ಕನ್ನಡಪ್ರಭ ವಾರ್ತೆ ಶಿವಮೊಗ್ಗ ರಾಜ್ಯದಲ್ಲಿ ಎಲ್ಲ ಕಾಲೇಜುಗಳಲ್ಲೂ ಅತಿಥಿ ಉಪನ್ಯಾಸಕ ಅವಶ್ಯಕತೆ ಎದ್ದುಕಾಣುತ್ತಿದೆ. ಕಾಯಂ ಉಪನ್ಯಾಸಕರಂತೆ ಕೆಲಸ ಮಾಡಿದರೂ ಅವರಿಗೆ ಯಾವ ಸೌಲಭ್ಯವೂ ಇಲ್ಲವಾಗಿದೆ. ಈಗ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಆಶ್ವಾಸನೆಗಳು ಸಮಾಧಾನಕರವೇ ಹೊರತು, ತೃಪ್ತಿದಾಯಕವಲ್ಲ ಎಂದು ವಿಧಾನ ಪರಿಷತ್ತು ಮಾಜಿ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಈಗ ನೀಡುತ್ತಿರುವ 10 ತಿಂಗಳ ವೇತನದ ಬದಲಾಗಿ 12 ತಿಂಗಳ ವೇತನ ನೀಡಬೇಕು. ಕಾಯಂ ಉಪನ್ಯಾಸಕಿಯರಿಗೆ ಇರುವಂತೆ ಅತಿಥಿ ಉಪನ್ಯಾಸಕರಿಗೂ ವೇತನ ಸಹಿತ ಹೆರಿಗೆ ರಜೆಯನ್ನು ಕಡ್ಡಾಯವಾಗಿ ನೀಡಬೇಕು. ಖಾಸಗಿ ಕಂಪನಿಯ ಉದ್ಯೋಗಿಗಳು ಕೆಲಸ ಬಿಟ್ಟಾಗ ಗ್ರ್ಯಾಚುಟಿ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಅತಿಥಿ ಉಪನ್ಯಾಸಕರಿಗೂ ನೀಡಿದರೆ ಇಡುಗಂಟು ನೀಡಬೇಕು. 60 ವರ್ಷದವರೆಗೆ ಅತಿಥಿ ಉಪನ್ಯಾಸಕರನ್ನು ತೆಗೆದು ಹಾಕುವುದಿಲ್ಲ ಎಂಬ ಭರವಸೆ ಸರ್ಕಾರ ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯಸರ್ಕಾರ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಅರುಣ್ ಮಾತನಾಡಿ, ಸರ್ಕಾರದ ಈ ನಿರ್ಧಾರದಿಂದ ನಮಗೆ ಸಮಧಾನವಾಗಿಲ್ಲ. ಪ್ರತಿವರ್ಷ ನಮ್ಮನ್ನು ಎರಡು ತಿಂಗಳ ಕಾಲ ತೆಗೆದುಹಾಕಲಾಗುತ್ತದೆ. ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬಹುದು, ತೆಗೆದುಕೊಳ್ಳದೇ ಇರಬಹುದು. ಹಾಗಾದಾಗ 10 ವರ್ಷ ಸೇವೆ ಸಲ್ಲಿಸುವುದು ಹೇಗೆ? ಪ್ರತಿ ವರ್ಷವು ನಮಗೆ ಸಂಕಟ ತಪ್ಪಿದ್ದಲ್ಲ ಎಂದು ಅಳಲು ತೋಡಿಕೊಂಡರು.ಪತ್ರಿಕಾಗೋಷ್ಠಿಯಲ್ಲಿ ಅತಿಥಿ ಉಪನ್ಯಾಸಕರ ಸಂಘದ ಉಪಾಧ್ಯಕ್ಷೆ ಸುರೈಯ ಬೇಗಂ, ಅನುದಾನ ಶಿಕ್ಷಣ ಸಂಸ್ಥೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಬಾಲಕೃಷ್ಣ ಹೆಗಡೆ ಇದ್ದರು.
- - -ಕೋಟ್
ಮುಷ್ಕರ ನಿರತ ಅತಿಥಿ ಉಪನ್ಯಾಸಕರು ಜನವರಿ 1ರಿಂದ ಕರ್ತವ್ಯಕ್ಕೆ ಹಾಜರಾಗದಿದ್ದರೆ ಕೆಲಸದಿಂದ ತೆಗೆಯುವುದಾಗಿ ಸಚಿವರು ಹೇಳಿದ್ದಾರೆ. ಇಂತಹ ಕಠಿಣ ನಿಲುವು ತಳೆಯದೇ ಮತ್ತೊಮ್ಮೆ ಮಾತುಕತೆ ನಡೆಸಬೇಕು- ಆಯನೂರು ಮಂಜುನಾಥ್, ಮಾಜಿ ಸಂಸದ
- - - (-ಫೋಟೋ: ಆಯನೂರು ಮಂಜುನಾಥ್)