ಕಂಪ್ಲಿ: ರಾಜ್ಯದ ಪುರಸಭೆ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಮೂಲಸೌಕರ್ಯ ವಿಭಾಗದಡಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ನೀರು ಸರಬರಾಜು ನೌಕರರನ್ನು ಪೌರ ಕಾರ್ಮಿಕರ ಮಾದರಿಯಲ್ಲಿ ವಿಶೇಷ ನೇರ ನೇಮಕಾತಿ ಮೂಲಕ ಸೇವೆಗೆ ಪರಿಗಣಿಸಬೇಕು ಎಂದು ರಾಜ್ಯ ಪೌರ ನೀರು ಸರಬರಾಜು ನೌಕರರ ಮಹಾಸಂಘದ ತಾಲೂಕಾಧ್ಯಕ್ಷ ಎಚ್. ಭೀಮನಾಯಕ ಒತ್ತಾಯಿಸಿದರು.
ಪೌರ ಕಾರ್ಮಿಕರಿಗೆ ವಿಶೇಷ ನೇರ ನೇಮಕಾತಿ ಮೂಲಕ ಸೇವೆಯಲ್ಲಿ ಅವಕಾಶ ಕಲ್ಪಿಸಿರುವ ಮಾದರಿಯಲ್ಲಿಯೇ ಪೌರ ನೀರು ಸರಬರಾಜು ನೌಕರರಿಗೂ ವಿಶೇಷ ನೇರ ನೇಮಕಾತಿ ಕಲ್ಪಿಸಬೇಕು. ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರ ಸೇವೆ ಪರಿಗಣಿಸಿ ಅವರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ನೌಕರರ ಖಾತೆಗೆ ನೇರ ವೇತನ ಪಾವತಿಗೆ ಆಗ್ರಹ: ಹೊರಗುತ್ತಿಗೆ ನೌಕರರಿಗೆ ನೀಡಲಾಗುವ ವೇತನ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪಾವತಿಸಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆಯಾಗಿದೆ. ಈ ಬೇಡಿಕೆಗಳ ಈಡೇರಿಕೆಗಾಗಿ ಮಹಾಸಂಘದಿಂದ 2026ರ ಸೆ. 21ರಂದು ತುಮಕೂರಿನ ಶ್ರೀ ಸಿದ್ಧಗಂಗಾಮಠದಿಂದ ಬೆಂಗಳೂರಿನ ಮುಖ್ಯಮಂತ್ರಿ ನಿವಾಸದವರೆಗೆ ಪಾದಯಾತ್ರೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು.ಪಾದಯಾತ್ರೆಯ ಸಂದರ್ಭದಲ್ಲಿ ಪೌರಾಡಳಿತ ಸಚಿವರು ಹಾಗೂ ಮುಖ್ಯಮಂತ್ರಿಗಳು ನೌಕರರ ಬೇಡಿಕೆ ಈಡೇರಿಸುವ ಕುರಿತು ಭರವಸೆ ನೀಡಿದ್ದಾರೆ. ಆದರೆ, ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಬೇಕಾದರೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವುದು ಅಗತ್ಯವಾಗಿದೆ. ಹೀಗಾಗಿ ನೌಕರರ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿ ಹಾಗೂ ಪೌರಾಡಳಿತ ಸಚಿವರಿಗೆ ಪತ್ರ ಬರೆಯುವ ಮೂಲಕ ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಅವರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಎಚ್. ಹುಸೇನಪ್ಪ, ಉಪಾಧ್ಯಕ್ಷ ಟಿ. ರಂಗನಾಥ, ಕಾರ್ಯದರ್ಶಿ ಕೆ. ಸುಧೀರ್, ಸಹ ಕಾರ್ಯದರ್ಶಿ ಸುಧೀಂದ್ರಕುಮಾರ್, ಖಜಾಂಚಿ ಎಚ್. ನಾಗರಾಜ, ಪದಾಧಿಕಾರಿ ಜಾವೇದ್, ಪರಶುರಾಮ, ಉಮೇಶ, ಚಂದ್ರು, ಶಿವು ಸೇರಿದಂತೆ ಇತರರು ಉಪಸ್ಥಿತರಿದ್ದರು.