ಕಟ್ಟು ಪದ್ಧತಿಯಲ್ಲಿ ಒಂದು ಬೆಳೆಗೆ ನೀರು ಕೊಡಿ: ರಮೇಶ್‌ರಾಜು

KannadaprabhaNewsNetwork |  
Published : Aug 12, 2026, 01:45 AM IST
೧೧ಕೆಎಂಎನ್‌ಡಿ-೪ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಹಾಡ್ಯ ರಮೇಶ್‌ರಾಜು ಮಾತನಾಡಿದರು. | Kannada Prabha

ಸಾರಾಂಶ

ಜಲಾಶಯದಲ್ಲಿ ೧೦೮ ಅಡಿಯವರೆಗೆ ನೀರನ್ನಿಟ್ಟುಕೊಂಡು ಬೆಳೆಗಳಿಗೆ ಕೊಡದಿದ್ದರೆ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಮಳೆ ಆಧರಿಸಿ ಬೆಳೆಗಳಿಗೆ ನೀರು ಕೊಡುವ ನಿರ್ಧಾರ ಮಾಡುವುದಾಗಿ ಹೇಳುವ ಸಚಿವರು, ಶಾಸಕರಿಗೆ ಕೃಷಿಯ ಬಗ್ಗೆ ಜ್ಞಾನವೇ ಇಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ಕೃಷ್ಣರಾಜಸಾಗರ ಜಲಾಶಯದಲ್ಲಿರುವ ನೀರಿನಲ್ಲಿ ಒಂದು ಬೆಳೆಗೆ ನೀರು ಕೊಡುವುದಕ್ಕೆ ಯಾವುದೇ ತೊಂದರೆಯಿಲ್ಲ. ಕಟ್ಟುಪದ್ಧತಿಯಲ್ಲಾದರೂ ಬೆಳೆಗಳಿಗೆ ನೀರು ಹರಿಸಿ ರೈತರಿಗೆ ನೆರವಾಗುವಂತೆ ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಹಾಡ್ಯ ರಮೇಶ್‌ರಾಜು ಆಗ್ರಹಪಡಿಸಿದರು.

ಜಲಾಶಯದಲ್ಲಿ ೧೦೮ ಅಡಿಯವರೆಗೆ ನೀರನ್ನಿಟ್ಟುಕೊಂಡು ಬೆಳೆಗಳಿಗೆ ಕೊಡದಿದ್ದರೆ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಮಳೆ ಆಧರಿಸಿ ಬೆಳೆಗಳಿಗೆ ನೀರು ಕೊಡುವ ನಿರ್ಧಾರ ಮಾಡುವುದಾಗಿ ಹೇಳುವ ಸಚಿವರು, ಶಾಸಕರಿಗೆ ಕೃಷಿಯ ಬಗ್ಗೆ ಜ್ಞಾನವೇ ಇಲ್ಲ. ಆಗಸ್ಟ್ ಎರಡನೇ ವಾರ ಮುಗಿದು ಮೂರನೇ ವಾರಕ್ಕೆ ಕಾಲಿಟ್ಟಿದ್ದೇವೆ. ಇಷ್ಟೊತ್ತಿಗೆ ಭತ್ತದ ಸಸಿಮಡಿ ಮಾಡಿಟ್ಟುಕೊಂಡು ತಿಂಗಳಾಂತ್ಯಕ್ಕೆ ನಾಟಿ ಮುಗಿಯಬೇಕಿದೆ. ಆ ನಂತರದಲ್ಲಿ ನೀರು ಕೊಟ್ಟರೆ ಏನು ಪ್ರಯೋಜನ ಎಂದು ಸುದ್ದಿಗೋಷಗ್ಠಿಯಲ್ಲಿ ಪ್ರಶ್ನಿಸಿದರು.

ನೀರು ಕೊಡುವುದು ವಿಳಂಬವಾದರೆ ಭತ್ತದ ಸಸಿಮಡಿ, ನಾಟಿ ಎಲ್ಲವೂ ವಿಳಂಬವಾಗಿ ಭತ್ತದ ಬೆಳೆ ಚಳಿಗೆ ಸಿಲುಕಿ ರೋಗಬಾಧೆಗೆ ಒಳಗಾಗುವ ಸಾಧ್ಯತೆಗಳಿವೆ. ಇದರಿಂದ ಇಳುವರಿ ಕುಸಿತಗೊಂಡು ರೈತರು ನಷ್ಟಕ್ಕೊಳಗಾಗುವ ಸಾಧ್ಯತೆಗಳಿವೆ. ಈ ಕೂಡಲೇ ರಾಜ್ಯ ಸರ್ಕಾರ ಒಂದು ಬೆಳೆಗೆ ನೀರು ಹರಿಸುವ ನಿರ್ಧಾರ ಮಾಡಬೇಕು ಎಂದರು.

ಕೆಆರ್‌ಎಸ್‌ನಲ್ಲಿ ೮೦ ರಿಂದ ೯೦ ಅಡಿ ನೀರಿದ್ದ ಸಮಯದಲ್ಲೂ ಕೃಷಿಗೆ ನೀರನ್ನು ನೀಡದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಹಿಂದಿನ ವರ್ಷಗಳಲ್ಲಿ ೭೦ ಅಡಿ ನೀರಿದ್ದರೂ ಬೆಳೆಗಳಿಗೆ ನೀರು ಕೊಟ್ಟ ನಿದರ್ಶನಗಳಿವೆ. ಆದರೆ, ಕೃಷಿ ಮತ್ತು ನೀರಿನ ಬಳಕೆಯ ಜ್ಞಾನವಿಲ್ಲದ ಸರ್ಕಾರ ನೀರನ್ನು ಹರಿಸದೆ ಬೆಳೆಗಳನ್ನು ಒಣಗಿಸಿತು ಎಂದು ಆರೋಪಿಸಿದರು.

