ದುಡಿಯುವ ಕೈಗಳಿಗೆ ಕೆಲಸ ಕೊಡಿ, ಸಮರ್ಪಕ ಕೂಲಿ ಕೊಡಿ

KannadaprabhaNewsNetwork |  
Published : Sep 30, 2026, 02:30 AM IST
ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಸೋಮವಾರ ಸಿಪಿಐ(ಎಂ) ವತಿಯಿಂದ ಹಗರಿಬೊಮ್ಮನಹಳ್ಳಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ತುಂಗಭದ್ರಾ ನದಿಯ ಉಗಮ ಪ್ರದೇಶದಲ್ಲಿ ಸಾಕಷ್ಟು ಮಳೆಯಾಗದೇ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕ್ಷೀಣವಾಗಿದೆ

ಹಗರಿಬೊಮ್ಮನಹಳ್ಳಿ: ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್. ಅಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಹಣ ಬಿಡುಗಡೆ ಮಾಡುವ ಮೂಲಕ ಬರ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಆರಂಭಿಸಬೇಕು ಎಂದು ಆಗ್ರಹಿಸಿ ಸಿಪಿಐ(ಎಂ) ತಾಲೂಕು ಪದಾಧಿಕಾರಿಗಳು ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ತಾಲೂಕು ಕಾರ್ಯದರ್ಶಿ ಬಿ. ಮಾಳಮ್ಮ, ಮುಂಗಾರು ಮಳೆ ಅಭಾವದಿಂದಾಗಿ ತಾಲೂಕಿನಲ್ಲಿ ಸಂಪೂರ್ಣವಾಗಿ ಬೆಳೆ ನಾಶವಾಗಿದೆ. ಹಿಂಗಾರು ಮಳೆಯ ಭರವಸೆ ಕೂಡಾ ಇಲ್ಲದಂತಾಗಿದೆ. ನೀರಾವರಿ ಪ್ರದೇಶಗಳ ಕೊಳವೆ ಬಾವಿಗಳು ಕೂಡಾ ನೀರಿಗಾಗಿ ಹಪಹಪಿಸುವಂತಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

ತುಂಗಭದ್ರಾ ನದಿಯ ಉಗಮ ಪ್ರದೇಶದಲ್ಲಿ ಸಾಕಷ್ಟು ಮಳೆಯಾಗದೇ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕ್ಷೀಣವಾಗಿದೆ. ₹೧೭೦ ಕೋಟಿ ಅನುದಾನದಲ್ಲಿ, ತುಂಗಭದ್ರಾ ನದಿಯಿಂದ ಹಗರಿಬೊಮ್ಮನಹಳ್ಳಿ ಜಲಾಶಯಕ್ಕೆ ನೀರು ತರುವ ಪ್ರಯತ್ನಕ್ಕೂ ಹಿನ್ನಡೆಯಾಗಿದೆ. ಭೀಕರ ಬರಗಾಲ ತಾಂಡವವಾಡುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಎಕರೆಗೆ ₹೨೫೦೦ ಪರಿಹಾರ ನೀಡುವುದಾಗಿ ಘೋಷಿಸುವ ಮೂಲಕ ರೈತರ ಸಂಕಷ್ಟಗಳಿಗೆ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯದರ್ಶಿ ಆರ್.ಎಸ್. ಬಸವರಾಜ್ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಮೈಕ್ರೋ ಫೈನಾನ್ಸ್‌, ಮಹಿಳಾ ಸಂಘಗಳು ಮತ್ತು ಸಹಕಾರಿ ಸಂಘಗಳಲ್ಲಿನ ರೈತರ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಎಕರೆಗೆ ಕನಿಷ್ಠ ₹೩೦ ಸಾವಿರ ಪರಿಹಾರ ನೀಡಬೇಕು. ಕೃಷಿ ಕೂಲಿ ಕಾರ್ಮಿಕರ ವಲಸೆ ತಡೆಯಲು ಪ್ರತಿ ಪಂಚಾಯಿತಿ ಮಟ್ಟದಲ್ಲಿ ಕನಿಷ್ಠ ೨೦೦ ದಿನಗಳ ಉದ್ಯೋಗ ಖಾತ್ರಿ ಯೋಜನೆಯಡಿ ಶೀಘ್ರವಾಗಿ ಕೂಲಿ ಪಾವತಿಸುವ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.

ಎಲ್ಲ ಬಿಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳು ೧೫ ಅಗತ್ಯ ವಸ್ತುಗಳನ್ನು ಉಚಿತವಾಗಿ ಒದಗಿಸುವ ಜತೆಗೆ ಬಡ ಕುಟುಂಬಗಳ ಮಕ್ಕಳ ಶಾಲಾ-ಕಾಲೇಜುಗಳ ಶುಲ್ಕಕ್ಕೆ ಅಗತ್ಯ ವಿನಾಯಿತಿ ಒದಗಿಸಬೇಕು. ಕಳೆದ ೬ ತಿಂಗಳಿನಿಂದ ಸ್ಥಗಿತಗೊಂಡಿರುವ ವಿಧವಾ, ವೃದ್ಧಾಪ್ಯ ವೇತನ, ದೇವದಾಸಿ ಹಾಗೂ ಅಂಗವಿಕಲರ ಮಾಸಾಶನದ ಹಣವನ್ನು ಕೂಡಲೇ ಬಿಡುಗಡೆ ಮಾಡಿ ಅವರವರ ಖಾತೆಗೆ ಜಮಾ ಮಾಡಬೇಕು. ಜಾನುವಾರುಗಳಿಗೆ ನೀರು ಮತ್ತು ಮೇವಿನ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸಮಾವೇಶದ ನಂತರ ಉಪ ತಹಸೀಲ್ದಾರ್ ಶಿವಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಿಐಟಿಯು ಮುಖಂಡ ಎಸ್. ಜಗನ್ನಾಥ್, ಕೆ. ರಮೇಶ್, ಚಾಂದಬಿ, ಕೆ. ಅಂಜಿನಮ್ಮ, ಗುರುಶಾಂತಮ್ಮ, ತಟ್ನೆಮ್ಮ ಹಾಗೂ ತಿಮ್ಮಕ್ಕ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ದೇವದಾಸಿ ಮಹಿಳೆಯರ ಸಂಘ, ಅಂಗವಿಕಲರ ಒಕ್ಕೂಟ, ಒಂಟಿ ಮಹಿಳೆಯರ ಸಂಘ, ಕಟ್ಟಡ ಕಾರ್ಮಿಕರ ಸಂಘ ಹಾಗೂ ಇತರ ಸಂಘದ ಅಸಂಖ್ಯಾತ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿಯುವ ನೀರಿಗೆ ಅಭಾವ ಆಗದಿರಲಿ: ಜಿಲ್ಲಾಧಿಕಾರಿ ಸೂಚನೆ
ಪರೀಕ್ಷಾ ಪ್ರಾಧಿಕಾರ ನಿಯಮದಂತೆ ಪರೀಕ್ಷೆ ನಡೆಸಿ: ಡಿಸಿ