ಸಾಗುವಳಿ ಚೀಟಿ ನೀಡಿರುವ ರೈತರ ಜಮೀನಿಗೆ ಪಕ್ಕಾ ಪೋಡಿ ಕೊಡಿ: ಡಾ.ಅಂಶುಮಂತ್ ಸೂಚನೆ

KannadaprabhaNewsNetwork | Published : Mar 21, 2025 12:34 AM

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ವ್ಯಾಪ್ತಿಯಲ್ಲಿ ರೈತರಿಗೆ ಕಾಯಂ ಸಾಗುವಳಿ ಚೀಟಿ ನೀಡಿರುವ ಜಮೀನುಗಳಿಗೆ ಪಕ್ಕಾ ಪೋಡಿ ಮಾಡಿಸಿ ಆಕಾರ್ ಬಂದ್ ದುರಸ್ತಿ ಪಡಿಸಿಕೊಡಬೇಕೆಂದು ಶಿವಮೊಗ್ಗ ಭದ್ರಾ ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಆಗ್ರಹಿಸಿದರು.

ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ಸಮಸ್ಯೆಗಳ ಸಮಾಲೋಚನಾ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ವ್ಯಾಪ್ತಿಯಲ್ಲಿ ರೈತರಿಗೆ ಕಾಯಂ ಸಾಗುವಳಿ ಚೀಟಿ ನೀಡಿರುವ ಜಮೀನುಗಳಿಗೆ ಪಕ್ಕಾ ಪೋಡಿ ಮಾಡಿಸಿ ಆಕಾರ್ ಬಂದ್ ದುರಸ್ತಿ ಪಡಿಸಿಕೊಡಬೇಕೆಂದು ಶಿವಮೊಗ್ಗ ಭದ್ರಾ ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಆಗ್ರಹಿಸಿದರು.ಬುಧವಾರ ತಾಲೂಕು ಕಚೇರಿಯಲ್ಲಿ ತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜ್ ಅಧ್ಯಕ್ಷತೆಯಲ್ಲಿ ನಡೆದ ಕಂದಾಯ ಇಲಾಖೆ ವ್ಯಾಪ್ತಿಯ ಸಮಸ್ಯೆಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ತಾಲೂಕಿನ ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ಕೆ.ಕಣಬೂರು ಗ್ರಾಮದ ಸರ್ವೆ ನಂ. 68 ರ 80 ಎಕರೆ ಕಂದಾಯ ಜಮೀನಿನಲ್ಲಿ ಜೀತ ವಿಮುಕ್ತಿಯೋಜನೆಯಡಿ 20 ಜನರಿಗೆ ಭೂಮಿ ನೀಡಿ ಸಾಗುವಳಿ ಚೀಟಿ ವಿತರಿಸಲಾಗಿದ್ದರೂ ಈವರೆಗೂ ಪಕ್ಕಾ ಪೋಡಿ ಮಾಡಿಲ್ಲ. ಆಕಾರ್ ಬಂದ್ ದುರಸ್ತಿ ಪಡಿಸಿಲ್ಲ ಈ ಸಮಸ್ಯೆ ಬಗೆಹರಿಸಬೇಕು ಎಂದರು.

ತಾಲೂಕಿನ ಹೊನ್ನೆಕೂಡಿಗೆ ಗ್ರಾಪಂ ನ ಸಾರ್ಯ ಗ್ರಾಮದ ಸರ್ವೆ ನಂ.73ರಲ್ಲಿ 200 ಎಕರೆ ಪ್ರದೇಶದಲ್ಲಿ 50 ರೈತರು ಭದ್ರಾ ಡ್ಯಾಂ ನಿರಾಶ್ರಿತರು 60 ವರ್ಷಗಳಿಂದ ವಾಸಿಸುತ್ತಿದ್ದು ಇವರಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಪಕ್ಕಾ ಪೋಡಿ ಯಾಗದೆ ಬ್ಯಾಂಕ್ ನಲ್ಲಿ ಸಾಲ ದೊರೆಯುತ್ತಿಲ್ಲ. ಈ ಸಮಸ್ಯೆ ಬಗೆಹರಿಸಬೇಕು. ತಾಲೂಕಿನಲ್ಲಿ ಇದುವರೆಗೂ ಪೋಡಿ ಯಾಗದಿರುವ ಎಲ್ಲಾ ಜಮೀನುಗಳಿಗೂ ಪೋಡಿ ಮಾಡಿಕೊಡಬೇಕು ಎಂದರು.