ಕಳೆದ ವರ್ಷ ಜೂನ್ ತಿಂಗಳಲ್ಲೇ ಅಣೆಕಟ್ಟು ಭರ್ತಿಯಾಗಿತ್ತು. ಆರು ತಿಂಗಳು ನೀರನ್ನು ಕಾಯ್ದುಕೊಳ್ಳಲಾಗದೆ ಬೇಸಿಗೆ ಬೆಳೆ ನಷ್ಟವಾಗುವಂತೆ ಮಾಡಿದರು. ಎಲ್‌ನಿನೋ ಪರಿಣಾಮದಿಂದ ಮಳೆ ಕ್ಷೀಣಿಸುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದರೂ ಮುಂಜಾಗ್ರತೆಯಾಗಿ ಕೆರೆ-ಕಟ್ಟೆಗಳನ್ನು ತುಂಬಿಸಿಕೊಳ್ಳಲಿಲ್ಲ. ಕೆರೆಯಲ್ಲಿ ತುಂಬಿರುವ ಹೂಳನ್ನು ತೆಗೆದು ಸಂಗ್ರಹ ಸಾಮರ್ಥ್ಯ ಹೆಚ್ಚಿಸಲಿಲ್ಲ. ಅಂತರ್ಜಲ ಹೆಚ್ಚಳಕ್ಕೂ ಪ್ರಾಮುಖ್ಯತೆ ನೀಡಲಿಲ್ಲ. ನೀರಿದ್ದಾಗ ಕಣ್ಮುಚ್ಚಿ ಕೂರುವುದು, ನೀರಿಲ್ಲದಿದ್ದಾಗ ಲೆಕ್ಕಾಚಾರ ಹಾಕುತ್ತಾ ಕೂರುವುದು ಸರ್ಕಾರ ಸಂಪ್ರದಾಯಬದ್ಧವಾಗಿ ಬೆಳೆಸಿಕೊಂಡು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ಕಣಿವೆ ಪ್ರದೇಶದಿಂದ ಸಿಗುವ ಹೆಚ್ಚುವರಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಮತ್ತು ಬಳಸಿಕೊಳ್ಳುವುದಕ್ಕೆ ನಮಗೆ ಅಧಿಕಾರವಿದೆ. ಆ ನಿಟ್ಟಿನಲ್ಲಿ ಮಿನಿ ಬ್ಯಾರೇಜ್‌ಗಳನ್ನಾದರೂ ನಿರ್ಮಿಸಿಕೊಳ್ಳುವುದಕ್ಕೆ ಯಾರೊಬ್ಬರೂ ಆಲೋಚಿಸುತ್ತಿಲ್ಲ. ಕನಿಷ್ಠ ೧೦ ರಿಂದ ೧೫ ಟಿಎಂಸಿಯಷ್ಟು ನೀರು ಸಂಗ್ರಹಿಟ್ಟುಕೊಳ್ಳುವ ಸಾಮರ್ಥ್ಯ ಬ್ಯಾರೇಜ್‌ಗಳಿಗಿದ್ದರೆ ಸಂಕಷ್ಟ ಕಾಲದಲ್ಲಿ ಅನುಕೂಲವಾಗಲಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣವಾಗುವವರೆಗೆ ಕಾದು ಕೂರುವುದರಲ್ಲಿ ಅರ್ಥವಿಲ್ಲ ಎಂದರು.

ಕೆಆರ್‌ಎಸ್‌ನಲ್ಲಿ ೧೦೮ ಅಡಿ ನೀರಿದೆ ಹಾಗೂ ಅಣೆಕಟ್ಟೆಗೆ ಇನ್ನೂ ನೀರು ಹರಿದುಬರುವ ಸಾಧ್ಯತೆಗಳಿವೆ. ಲಭ್ಯವಿರುವ ನೀರನ್ನು ವೈಜ್ಞಾನಿಕವಾಗಿ ಲೆಕ್ಕಾಚಾರ ಮಾಡಿ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅಲ್ಪಾವಧಿ ಭತ್ತದ ಬೆಳೆ ಬೆಳೆಯುವುದಕ್ಕೆ ಅಗತ್ಯವಿರುವ ನೀರನ್ನು ಹರಿಸುವ ಸ್ಪಷ್ಟ ಭರವಸೆ ನೀಡುವ ಜೊತೆಗೆ ರೈತರ ಬೆಳೆ ನಷ್ಟಕ್ಕೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ವೆಂಕಟೇಶ್, ಅಪ್ಪಾಜಿ, ಜಯರಾಮು, ನರಸಿಂಹ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನನ್ನನ್ನು ಮುಗಿಸಲು ಕಿಮ್ಮನೆ ಸುಪಾರಿ ನೀಡಲೂ ಸಿದ್ಧ: ಶಾಸಕ ಆರಗ ಜ್ಞಾನೇಂದ್ರ ಆರೋಪ
ರಾಜ್ಯ ಸರ್ಕಾರದ ಆಡಳಿತ ವೈಪಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