ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಪ್ರಧಾನ ಅಂಚೆ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಅಂಚೆ ಮೂಲಕ ಮನವಿ ಕಳುಹಿಸಿ, ಕೇರಳ ಮತ್ತು ರಾಜ್ಯ ಸರ್ಕಾರದ ನಡೆಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ಕೇರಳದ ಮುಖ್ಯಮಂತ್ರಿ ಒಂದೇ ಟ್ವೀಟ್ ಮಾಡಿ ಕೋಗಿಲು ಅಕ್ರಮ ಬಡಾವಣೆಯ ಜನರ ಬಗ್ಗೆ ಮಾನವೀಯತೆಯಿಂದ ಪರ್ಯಾಯ ವ್ಯವಸ್ಥೆ ಮಾಡಿ ಎಂದ ತಕ್ಷಣ ಬೆಚ್ಚಿ ಬಿದ್ದ ರಾಜ್ಯ ಸರ್ಕಾರ ಬಯ್ಯಪ್ಪನಹಳ್ಳಿಯಲ್ಲಿ ಹೊಸ ಮನೆ ಕೊಡುತ್ತದೆ ಎಂದರೆ ನಿಮ್ಮ ಶಕ್ತಿ ಏನೆಂಬುದು ಕನ್ನಡಿಗರಿಗೆ ಅರ್ಥವಾಗಿದೆ ಎಂದು ಟೀಕಿಸಿದ್ದಾರೆ.ಕರ್ನಾಟಕದಲ್ಲಿ ಪ್ರವಾಹ, ಮಳೆಹಾನಿ, ಭೂಕುಸಿತ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಕ್ಕೆ ೧೪೦೦೦ ಜನ ಮನೆ ಕಳೆದುಕೊಂಡಿದ್ದಾರೆ. ಸೂರಿಲ್ಲದೆ ಪ್ಲಾಸ್ಟಿಕ್ ಶೆಡ್‌ಗಳಲ್ಲೇ ವಾಸ ಮಾಡುತ್ತಿದ್ದಾರೆ. ವಿವಿಧ ವಸತಿ ಯೋಜನೆ ಸೇರಿದಂತೆ ನಿವೇಶನಕ್ಕಾಗಿ ಹಲವಾರು ವರ್ಷದಿಂದ ೩೮,೭೯,೦೦೦ ಜನರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ನಮ್ಮ ರಾಜ್ಯದವರಿಗೆ ನಿವೇಶನ, ಸೂರು ಒದಗಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ಕೇರಳ ಮುಖ್ಯಮಂತ್ರಿಯ ಒಂದೇ ಒಂದು ಟ್ವೀಟ್‌ಗೆ ಮಲಯಾಳಿ ಜನರಿಗೆ ಸೂರು ಕಲ್ಪಿಸಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ ಎಂದು ದೂರಿದರು.
ನಮ್ಮ ರಾಜ್ಯದಲ್ಲಿ ರಾಮ, ಕೃಷ್ಣ, ಶಿವ, ಪಾರ್ವತಿ ಪೂಜಿಸುವ ನಮ್ಮ ಬಗ್ಗೆಯೂ ದಯವಿಟ್ಟು ಕರುಣೆ ಇರಲಿ ಎಂದು ಒತ್ತಾಯಿಸಿದರಲ್ಲದೆ, ಈ ಹಿಂದೆ ಬಂಡೀಪುರ ಮಾರ್ಗವಾಗಿ ರಾತ್ರಿ ಸಂಚಾರ ನಿರ್ಬಂಧ ತೆರವುಗೊಳಿಸಿದಾಗ, ನಿಮ್ಮ ರಾಜ್ಯದಲ್ಲಿ ಆನೆ ಕಾಲ್ತುಳಿತಕ್ಕೆ ನಮ್ಮ ಸರ್ಕಾರ ಪರಿಹಾರ ಕೊಟ್ಟಾಗ, ನಿಮ್ಮ ರಾಜ್ಯದಲ್ಲಿ ಮನೆ ಕಟ್ಟಿಕೊಡಲು ನಮ್ಮ ಸರ್ಕಾರ ಹಣ ಕೊಟ್ಟಾಗ ಗೊತ್ತಾಯಿತು ನಿಮ್ಮ ಶಕ್ತಿ ಏನೆಂದು. ಹಾಗಾಗಿ ಈ ಕೂಡಲೇ ನಮ್ಮ ಪರವಾಗಿಯೂ ದನಿ ಎತ್ತಬೇಕು. ಸಾಧ್ಯವಾದರೆ ನಿಮ್ಮ ರಾಜ್ಯದ ಸಂಸದ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರಿಗೂ ಟ್ವೀಟ್ ಮಾಡಿ ಹೇಳಿ ಎಂದು ಒತ್ತಾಯಿಸಿದರು.ಮುಖಂಡರಾದ ಸಿ.ಟಿ.ಮಂಜುನಾಥ್, ಶಿವಕುಮಾರ್ ಆರಾಧ್ಯ, ಹೊಸಹಳ್ಳಿ ಶಿವು, ಶಿವಣ್ಣ, ಮಾದರಾಜ ಅರಸು, ಮಹಂತಪ್ಪ, ಆನಂದ್, ಶಿವಲಿಂಗಪ್ಪ, ಯಲ್ಲೇಗೌಡ, ಪ್ರಸನ್ನ, ಯೋಗೇಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.