ಉಪ ವಿಭಾಗಾಧಿಕಾರಿ ಕಾಂತರಾಜ್ ಮಾತನಾಡಿ, ಸರ್ಕಾರವೇ ಸ್ವಯಂ ಪ್ರೇರಿತವಾಗಿ ಮಂಜೂರಾಗಿರುವ ಜಮೀನುಗಳಿಗೆ ಪೋಡಿ ಮಾಡಿ, ದುರಸ್ತಿ ಮಾಡಿಕೊಡುವ ಬಗ್ಗೆ ಆದೇಶ ಹೊರಡಿಸಿದ್ದು ಕಂದಾಯ ಇಲಾಖೆಯಿಂದ ಈ ಕಾರ್ಯ ಮಾಡ ಲಾಗುತ್ತಿದೆ. ಸದರಿ ಗ್ರಾಮದ ರೈತರ ಸಮಸ್ಯೆ ಶೀಘ್ರದಲ್ಲೆ ಬಗೆಹರಿಸಿ ಅನುಬಂಧ 2ರಲ್ಲಿ ಪೋಡಿ ದಾಖಲೆ ನೀಡಲಾಗುವುದು ಎಂದರು.

ಸರ್ಕಾರ ಸಂವಿಧಾನ ಬದ್ಧವಾಗಿ ರೂಪಿಸಿರುವ ಬಗರ್ ಹುಕುಂ ಸಮಿತಿ ಸಭೆಗಳನ್ನು ಪ್ರತಿ ತಿಂಗಳು ಆಯೋಜಿಸಬೇಕು. ಈವರೆಗೂ ಸಮಿತಿ ಸಭೆ ಆಯೋಜಿಸಿಲ್ಲ ಎಂದು ಅಂಶುಮಂತ್, ರಮೇಶ್ ಮಾಳೂರು ದಿಣ್ಣೆ ಗಮನ ಸೆಳೆದರು.

ಈ ಸಂದರ್ಭದಲ್ಲಿ ತರೀಕೆರೆ ಉಪ ವಿಭಾಗಾಧಿಕಾರಿ ಕಾಂತರಾಜ್ ಮಾತನಾಡಿ, ಪ್ರತಿ ಅರ್ಜಿ ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಕಳಿಸಿ ಅರಣ್ಯ ಇಲಾಖೆ ಒಪ್ಪಿಗೆ ಪಡೆದ ನಂತರ ಸಮಿತಿ ಮುಂದೆ ಬರುತ್ತದೆ. ಪ್ರಸ್ತುತ 5 ಅರ್ಜಿಗಳಿಗೆ ಅರಣ್ಯ ಇಲಾಖೆ ಒಪ್ಪಿಗೆ ದೊರೆತಿದ್ದು ಶೀಘ್ರದಲ್ಲೇ ಬಗರ್ ಹುಕುಂ ಸಮಿತಿ ಸಭೆ ಕರೆಯುವಂತೆ ತಹಸೀಲ್ದಾರರಿಗೆ ಸೂಚಿಸಲಾಗುವುದು ಎಂದರು.

