ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತು ಅರಿವು ಮೂಡಿಸುವ ವಿಶೇಷ ತರಬೇತಿ ಕಾರ್ಯಾಗಾರ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಆಯುಕ್ತ ರಾಜಶೇಖರ.ಎಸ್ ಮಾತನಾಡಿ, ಅಧಿಕಾರಿಗಳು ಸಾರ್ವಜನಿಕರು ಮತ್ತು ಸರ್ಕಾರದ ಕೊಂಡಿ ಇದ್ದಂತೆ ಎಂಬುದು ಮಾಹಿತಿ ಹಕ್ಕು ಕಾಯ್ದೆಯ ಆಶಯವಾಗಿದೆ. ಪಾರದರ್ಶಕವೇ ಈ ಕಾಯ್ದೆಯ ಮೂಲ ಮಂತ್ರ. ಈ ಕಾಯ್ದೆ ಜಾರಿಗೆ ಮುನ್ನವೇ ಕೆಲವರಿಗಷ್ಟೇ ಮಾಹಿತಿ ಗೊತ್ತಾಗುತ್ತಿತ್ತು. ಆದರೆ, ಈ ಕಾಯ್ದೆ ಬಂದ ಬಳಿಕ ಪ್ರತಿಯೊಬ್ಬರಿಗೂ ಮಾಹಿತಿಯ ಸಿಗುತ್ತದೆ. ಸಾರ್ವಜನಿಕರು ಕೇಳುವ ಮಾಹಿತಿ ನೀಡಿ, 41 ಎಬಿ ಮಾಡಿದರೆ, ನಿಮಗೆ ಕೆಲಸ ಹಗುರವಾಗುತ್ತದೆ. ಇದೊಂದು ಸರಳ ಕಾಯ್ದೆಯಾಗಿದ್ದು, ಆದರೆ, ಶಕ್ತಿಶಾಲಿ ಕಾಯ್ದೆಯಾಗಿದೆ. ಹಾಗಾಗಿ 30 ಪುಟಗಳ ಈ ಕಾಯ್ದೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಒಬ್ಬ ವ್ಯಕ್ತಿ 50 ಅರ್ಜಿ ಹಾಕಿದರೂ, ನೀವು ಸಂಪೂರ್ಣ ಕಾಯ್ದೆಯನ್ನು ಅಧ್ಯಯನ ಮಾಡಿದ್ದರೆ, ಸುಲಭವಾಗಿ ಮಾಹಿತಿ ನೀಡಬಹುದಾಗಿದೆ. ಈ ವಿಷಯದಲ್ಲಿ ಆದಿತ್ಯ ಬಂಡೋಪಾಧ್ಯಾಯ ಕೇಸ್ ಓದಿದರೆ, ನಿಮಗೆ ಸುಲಭವಾಗುತ್ತದೆ ಎಂದರು. ನೀವು ಸಕಾಲಕ್ಕೆ ಉತ್ತರ ಕೊಡಲೇಬೇಕು. ಕೇಳಿದ ಮಾಹಿತಿ ತಕ್ಷಣ ನೀಡಬೇಕು ಎಂದರು.
ಕಾರ್ಯಾಗಾರದಲ್ಲಿ ಜಿಪಂ ಸಿಇಒ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಮಾಹಿತಿ ಹಕ್ಕಿನಡಿ ಅರ್ಜಿದಾರ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದರೆ, 30 ದಿನಗಳೊಗಾಗಿ ಉತ್ತರ ಕೊಡಬೇಕು. ಅರ್ಜಿದಾರ ಕೋರಿದ ಮಾಹಿತಿ ನೀಡಲು ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ. ಒಂದು ವೇಳೆ ನೀವು ಮಾಹಿತಿ ನೀಡಲು ಹಿಂಜರಿದರೆ ಅದು ಅಪಾರ್ಥಕ್ಕೆ ಕಾರಣವಾಗಲಿದೆ. ಹಾಗಾಗಿ ಪ್ರಥಮ ಮೇಲ್ಮನವಿಗೆ ಹೋಗುವ ಮುನ್ನವೇ ಪ್ರತಿಯೊಬ್ಬ ಅಧಿಕಾರಿಯೂ ಉತ್ತರ ನೀಡಬೇಕು. ದ್ವಿತೀಯ ಮೇಲ್ಮನವಿಗೆ ಬಂದಾಗ ಅದನ್ನು ನಾವು ನೋಡಿಕೊಳ್ಳುತ್ತೇವೆ.