ಕಟ್ಟಡ ಕಾರ್ಮಿಕರ ಸಮಸ್ಯೆಗೆ ಪರಿಹಾರ ನೀಡಿ: ಕಟ್ಟಡ ಕಾರ್ಮಿಕರ ಸಂಘ

KannadaprabhaNewsNetwork |  
Published : Oct 14, 2025, 01:00 AM IST
13ಕೆಡಿವಿಜಿ3-ದಾವಣಗೆರೆ ಕಾರ್ಮಿಕ ಇಲಾಖೆಗೆ ಕಟ್ಟಡ ಕಾರ್ಮಿಕರ ಸಮಸ್ಯೆ ಪರಿಹರಿಸುವಂತೆ, ವಿವಿಧ ಬೇಡಿಕೆ ಈಡೇರಿಸವಂತೆ ಹಕ್ಕೊತ್ತಾಯಿಸಿ ಕಾಯಕ ಜೀವಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದಿಂದ ಮನವಿ ಅರ್ಪಿಸಲಾಯಿತು. | Kannada Prabha

ಸಾರಾಂಶ

ರಾಜ್ಯದ ಕಟ್ಟಡ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸವಂತೆ ಹಕ್ಕೊತ್ತಾಯಿಸಿ ಕಾಯಕ ಜೀವಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಕಾರ್ಮಿಕ ಇಲಾಖೆ ಮೂಲಕ ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್, ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಮನವಿ ಅರ್ಪಿಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಕಟ್ಟಡ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸವಂತೆ ಹಕ್ಕೊತ್ತಾಯಿಸಿ ಕಾಯಕ ಜೀವಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಕಾರ್ಮಿಕ ಇಲಾಖೆ ಮೂಲಕ ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್, ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಮನವಿ ಅರ್ಪಿಸಲಾಯಿತು.

ನಗರದ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳ ಮುಖಾಂತರ ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಹಾಗೂ ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಮನವಿ ಅರ್ಪಿಸಿದ ಸಂಘದ ಪದಾಧಿಕಾರಿಗಳು, ಸದಸ್ಯರು, ಕಟ್ಟಡ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳನ್ನು ಪ್ರಥಮಾದ್ಯತೆಯ ಮೇಲೆ ಈಡೇರಿಸುವಂತೆ ಒತ್ತಾಯಿಸಿದರು.

ಇದೇ ವೇಳೆ ಮಾತನಾಡಿದ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅರವಿಂದ, ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಜಾರಿಗೊಂಡು 18 ವರ್ಷ ಕಳೆದಿದ್ದು, ಮಂಡಳಿಯಲ್ಲಿ ಅನೇಕ ಬದಲಾವೆ ತಂದಿರುವ ಸಚಿವರ ಅಲ್ಲಿರುವ ಅನೇಕ ಸಮಸ್ಯೆ ಪರಿಹರಿಸುವ, ಮಂಡಳಿಯಲ್ಲಿ ನಡೆದ ಸಾವಿರಾರು ಕೋಟಿ ರು. ಭ್ರಷ್ಟಾಚಾರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದರು.

