ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ಒದಗಿಸಿ: ಚೌಧರಿ

KannadaprabhaNewsNetwork |  
Published : May 17, 2025, 01:39 AM IST
ನಗರದ ಕಂದಗಲ್ ಶ್ರೀ ಹಣಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಂದ ಕುಂದು-ಕೊರತೆಗಳ ಸಭೆ ನಡೆಯಿತು. | Kannada Prabha

ಸಾರಾಂಶ

ನಾನಾ ಭಾಗಗಳಿಂದ ಆಗಮಿಸಿದ್ದ ಮಹಿಳೆಯರಿಂದ ಹಲವು ಬೇಡಿಕೆಗಳನ್ನು ಡಾ.ವಿಜಯಲಕ್ಷ್ಮಿ ಚೌಧರಿಗೆ ಸಲ್ಲಿಕೆ

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಿಳೆಯರ ಸಮಸ್ಯೆಯನ್ನು ಅತ್ಯಂತ ಶಾಂತಚಿತ್ತದಿಂದ ಆಲಿಸಿ, ಅವರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸಂಬಂಧಪಟ್ಟವರಿಗೆ ತಾಕೀತು ಮಾಡಿದರು.

ನಗರದ ಕಂದಗಲ್ ಶ್ರೀ ಹಣಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಸಹಯೋಗದಲ್ಲಿ ವಿಧವೆಯರ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಂಬಂಧಿಸಿದ ಸರ್ಕಾರಿ ಇಲಾಖೆಗಳಿಗೆ ತಮ್ಮ ಸಮಸ್ಯೆಗಳನ್ನು ಕೊಂಡೊಯ್ದು ತಮ್ಮ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು.

ವಿಜಯಪುರದ ಅನ್ನಪೂರ್ಣ ನಾಗನೂರು ಎಂಬುವವರು ಬದುಕಿಗೆ ಯಾವುದೇ ಸೂರಿಲ್ಲದೇ ತುಂಬಾ ತೊಂದರೆಯಾಗುತ್ತಿದ್ದು, ಸರ್ಕಾರಿ ಯೋಜನೆಯಡಿ ಯಾವುದಾದರೊಂದು ಮನೆ ಹಾಗೂ ಉದ್ಯೋಗ ಒದಗಿಸುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಆಶ್ರಯ ಯೋಜನೆ ಮನೆ ಹಾಗೂ ಉದ್ಯೋಗ ದೊರಕಿಸಬೇಕು ಎಂದು ಸೂಚನೆ ನೀಡಿದರು.

ರಬಕವಿ ಬನಹಟ್ಟಿಯಿಂದ ಬಂದಿದ್ದ ೨೦ ವರ್ಷದ ರೇಖಾ ತುಂಗಳ ಎಂಬುವವರು ತನಗೆ ಎರಡು ಮಕ್ಕಳು ಹಾಗೂ ವೃದ್ಧ ತಂದೆ ತಾಯಿ ಇದ್ದು, ಜೀವನ ನಿರ್ವಹಣೆಗೆ ಆಧಾರ ಕಲ್ಪಿಸಿಕೊಡುವಂತೆ ಕೋರಿದರು. ಆಕೆಯ ಮನವಿಗೆ ಸ್ಪಂದಿಸಿದ ಅಧ್ಯಕ್ಷೆ, ಪೋಷಕತ್ವ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆಯೂ ಉದ್ಯೋಗ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.

ವಿಜಯಪುರದ ಸವಿತಾ ಜಮಾದಾರ ಎಂಬುವವರು ಶ್ರವಣ ದೋಷ ಇರುವ ತಮ್ಮ ಮಗನ ಚಿಕಿತ್ಸೆಗೆ ಸಹಾಯ ಕೋರಿದರು. ಚಡಚಣದ ಬಾಕಿ ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯ ದಾಖಲೆಗಳು ಹಾಗೂ ತನ್ನ ಸಹೋದರಿಗೆ ಹೃದ್ರೋಗದ ಚಿಕಿತ್ಸೆಗೆ ಸಹಾಯ, ಕಲ್ಬುರ್ಗಿಯ ಜಯಶ್ರೀ ಕಲ್ಲೂರ ಅವರ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಸಹಾಯ, ಬಿಎಡ್, ಡಿಎಡ್ ಶಿಕ್ಷಣ ಹೊಂದಿರುವ ಸಿಂದಗಿಯ ಗುರುಸಿದ್ದಮ್ಮ ಹೊಸಮನಿಯವರು ಮನವಿ ಸಲ್ಲಿಸಿ, ಪತಿ ನಿಧನವಾಗಿದ್ದು, ಮೂರು ಮಕ್ಕಳಿಗೆ ಕಷ್ಟಸಾಧ್ಯವಾಗುತ್ತಿದೆ. ಕುಟುಂಬ ನಿರ್ವಹಣೆಗೆ ಉದ್ಯೋಗ ದೊರಕಿಸಬೇಕು ಎಂದು ಮನವಿ ಮಾಡಿದರು. ಅದರಂತೆ ಹಿಟ್ನಳ್ಳಿಯ ವಿಕಲಚೇತನೆ ಚನ್ನಮ್ಮ ಮೇತ್ರಿ ಎಂಬುವವರು ತಾನು ಬಿಎಡ್, ಎಂಎಡ್ ಓದಿದ್ದು, ನನಗೆ ಉದ್ಯೋಗ ನೀಡುವಂತೆ ಮನವಿ ನೀಡಿದರು. ಈ ವೇಳೆ ಸಲ್ಲಿಕೆಯಾದ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಿ, ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿತಿದ್ದ ಮಹಿಳೆಯೊಬ್ಬರು, ತಮ್ಮ ದೂರು ಸಲ್ಲಿಸಿ, ಪತಿಯ ನಿಧನದ ನಂತರ ಜಮೀನು ಮಾರಿದ್ದ ಮಾಲೀಕನು ಇದೀಗ ಜಮೀನಿನಲ್ಲಿ ಉಳುಮೆ ಮಾಡಲು ತಡೆಯೊಡ್ಡುತ್ತಿದ್ದಾನೆ. ನನಗೆ ಸಹಾಯ ಒದಗಿಸುವಂತೆ ಕೋರಿ ಬಂದ ಮನವಿಗೆ ನಾಗಲಕ್ಷ್ಮಿಯವರು ಸ್ಥಳದಲ್ಲಿದ್ದ ಸಂಬಂಧಿಸಿದ್ದ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಕೆ.ಚವ್ಹಾಣ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪುಂಡಲಿಕ ಮಾನವರ, ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ.ಬಿ.ಕುಂಬಾರ, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ರಾಠೋಡ, ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