ಕನ್ನಡಪ್ರಭ ವಾರ್ತೆ ಹೊಸದುರ್ಗ
ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ 2024-25ನೇ ಸಾಲಿನ ಕೃಷಿ ಪರಿಕರ ಮಾರಾಟಗಾರರಿಗೆ ಜಾಗೃತ ಸಭೆ ಹಾಗೂ ಸುರಕ್ಷಿತ ಕೀಟನಾಶಗಳ ಬಳಕೆ ಬಗ್ಗೆ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ಕಳೆದ ಬಾರಿ ಹವಾಮಾನ ವ್ಯತಿರಿಕ್ತವಾಗಿತ್ತು. ಈ ಬಾರಿ ಪೂರಕವಾಗಿದೆ. ಹಿಂದೆ ಮಳೆಯ ನಕ್ಷತ್ರ ನೋಡಿ ಬೀಜ ಬಿತ್ತುವ ಸಾಂಪ್ರದಾಯಿಕ ಪದ್ಧತಿ ನಮ್ಮಲ್ಲಿ ಇತ್ತು. ಆದರೆ ಇಂದು ರೈತರು ಅದನ್ನು ಮರೆತುಬಿಟ್ಟಿದ್ದಾರೆ. ಹಳೆ ಪದ್ಧತಿಯಂತೆ ರೈತರು ಕೃಷಿ ಮಾಡಿದರೆ ವರ್ಷಕ್ಕೆ ಎರಡು ಬೆಳೆ ತೆಗೆಯಬಹುದು ಎಂದರು.
ಕೃಷಿ ಪತ್ತಿನ ಸಹಕಾರ ಸಂಘಗಳ ಎಲ್ಲಾ ಸಿಇಒ ಕೃಷಿ ಇಲಾಖೆಯಲ್ಲಿ ನೀಡುತ್ತಿರುವ ಗೊಬ್ಬರಗಳ ನಿರ್ವಹಣೆ ಬಗ್ಗೆ ಕಡ್ಡಾಯವಾಗಿ ತರಬೇತಿ ಹೊಂದಿ ಬೀಜ ಮತ್ತು ಗೊಬ್ಬರ ವಿತರಣೆ ಮಾಡುವ ಪರವಾನಗಿ ಪಡೆದು ಕಡ್ಡಾಯವಾಗಿ ರೈತರಿಗೆ ಬೀಜ ಮತ್ತು ಗೊಬ್ಬರ ವಿತರಣೆ ಮಾಡುವ ಕಾರ್ಯ ಮಾಡಬೇಕು. ವಿತರಣೆ ಸಮಯದಲ್ಲಿ ನಿಮಗೆ ಏನೇ ತೊಂದರೆಯಾದರೂ ಅದಕ್ಕೆ ಇಲಾಖೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.ಗೋದಾಮು ನಿರ್ಮಾಣ, ಬೀಜ ಗೊಬ್ಬರ ಖರೀದಿಗೆ ಬೇಕಾದ ಆರ್ಥಿಕ ಸಹಾಯವನ್ನು ಡಿಸಿಸಿ ಬ್ಯಾಂಕ್ ಮೂಲಕ ಮಾಡಿಸಲಾಗುವುದು. ಸಂಘದವರು ಸ್ಥಳೀಯ ನಿರ್ದೇಶಕರನ್ನಾಗಲಿ, ನಮ್ಮನ್ನಾಗಲಿ ಭೇಟಿ ಮಾಡಿದರೆ ನಿಮಗೆ ಬೇಕಾದ ಅನುಕೂಲತೆ ಕಲ್ಪಿಸಲಾಗುವುದು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಆಧುನಿಕ ಕೃಷಿ ಕಡೆ ಬಂದಿದ್ದೇವೆ. ಸಂಪನ್ಮೂಲಗಳ ಸುದ್ಬಳಕೆಯಾದಾಗ ಮಾತ್ರ ಉತ್ಪಾದನೆ ಹೆಚ್ಚಿಸಲು ಸಾಧ್ಯ ಎಂದರು.
ಡಿಸಿಸಿ ಬ್ಯಾಂಕಿನ ನಿರ್ದೇಶಕ ಮಂಜುನಾಥ್ ಮಾತನಾಡಿ, ಕೃಷಿ ಪತ್ತಿನ ಸಹಕಾರ ಸಂಘದವರಿಗೆ ರೈತರ ಪರ ಕೆಲಸ ಮಾಡುವ ಇಚ್ಛೆ ಇದ್ದಂತೆ ಕಾಣುತ್ತಿಲ್ಲ. ಡಿಸಿಸಿ ಬ್ಯಾಂಕ್ ಆರ್ಥಿಕ ನೆರವು ನೀಡಲು ಸಿದ್ಧವಿದ್ದರೂ ಅದರ ಸದ್ಬಳಕೆ ಸಂಘದವರು ಮಾಡಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿಎಪಿ ಮತ್ತು ಯೋರಿಯಾ ಗೊಬ್ಬರ ಜೊತೆಗೆ ರೈತರಿಗೆ ಅಗತ್ಯವಿಲ್ಲದ ಪೋಷಕಾಂಶಗಳನ್ನು ಲಿಂಕ್ ರೂಪದಲ್ಲಿ ಕೊಡುತ್ತಿರುವುದರಿಂದ ರೈತರಿಗೆ ಗೊಬ್ಬರದ ಬೆಲೆ ಹೆಚ್ಚಾದಂತೆ ಕಾಣುತ್ತದೆ. ಗೊಬ್ಬರ ಖರೀದಿ ವೇಳೆ ಮಾಡುವ ಲಿಂಕ್ ವ್ಯವಸ್ಥೆ ತಪ್ಪಿಸಿ. ಇದರಿಂದ ರೈತರಿಗೂ ಅನುಕೂಲ, ವರ್ತಕರಿಗೂ ಅನುಕೂಲ
ಗೊಬ್ಬರ ಖರೀದಿಸಲು ಪತ್ತಿನ ಸಹಕಾರ ಸಂಘಗಳಲ್ಲಿ ಆರ್ಥಿಕ ಸಮಸ್ಯೆ ಇದೆ. ರೈತರು ಸುಸ್ತಿ ಸಾಲಗಾರರಾಗಿರುವುದರಿಂದ ಸಂಘಕ್ಕೆ ಬರುವ ಆದಾಯವನ್ನು ಡಿಸಿಸಿ ಬ್ಯಾಂಕಿನವರು ಸಾಲದ ಹಣಕ್ಕೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಆರ್ಥಿಕ ನೆರವು ಕೇಳಿದರೂ ಕೊಡುತ್ತಿಲ್ಲ. ಹೀಗಾಗಿ ಪತ್ತಿನ ಸಂಘಗಳಲ್ಲಿ ಗೊಬ್ಬರ ಶೇಖರಣೆ ಮಾಡಲಾಗುತ್ತಿಲ್ಲ.