ರಾಮನಗರ: ಹಾಸ್ಟೆಲ್‌ಗಳಲ್ಲಿ ಸ್ವಚ್ಚತೆ, ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುವ ಜೊತೆಗೆ ಒಂದೇ ಎಂಬ ಭಾವನೆ ಮೂಡುವಂತಹ ವಾತಾವರಣ ನಿರ್ಮಿಸಿ ಎಂದು ವಾರ್ಡನ್‌ಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಕಿವಿಮಾತು ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಇಲಾಖಾ ವಾರ್ಡನ್‌ಗಳ ಸಭೆ ನಡೆಸಿದ ಅವರು, ಹಾಸ್ಟೆಲ್‌ನಲ್ಲಿ ನಿಲಯಪಾಲಕರು ಮಕ್ಕಳಿಗೆ ಕೇವಲ ಊಟ, ವಸತಿ ಕೊಟ್ಟರೆ ಸಾಲದು ಉತ್ತಮ ಶಿಕ್ಷಣ ಕಲಿಕೆಯ ಸಂಸ್ಕಾರವನ್ನು ಸಹ ನೀಡಬೇಕು. ಪೋಷಕರು ತಮ್ಮ ಮಕ್ಕಳನ್ನು ನಿಮ್ಮನ್ನು ನಂಬಿ ಹಾಸ್ಟೆಲ್‌ಗಳಿಗೆ ಸೇರಿಸಿದ್ದಾರೆ. ಅವರು ಉತ್ತಮ ಶಿಕ್ಷಣವನ್ನು ಪಡೆದು ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಲಯ ಪಾಲಕರ ಮೇಲಿದೆ. ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ಮಕ್ಕಳ ಭವಿಷ್ಯ ರೂಪಿಸಲು ಶ್ರಮಿಸಿ ಆಗ ಮಾತ್ರ ಖರ್ಚು ಮಾಡಿದ ಸರ್ಕಾರದ ಹಣ ಸಾರ್ಥಕವಾಗುತ್ತದೆ ಎಂದರು.ನಾನು ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿದ್ದ ಸಮಯದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ಎರಡನೇ ಸ್ಥಾನ ಪಡೆದಿತ್ತು. ಪ್ರಸ್ತುತ ಸಾಲಿನಲ್ಲಿ 26 ನೇ ಸ್ಥಾನಕ್ಕೆ ಕುಸಿದಿರುವುದು ಬೇಸರ ತಂದಿದೆ. ಶಾಲೆಯಲ್ಲಿ ಶಿಕ್ಷಣ ಜೊತೆಗೆ ಮಕ್ಕಳಿಗೆ ಓದಲು ಬೇಕಾಗುವ ಪುಸ್ತಕಗಳು ಹಾಸ್ಟೆಲ್‌ನಲ್ಲಿಯೇ ಸಿಗುವಂತಾಗಬೇಕು. ರಾತ್ರಿ 8 ಗಂಟೆಯೊಳಗೆ ಮಕ್ಕಳು ವಿದ್ಯಾರ್ಥಿ ನಿಲಯದಲ್ಲಿರಬೇಕು. ಅವರ ಕಲಿಕೆಗೆ ಬೇಕಾಗುವ ಪುಸ್ತಕಗಳ ಜೊತೆಗೆ ಮಕ್ಕಳಿಗೆ ಶುದ್ದನೀರು, ಬಿಸಿ ನೀರು, ಹೊದಿಕೆಗಳು, ಬೆಡ್ ಸೀಟುಗಳು, ಸ್ವಚ್ಚತೆ ಇರಬೇಕು. ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಶಿಕ್ಷಣ ಮತ್ತು ಅವರ ಮೇಲೆ ನಿಗಾ ಇಡುವ ಕೆಲಸ ಮಾಡಿ ಎಂದು ವಾರ್ಡನ್‌ಗಳಿಗೆ ಸೂಚಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗ ಇಲಾಖಾ ಅಧಿಕಾರಿಗಳಿಂದ ಹಾಸ್ಟೆಲ್‌ಗಳ ಮಾಹಿತಿ ಪಡೆದ ಇಕ್ಬಾಲ್ ಹುಸೇನ್ ರವರು, ಕೆಲವು ಬಾಡಿಗೆ ಕಟ್ಟಡದಲ್ಲಿದ್ದು, ಕೆಲವು ಸ್ವಂತ ಕಟ್ಟಡದಲ್ಲಿವೆ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹಾಸ್ಟೆಲ್‌ಗಳಿಗೆ ಜಾಗ ಗುರ್ತಿಸಲು ತಹಸೀಲ್ದಾರ್ ಅವರಿಗೆ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚನೆ ನೀಡಿದರು.ಹಾಸ್ಟೆಲ್‌ಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಮುಂದಾಗುವಂತಹ ವಾತಾವರಣ ಇಲ್ಲದಿದ್ದರೆ ಪ್ರವೇಶ ಪಡೆಯಲು ಯಾರು ಬರುತ್ತಾರೆ. ತಮ್ಮ ತಮ್ಮ ಇಲಾಖೆಗಳಲ್ಲಿ ಇರುವ ಸೌಲಭ್ಯಗಳ ಬಗ್ಗೆ ಕರಪತ್ರವನ್ನು ಹೊರಡಿಸಿ ಶಾಲಾ ಕಾಲೇಜುಗಳಲ್ಲಿ ಪ್ರಚಾರ ನಡೆಸಿ, ತಾಲ್ಲೂಕು ಆರೋಗ್ಯ ಅಧಿಕಾರಿಗಳು ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮತ್ತು ಸ್ವಚ್ಚತೆಯ ಬಗ್ಗೆ ನನಗೆ ವರದಿ ನೀಡಿ ಎಂದರು.
