ಕಾರವಾರ: ಜಿಲ್ಲೆಯ ಗ್ರಾಮ ಒನ್ ಕೇಂದ್ರಗಳಲ್ಲಿ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನ ಎಲ್ಲ ಸೇವೆಗಳನ್ನು ಮತ್ತು ವಿಮಾ ಯೋಜನೆಗಳನ್ನು ಸಾರ್ವಜನಿಕರಿಗೆ ಗರಿಷ್ಠ ಸಂಖ್ಯೆಯಲ್ಲಿ ಒದಗಿಸಬೇಕು ಎಂದು ಗ್ರಾಮ ಒನ್ ಕೇಂದ್ರಗಳ ಮುಖ್ಯಸ್ಥರಿಗೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ತಿಳಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಮ ಒನ್ ಕೇಂದ್ರಗಳಿಗೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಬ್ರಾಂಡಿಂಗ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಚೆ ಇಲಾಖೆಯು ಈ ಹಿಂದಿನಂತೆ ಅಂಚೆ ಪತ್ರಗಳ ವಿತರಣೆಗೆ ಮಾತ್ರ ಸೀಮಿತವಾಗಿರದೇ, ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡು ಸಾರ್ವಜನಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಸೇವೆಗಳನ್ನು ತ್ವರಿತಗತಿಯಲ್ಲಿ ಒದಗಿಸುತ್ತಿದೆ.
ರಿಸರ್ವ್ ಬ್ಯಾಂಕ್ ಮೂಲಕ ಸಾರ್ವನಿಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಅನುಮತಿ ಪಡೆದಿದ್ದು, ಗ್ರಾಹಕರಿಗೆ ಅತ್ಯಂತ ವಿಶ್ವಾಸಾರ್ಹ ಸೇವೆಗಳನ್ನು ನೀಡುತ್ತಿದೆ. ಗ್ರಾಮ ಒನ್ ಮೂಲಕ ಈ ಸೇವೆಗಳನ್ನು ಇನ್ನಷ್ಟು ವಿಸ್ತರಿಸಲು ಈಗಾಗಲೇ ಒಪ್ಪಂದ ಮಾಡಿಕೊಂಡಿದೆ ಎಂದರು.ರಾಜ್ಯ ಸರ್ಕಾರದ ವಿವಿಧ ಸೇವೆಗಳನ್ನು ಗ್ರಾಮೀಣ ಮಟ್ಟದಲ್ಲಿ ಒದಗಿಸುತ್ತಿರುವ ಗ್ರಾಮ ಒನ್ ಕೇಂದ್ರಗಳಿಗೆ ಗ್ರಾಮೀಣ ವ್ಯಾಪ್ತಿಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಅವರಿಗೆ ಅಂಚೆ ಇಲಾಖೆಯ ಬ್ಯಾಂಕ್ ಖಾತೆಗೆ ನೋಂದಣಿ, ಅತ್ಯಂತ ಕಡಿಮೆ ವೆಚ್ಚದ ಉತ್ತಮ ವಿಮಾ ಸೇವೆಗಳು, ಅಂಚೆ ಬ್ಯಾಂಕಿಂಗ್ ಸೇವೆಗಳು, ಸಾಲ ವಿತರಣೆ ಮುಂತಾದ ಯೋಜನೆಗಳ ಸೌಲಭ್ಯಗಳ ಕುರಿತು ಮಾಹಿತಿ ನೀಡುವಂತೆ ಮತ್ತು ಈ ಯೋಜನೆಗಳಿಗೆ ನೋಂದಣಿ ಮಾಡುವಂತೆ ತಿಳಿಸಿದ ಅಪರ ಜಿಲ್ಲಾಧಿಕಾರಿ, ಸರ್ಕಾರದ ವಿವಿಧ ಯೋಜನೆಗಳ ಮೊತ್ತವನ್ನು ಫಲಾನುಭವಿಗಳಿಗೆ ಡಿಬಿಟಿ ಮೂಲಕ ಪಾವತಿ ಮಾಡಲಾಗುತ್ತಿದ್ದು, ಫಲಾನುಭವಿಗಳು ಪೋಸ್ಟ್ ಬ್ಯಾಂಕ್ ಖಾತೆಗಳನ್ನು ಶೂನ್ಯ ಆರಂಭಿಕ ಠೇವಣಿಯೊಂದಿಗೆ ಕೇವಲ 5 ನಿಮಿಷಗಳ ಒಳಗೆ ತಮ್ಮ ಡಿಬಿಟಿ ಖಾತೆಗಳನ್ನು ತೆರೆಯಬಹುದು ಎಂದರು.
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನ ಪ್ರಾದೇಶಿಕ ಮುಖ್ಯಸ್ಥ ಜಗದೀಶ್ ಚಿಕ್ಕನರಗುಂದ ಮಾತನಾಡಿ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಬ್ಯಾಂಕ್ ಆಗಿ ಗುರುತಿಸಿಕೊಂಡಿದ್ದು, ದೇಶದ ಪ್ರತಿ ಕುಗ್ರಾಮದಲ್ಲೂ ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆ ಒದಗಿಸುವ ಉದ್ದೇಶ ಹೊಂದಿದ್ದು, ಈ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಪಡೆಯಬಹುದು ಎಂದು ಮಾಹಿತಿ ನೀಡಿದರು.ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನ ವಲಯ ಅಧಿಕಾರಿ ಶಿಲ್ಪಾ ಮಾತನಾಡಿದರು. ಇದೇ ವೇಳೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮತ್ತು ಗ್ರಾಮ ಒನ್ ಕೇಂದ್ರದ ಬ್ರಾಂಡಿಂಗ್ ಬಿಡುಗಡೆ ಮತ್ತು ನೋಂದಣಿ ಪತ್ರ ಹಾಗೂ ಗುರುತಿನ ಚೀಟಿ ಹಂಚಿಕೆ ಮಾಡಲಾಯಿತು. ಗ್ರಾಮ ಒನ್ ಕೇಂದ್ರಗಳ ಮೂಲಕ ಸಾರ್ವಜನಿಕರಿಗೆ ಹೆಚ್ಚು ಸರ್ಕಾರಿ ಸೇವೆಗಳನ್ನು ಒದಗಿಸಿದ ಕೇಂದ್ರಗಳನ್ನು ಅಭಿನಂದಿಸಲಾಯಿತು. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಜಿಲ್ಲೆಯ ಹಿರಿಯ ವ್ಯವಸ್ಥಾಪಕ ಜೋಸ್ ಕುಮಾರ್ ಇದ್ದರು.