ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕುಟುಂಬದ ಸಮೀಕ್ಷಾ ಕಾರ್ಯವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರು ಹಾಗೂ ಇತರೆ ಇಲಾಖೆಯ ಸರ್ಕಾರಿ ನೌಕರರಿಂದ ನಡೆಸಲಾಗುತ್ತಿದೆ. ಸಾರ್ವಜನಿಕರು ಅಗತ್ಯ ಮಾಹಿತಿ ನೀಡಿ ಸಹಕರಿಸುವಂತೆ ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಕೋರಿದರು.ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸೆ.22ರಿಂದ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದ ಧರ್ಮನಾಥ ಭವನ ಹತ್ತಿರದ, ವಡ್ಡರವಾಡಿಯಲ್ಲಿ ಸೋಮವಾರ ಹಿಂದುಳಿದ ವರ್ಗಗಳ ಆಯೋಗದ ಮಾರ್ಗಸೂಚಿ ಪ್ರಕಾರ ನಡೆಸಲಾಗುತ್ತಿರುವ ಕರ್ನಾಟಕ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಅವರು ಚಾಲನೆ ನೀಡಿದರು.
ವಡ್ಡರವಾಡಿಯ ನಿವಾಸಿ ಮಲ್ಲವ್ವ ಗಾಡಿವಡ್ಡರ ಮನೆಗೆ ಭೇಟಿ ನೀಡಿದ ಶಾಸಕರು, ಕುಟುಂಬದ ಸದಸ್ಯರ ವಿವರ, ಶಿಕ್ಷಣ ಆಧಾರ್ ಸಂಖ್ಯೆ, ವೋಟರ್ ಐಡಿ ಸೇರಿದಂತೆ ಇತರೆ ಮಾಹಿತಿ ಸಂಗ್ರಹಿಸುವ ಮೂಲಕ ಸಮೀಕ್ಷೆ ನಡೆಸಿದರು.ಇದೇ ವೇಳೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಸಂಬಂಧಿಸಿದಂತೆ ಮನೆಗಳ ಗುರುತಿಸುವಿಕೆ ಕಾರ್ಯದಲ್ಲಿ ಹೆಸ್ಕಾಂ ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿಯೊಂದು ಮನೆಗೆ ಪ್ರತ್ಯೇಕ ಯುಎಚ್‌ಐಡಿ ನಿಗದಿ ಮಾಡಲಾಗಿದೆ. ಸಮೀಕ್ಷಾ ಕಾರ್ಯ 16 ದಿನಗಳೊಳಗೆ ಪೂರ್ಣಗೊಳಿಸಲು ಕಾಲಾವಧಿ ನಿಗದಿಪಡಿಸಲಾಗಿದೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಅಂದಾಜು 12 ಲಕ್ಷ ಕುಟುಂಬಗಳು ವಾಸಿಸುತ್ತಿದ್ದು, ಹಿಂದುಳಿದ ವರ್ಗಗಳ ಆಯೋಗದ ಮಾರ್ಗಸೂಚಿ ಪ್ರಕಾರ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರು ಹಾಗೂ ಇತರೆ ಇಲಾಖೆಯ ಸರ್ಕಾರಿ ನೌಕರರಿಂದ ಸಮೀಕ್ಷೆ ಮಾಡಲಾಗುತ್ತಿದೆ. ಸಮೀಕ್ಷಾದಾರರಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಸಮೀಕ್ಷಾ ಕಾರ್ಯದಲ್ಲಿ ನೆಟವರ್ಕ್ ತೊಂದರೆ ಇರುವಂತಹ ಪ್ರದೇಶಗಳಲ್ಲಿ ವಿಶೇಷ ಅಭಿಯಾನದ ಮೂಲಕ ಸಮೀಪದ ಗ್ರಾಪಂ ಅಥವಾ ಸರ್ಕಾರಿ ಕಟ್ಟಡಗಳಲ್ಲಿ ಸಮೀಕ್ಷೆ ನಡೆಸಲಾಗುವುದು ಎಂದರು.ಈ ವೇಳೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿನವ ಜೈನ್, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ್ ನಾಯಕ, ತಹಶೀಲ್ದಾರ್ ಬಸವರಾಜ ನಾಗರಾಳ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹರ್ಷ, ತಾಲೂಕಾಧಿಕಾರಿ ಶಾಂತಾ ಮರಿಗೌಡರ, ನಗರ ಸೇವಕರು, ಹಿಂದುಳಿದ ವರ್ಗಗಳ ಇಲಾಖೆ ಸಿಬ್ಬಂದಿಗಳು, ಹೆಸ್ಕಾಂ ಸಿಬ್ಬಂದಿ ಇದ್ದರು.