ನೈಜ ಕಟ್ಟಡ ಕಾರ್ಮಿಕರು ಸೌಲಭ್ಯ ವಂಚಿತರಾಗಿದ್ದು, ಕಟ್ಟಡ ನಿರ್ಮಾಣ ವೃತ್ತಿಗೆ ಸಂಬಂಧಿಸಿದ ಕಿಟ್ ವಿತರಣೆ ಮಾಡುವುದರಲ್ಲೇ ಮಂಡಳಿ ಹಣ ಪೋಲಾಗುತ್ತಿದೆಯೇ ಹೊರತು ಕಾರ್ಮಿಕರ ಕಲ್ಯಾಣಕ್ಕೆ ಅದು ಸದ್ಭಳಕೆಯಾಗುತ್ತಿಲ್ಲ. ದಾವಣಗೆರೆಗೆ ಸಚಿವರು ಬಂದಾಗ ಈ ಎಲ್ಲಾ ವಿಷಯಗಳ ಬಗ್ಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಟ್ಟಡ ಕಾರ್ಮಿಕರು ವೈದ್ಯಕೀಯ ವೆಚ್ಚಕ್ಕೆ ಮಾಡಿದ ಹಣವು ಲಕ್ಷಾಂತರ ರು. ಆಗಿದ್ದು, ಮಂಡಳಿ ಕಾರ್ಮಿಕರು ವೈದ್ಯಕೀಯ ವೆಚ್ಚಕ್ಕೆ ನೀಡುವ ಸಹಾಯಧನ ಕೇವಲ ಶೇ.20-30 ಮಾತ್ರ. ಕಾರ್ಮಿಕರಿಗೆ ಮಂಡಳಿಯಿಂದಲೇ ಇಎಸ್ಐ ಸೌಲಭ್ಯ ಕಲ್ಪಿಸಿದರೆ ಮಂಡಳಿ ಹಣ ಉಳಿಯುವ ಜತೆಗೆ ಇಎಸ್ಐ ಆಸ್ಪತ್ರೆಗಳೂ ಸದೃಢವಾಗುತ್ತವೆ. ಇಡೀ ಕುಟುಂಬಕ್ಕೆ ಆರೋಗ್ಯ ಸುರಕ್ಷೆ ನೀಡಿದಂತೆಯೂ ಆಗುತ್ತದೆ ಎಂದು ತಿಳಿಸಿದರು.

ಮೊಬೈಲ್‌ ಕ್ಲಿನಿಕ್‌ಗಳಿಂದ ಕಾರ್ಮಿಕರಿಗೆ ಯಾವುದೇ ಅನುಕೂಲವಂತೂ ಆಗಿಲ್ಲ. ಹಾಗಾಗಿ ಮಂಡಳಿಯಿಂದಲೇ ಇಎಸ್ಐ ಸೌಲಭ್ಯ ನೀಡಲಿ. ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಅರ್ಜಿಯನ್ನು ಎಸ್ಎಸ್‌ಪಿ ಪೋರ್ಟಲ್ ನಲ್ಲಿ ರದ್ಧುಪಡಿಸಿ, ಮಂಡಳಿ ವೆಬ್‌ಸೈಟ್‌ನಲ್ಲಿ ಅರ್ಜಿ ಹಾಕಲು ಅವಕಾಶ ನೀಡಬೇಕು. ಸಹಾಯಧನ ಮೊತ್ತ ಹೆಚ್ಚಿಸಬೇಕು. ಕಟ್ಟಡ ಕಾರ್ಮಿಕರ ಕುಟುಂಬ ಪಿಂಚಣಿಯನ್ನು ಕಾರ್ಮಿಕರು ನಿವೃತ್ತಿ ಹೊಂದುವ ಮೊದಲು ಮೃತಪಟ್ಟರೆ, ಅಂತಹ ಕುಟುಂಬಕ್ಕೂ ಪಿಂಚಣಿ ಜಾರಿಗೊಳಿಸಲಿ ಎಂದು ಆಗ್ರಹಿಸಿದರು.

ಸೌಲಭ್ಯ ಕೋರಿ ಸಲ್ಲಿಸಿದ ಅರ್ಜಿಗಳನ್ನು ವಿಳಂಬ ಮಾಡದೇ, 3 ತಿಂಗಳಲ್ಲೇ ಸಹಾಯಧನ ಹಣ ಸಂದಾಯವಾಗುವಂತೆ ಎಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಬೇಕು. ಮನೆ ಇಲ್ಲದ ನೈಜ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕಾಗಿ ಮಂಡಳಿಯಿಂದಲೇ 5 ಲಕ್ಷ ರು. ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಆದಿಲ್ ಖಾನ್‌, ಖಜಾಂಚಿ ಪವಿತ್ರಾ, ಸೈಯದ್ ಅಷ್ಫಾಕ್‌, ರವೀಂದ್ರ, ಚಂದ್ರಶೇಖರ, ಜಾಫರ್ ಷರೀಫ್‌, ಶಿಡ್ಲಪ್ಪ, ಅಫ್ರೋಜ್, ಬಾಷಾ, ಸಮೀರ್, ರೋಷನ್‌, ಫಾರೂಕ್‌, ಹನುಮಂತ, ನಾಗರಾಜ, ಮಹಾಂತೇಶ ಇತರರು ಇದ್ದರು.

PREV

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