ರೈತರಿಗೆ ಗುಣಮಟ್ಟದ ಬೀಜ, ಗೊಬ್ಬರ ಸಕಾಲಕ್ಕೆ ಒದಗಿಸಿ: ಕರಿಯಲ್ಲಪ್ಪ

KannadaprabhaNewsNetwork | Published : May 21, 2025 12:06 AM
ರೈತರಿಗೆ ಗುಣಮಟ್ಟದ ಬೀಜ, ಗೊಬ್ಬರ ಸಕಾಲಕ್ಕೆ ಒದಗಿಸುವುದು ಕೃಷಿ ಇಲಾಖೆ ಮತ್ತು ಪರಿಕರ ಮಾರಾಟಗಾರರ ಕರ್ತವ್ಯವಾಗಿದೆ.
Follow Us

ರಾಣಿಬೆನ್ನೂರು: ರೈತರು ಮಳೆ, ಗಾಳಿ, ಬಿಸಿಲು ಮತ್ತು ಚಳಿ ಲೆಕ್ಕಿಸದೆ ನಿಸ್ವಾರ್ಥದಿಂದ ಹೊಲದಲ್ಲಿ ಬೇಸಾಯ ಮಾಡಿದಾಗ ಮಾತ್ರ ನಾವೆಲ್ಲರೂ ಆರಾಮವಾಗಿ ಕುಳಿತು ಊಟ ಮಾಡಲು ಸಾಧ್ಯ ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಕರಿಯಲ್ಲಪ್ಪ ಡಿ.ಕೆ. ತಿಳಿಸಿದರು.ನಗರದ ಕೃಷಿ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕೃಷಿ ಪರಿಕರ ಮಾರಾಟಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತರಿಗೆ ಗುಣಮಟ್ಟದ ಬೀಜ, ಗೊಬ್ಬರ ಸಕಾಲಕ್ಕೆ ಒದಗಿಸುವುದು ಕೃಷಿ ಇಲಾಖೆ ಮತ್ತು ಪರಿಕರ ಮಾರಾಟಗಾರರ ಕರ್ತವ್ಯವಾಗಿದೆ. ತಾಲೂಕು ಕೃಷಿ ಪ್ರಧಾನವಾಗಿದ್ದು, ಯಾವುದೇ ಕೃಷಿ ಪರಿಕರಗಳ ಕೊರತೆಯಾಗದಂತೆ ಮಾರಾಟಗಾರರು ಜಾಗ್ರತೆ ವಹಿಸಬೇಕು ಎಂದರು. ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಮಾತನಾಡಿ, 2025- 26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಪರಿಕರ ಮಾರಾಟಗಾರರು ಗುಣಮಟ್ಟದ ಎಲ್ಲ ತರಹದ ಬಿತ್ತನೆ ಬೀಜ, ರಸಗೊಬ್ಬರಗಳನ್ನು ರೈತರಿಗೆ ಸರಿಯಾದ ಸಮಯಕ್ಕೆ ಮತ್ತು ಸರ್ಕಾರ ನಿಗದಿಪಡಿಸಿದ ಮಾರಾಟದ ಬೆಲೆಗೆ ಮಾರಾಟ ಮಾಡಬೇಕು. ರೈತರಿಗೆ ಕಡ್ಡಾಯವಾಗಿ ಬಿಲ್ ನೀಡಬೇಕು ಎಂದರು. ಹಾವೇರಿ ವಿಚಕ್ಷಣದಳ ಸಹಾಯಕ ಕೃಷಿ ನಿರ್ದೇಶಕ ಶಿವಲಿಂಗಪ್ಪ ಮಾತನಾಡಿ, ಎಲ್ಲ ಕೃಷಿ ಕೃಷಿ ಪರಿಕರ ಮಾರಾಟಗಾರರು ತಮ್ಮ ಮಾರಾಟ ಪರವಾನಗಿಗಳನ್ನು ಕಾಲೋಚಿತಗೊಳಿಸಿಕೊಂಡು ಕೃಷಿ ಪರಿಕರ ಮಾರಾಟ ಮಾಡುವುದು ಕಡ್ಡಾಯವಾಗಿರುತ್ತದೆ ಎಂದರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ನೂರಅಹ್ಮದ್ ಹಲಗೇರಿ ಮಾತನಾಡಿ, ಎಲ್ಲ ಕೃಷಿ ಪರಿಕರ ಮಾರಾಟಗಾರರು ತೋಟಗಾರಿಕೆ ಬೆಳೆಗಳ ಬೀಜಗಳನ್ನು ಮಾರಾಟ ಮಾಡಲು ತೋಟಗಾರಿಕೆ ಇಲಾಖೆಯ ಪರವಾನಗಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದರು. ಕೃಷಿ ಪರಿಕರ ಮಾರಾಟಗಾರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ ಮಾತನಾಡಿ, ತಾಲೂಕಿನ ಎಲ್ಲ ಕೃಷಿ ಪರಿಕರಗಳ ಮಾರಾಟಗಾರರು ದರಪಟ್ಟಿ, ದಾಸ್ತಾನು ವಿವರಗಳನ್ನು ರೈತರಿಗೆ ಕಾಣಿಸುವಂತೆ ಪ್ರದರ್ಶಿಸಬೇಕು ಎಂದರು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಸವನಗೌಡ ಕೊಟೆಗೌಡ್ರ, ರೈತ ಮುಖಂಡರಾದ ರವೀಂದ್ರಗೌಡ ಪಾಟೀಲ, ಈರಣ್ಣ ಹಲಗೇರಿ, ಸುರೇಶ ಹೊನ್ನಪ್ಪಳವರ ಮಾತನಾಡಿದರು. ವೀರೇಶ ಜೆ.ಎಂ., ಶಿವಾನಂದ ಹಾವೇರಿ, ಅರವಿಂದ ಎಂ. ಮತ್ತಿತರರು ಉಪಸ್ಥಿತರಿದ್ದರು.ರೈತ ಭವನ ಪರಿಶೀಲಿಸಿದ ಡಿಸಿ

ಹಾವೇರಿ: ರಾಣಿಬೆನ್ನೂರು ತಾಲೂಕಿನಲ್ಲಿ ನೂತನವಾಗಿ ನಿರ್ಮಾಣವಾದ ಕೃಷಿ ಉತ್ಪನ್ನ ಮಾರುಕಟ್ಟೆಯ ರೈತ ಭವನಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಪರಿಶೀಲಿಸಿದರು.

ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡು ಹೂಲಿಹಳ್ಳಿ- ಕೂನಬೇವು ಉಪಮಾರುಕಟ್ಟೆ(ಮೆಗಾ ಮಾರುಕಟ್ಟೆ) ಪ್ರಾಂಗಣವು 220 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಯಾಗಿದೆ. ಮಾರುಕಟ್ಟೆ ಪ್ರಾಂಗಣವು 518 ಸಂಖ್ಯೆ ನಿವೇಶನಗಳನ್ನು ಹೊಂದಿದ್ದು, ಅಗತ್ಯ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ಶೈಲಜಾ ಇತರರು ಇದ್ದರು.