ಬಗರ್ ಹುಕುಂ ಸಮಿತಿ ಅಧ್ಯಕ್ಷ ಈ.ಸಿ.ಜೋಯಿ ಮಾತನಾಡಿ, ನಾಗಲಾಪುರ ಗ್ರಾಮದಲ್ಲಿ ಹಿಂದೆ ಫಾರಂ ನಂ. 50,53 ಅಡಿ ಅರ್ಜಿ ಸಲ್ಲಿದವರಿಗೆ ಸಾಗುವಳಿ ಚೀಟಿ ನೀಡಿ ಪಹಣಿ ನೀಡಲಾಗಿದೆ. ಪೋಡಿ ಮಾಡಲು ಪಟ್ಟಣದಿಂದ 3 ಕಿ.ಮೀ ವ್ಯಾಪ್ತಿ ಯೊಳಗಿರುವುದರಿಂದ ಸಾಧ್ಯವಿಲ್ಲ ಎಂದು ಇಲಾಖೆಯವರು ತಿಳಿಸುತ್ತಾರೆ. ಪಟ್ಟಣದಿಂದ 3 ಕಿಮೀ ಒಳಗಿರುವ ಗ್ರಾಮಗಳ ಜನರು 94 ಸಿ ಅಡಿ ಅರ್ಜಿಸಲ್ಲಿಸಿದ್ದರೆ ಅವರಿಗೂ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಗಮನ ಸೆಳೆದರು.

ಫಾರಂ ನಂ.57 ಅಡಿ ಅರ್ಜಿಸಲ್ಲಿಸಿದವರ ಅರ್ಜಿ ತಿರಸ್ಕಾರ ಮಾಡುವ ಮುನ್ನ ಬಗರ್ ಹುಕುಂ ಸಮಿತಿ ಮುಂದೆ ತಂದು ಚರ್ಚಿಸಿ ತೀರ್ಮಾನಿಸಬೇಕು. ಒಂದು ವೇಳೆ ಅರ್ಜಿ ತಿರಸ್ಕರಿಸಿದರೆ ಫಲಾನುಭವಿಗಳಿಗೆ ಸಕಾರಣ ನೀಡಬೇಕು ಎಂದರು.

ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಪಟ್ಟಣದ ಅಂಬೇಡ್ಕರ್ ನಗರ, ಮೇದರ ಬೀದಿ, ಪೌರಕಾರ್ಮಿಕ ಕಾಲೋನಿಯಲ್ಲಿ ತಲಾ ತಲಾಂತರಗಳಿಂದ ವಾಸಿಸುತ್ತಿರುವ ಬಡವರ್ಗದ ಜನರಿಗೆ ಗ್ರಾಮ ಠಾಣಾ ಎಂಬ ಕಾರಣಕ್ಕೆ ಹಕ್ಕುಪತ್ರ ನೀಡಿಲ್ಲ. ಇವರು 94ಸಿಸಿ ಅಡಿ ಅರ್ಜಿಸಲ್ಲಿಸಿದ್ದು ಈ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದರು. ಅಲ್ಲದೆ 94 ಸಿ ಅಡಿ ಸಿದ್ದ ವಾಗುವ ಹಕ್ಕು ಪತ್ರಗಳನ್ನು ಆಗಾಗ್ಗೆ ವಿತರಿಸುವ ಕೆಲಸ ಮಾಡಬೇಕು. ಗ್ರಾಮಲೆಕ್ಕಾಧಿಕಾರಿಗಳು ಕಚೇರಿಯಲ್ಲಿ ಲಭ್ಯ ವಾಗುವ ಸಮಯದ ಬಗ್ಗೆ ಜನಸಾಮಾನ್ಯರಿಗೆ ನಿಖರ ಮಾಹಿತಿ ನೀಡಬೇಕು ಎಂದರು.

ಸಭೆಯಲ್ಲಿ ತಹಸೀಲ್ದಾರ್ ತನುಜಾ ಟಿ.ಸವದತ್ತಿ, ಕೆಡಿಪಿ ಸದಸ್ಯರಾದ ಕೆ.ವಿ. ಸಾಜು, ಮಾಳೂರು ದಿಣ್ಣೆರಮೇಶ್, ಬಿ.ಎಸ್.ಸುಬ್ರಹ್ಮಣ್ಯ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.

Share this article