿ.ಎಸ್. ಮುಖಾಂತರ ಕನಿಷ್ಠ ವೇತನ ಪಾವತಿ ಮಾಡಲಾಗಿರುತ್ತದೆ. ಪೌರ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ಒದಗಿಸಿದೆ. ಅಗತ್ಯ ಸುರಕ್ಷಾ ಕಿಟ್‌ಗಳು ಹಾಗೂ ಸಮವಸ್ತçಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 49 ಜನ ಖಾಯಂ ಪೌರಕಾಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ಮಂಜೂರು ಮಾಡಲಾಗಿದೆ. ಇನ್ನುಳಿದ ಕನಿಷ್ಠ ವೇತನ ಹಾಗೂ ನೇರ ಪಾವತಿ ಪೌರಕಾರ್ಮಿಕರಿಗೆ ಆಶ್ರಯ ಯೋಜನೆಯಡಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಗಂಗಾವತಿ ನಗರಸಭೆ ವ್ಯಾಪ್ತಿಯ ಸರ್ವೇ ನಂ. 56 ರಲ್ಲಿ 4 ಎಕರೆ 29 ಗುಂಟೆಯನ್ನು ಪೌರಕಾರ್ಮಿಕರಿಗೆ ಕಾಯ್ದಿರಿಸಲಾಗಿದ್ದು, ಅದೇ ಸರ್ವೇ ನಂಬರ್‌ನಲ್ಲಿ 64 ಜನ ಖಾಯಂ ಪೌರಕಾರ್ಮಿಕರು ಹಾಗೂ 23 ಜನ ಹಂಗಾಮಿ ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಲ್ಲಿ 53 ಜನ ಖಾಯಂ ಪೌರಕಾರ್ಮಿಕರು ಮತ್ತು ಹೊಸದಾಗಿ 11 ಜನ ಖಾಯಂ ಪೌರಕಾರ್ಮಿಕರು ಗೃಹಭಾಗ್ಯ ಯೋಜನೆಯಡಿ ಆಯ್ಕೆಯಾಗಿರುತ್ತಾರೆ ಎಂದು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ರಾಜು ತಳವಾರ, ಕುಷ್ಟಗಿ ತಹಶೀಲ್ದಾರ ಶೃತಿ, ಕೊಪ್ಪಳ ನಗರಸಭೆ ಪೌರಾಯುಕ್ತರಾದ ಗಣಪತಿ, ಜಿಲ್ಲಾ ಉಸ್ತುವಾರಿ ಸಮಿತಿ ಸದಸ್ಯರಾದ ರಗಡಪ್ಪ ಹುಲಿಹೈದರ್, ಕಾಶಪ್ಪ ಚಲವಾದಿ, ಸೇರಿದಂತೆ ವಿವಿಧ ಪುರಸಭೆ, ಪಪಂ ಮುಖ್ಯಾಧಿಕಾರಿ ಉಪಸ್ಥಿತರಿದ್ದರು.