ಬಿಸಿಎಂ ಇಲಾಖೆ ಸಹಾಯಕ ನಿರ್ದೇಶಕಿ ಮಧುಮಾಲಾ ಮಾತನಾಡಿ, ವಸತಿ ನಿಲಯಗಳಲ್ಲಿನ ಮೂಲಭೂತ ಸೌಕರ್ಯಗಳ ಅವಶ್ಯಕತೆಗಳ ಬಗ್ಗೆ ಈಗಾಗಲೇ ಅಪ್‌ಲೋಡ್ ಮಾಡಿದ್ದು, ಜಿಪಂನಿಂದ ಕೆಲಸಗಳಿಗೆ ಮಂಜೂರಾತಿ ಸಹ ಆಗಿವೆ. ಬಿಸಿಎಂ ಇಲಾಖೆ ವತಿಯಿಂದ 7 ಪ್ರೀಮೆಟ್ರಿಕ್, 10 ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ ಹಾಗೂ 2 ಆಶ್ರಮ ಹಾಸ್ಟೆಲ್‌ಗಳಿವೆ. ಮತ್ತೆ 2 ಹೊಸ ಹಾಸ್ಟೆಲ್‌ಗಳು ಮಂಜೂರಾಗಿದ್ದು ಇಂಜಿನಿಯರಿಂಗ್ ಕಾಲೇಜು ಬಳಿ ಹಾಸ್ಟೆಲ್‌ಗಳಿಗೆ ಅವಕಾಶ ಸಿಕ್ಕರೆ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳನ್ನು ತೆರೆಯಬಹುದಾಗಿದೆ ಎಂದು ಶಾಸಕರ ಗಮನ ಸೆಳೆದರು.ಸಮಾಜ ಕಲ್ಯಾಣ ಇಲಾಖೆಯ ಕುಮಾರ್ ಮಾತನಾಡಿ, ಒಟ್ಟು 16 ಹಾಸ್ಟೆಲ್‌ಗಳಿದ್ದು 6 ಬಾಡಿಗೆಯಲ್ಲಿ ಇವೆ. ಗೌಸಿಯಾ ಇಂಜಿನಿಯರಿಂಗ್ ಕಾಲೇಜು ಮುಂಭಾಗ ಇರುವ ಹಾಸ್ಟೆಲ್‌ಗೆ ಅಡಿಷನಲ್ ಹಾಸ್ಟೆಲ್ ಬೇಕಿದೆ. 2 ಹೊಸ ಹಾಸ್ಟೆಲ್ ಸಹ ಮಂಜೂರಾಗಿದ್ದು ನಗರಕ್ಕೆ ಹೊಂದಿಕೊಂಡಂತೆ ಸ್ಥಳ ಬೇಕಿದೆ. ಹೊಸದಾಗಿ 2 ಮಹರ್ಷಿ ವಾಲ್ಮೀಕಿ ಸಮುದಾಯ ಭವನಕ್ಕೆ ಈ ವರ್ಷ ಅನುದಾನ ಬಂದಿದ್ದು ನಿರ್ಮಾಣಕ್ಕೆ ಜಾಗಬೇಕಿದೆ ಎಂದರು.
ಸಭೆಯಲ್ಲಿ ತಹಸೀಲ್ದಾರ್ ತೇಜಸ್ವಿನಿ, ಇಓ ಪ್ರದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಉಮಾ ವಾರ್ಡನ್‌ಗಳಾದ ಗೀತಾ, ಮಂಜಪ್ಪ, ಉಮಾ, ಸಾಕಮ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.ಬಾಕ್ಸ್ ...............ಹಾಸ್ಟೆಲ್‌ಗಳನ್ನು ಸದ್ಬಳಸಿಕೊಳ್ಳಿ
ಇಂಜಿನಿಯರಿಂಗ್ ಸೇರಿದಂತೆ ವಿವಿದ ಕೋರ್ಸ್ ಗಳಿಗೆ ಪ್ರವೇಶ ನಡೆಯುತ್ತಿದೆ. ಸರ್ಕಾರಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಪ್ರವೇಶ ಪಡೆಯುವಂತಾಗಬೇಕು. ಬಡ ವಿದ್ಯಾರ್ಥಿಗಳು ಅವಕಾಶ ವಂಚಿತರಾಗದಂತೆ ವಾರ್ಡ್ ಗಳು ತಮ್ಮ ವಸತಿ ನಿಲಯದಲ್ಲಿರುವ ಎಲ್ಲ ಸೀಟ್‌ಗಳ ಭರ್ತಿ ಮಾಡುವ ಕಡೆ ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ, ಬಿಸಿಎಂ ಅಧಿಕಾರಿಗಳು ಹೆಚ್ಚು ಗಮನಹರಿಸುವಂತೆ ಸಭೆಯಲ್ಲಿ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.20ಕೆಆರ್ ಎಂಎನ್ 2.ಜೆಪಿಜಿ
ರಾಮನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಇಲಾಖಾ ವಾರ್ಡನ್‌ಗಳ ಸಭೆ ನಡೆಸಿದರು.