ಪ್ರಚೋದನಕಾರಿ ಹೇಳಿಕೆ ಆರೋಪ: ಶರಣ್‌ ಪಂಪ್‌ವೆಲ್‌ ಸಹಿತ ಐವರಿಗೆ ಸಮನ್ಸ್‌ ಜಾರಿ

KannadaprabhaNewsNetwork |  
Published : Dec 07, 2024, 12:30 AM IST
11 | Kannada Prabha

ಸಾರಾಂಶ

ಕಳೆದ ಸೆ.16ರಂದು ಬಂಟ್ವಾಳ ತಾಲೂಕಿನ ಬಿ‌.ಸಿ.ರೋಡ್‌ನಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿ ಈ ಸಮನ್ಸ್ ಜಾರಿಯಾಗಿದೆ ಎಂದು ತಿಳಿದುಬಂದಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಪ್ರಚೋದನಕಾರಿ ಹೇಳಿಕೆ ಆರೋಪದಡಿ ವಿಎಚ್‌ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಸಹಿತ ಸಂಘ ಪರಿವಾರದ ಐದು ಮುಖಂಡರಿಗೆ ಬಂಟ್ವಾಳದ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ಕೋರ್ಟ್ ಸಮನ್ಸ್ ಜಾರಿಗೊಳಿಸಿದ್ದು, ಡಿ.23ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.

ಕಳೆದ ಸೆ.16ರಂದು ಬಂಟ್ವಾಳ ತಾಲೂಕಿನ ಬಿ‌.ಸಿ.ರೋಡ್‌ನಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿ ಈ ಸಮನ್ಸ್ ಜಾರಿಯಾಗಿದೆ ಎಂದು ತಿಳಿದುಬಂದಿದೆ.ಬಂಟ್ವಾಳದ ಕಾಂಗ್ರೆಸ್ ಮುಖಂಡ ಮಹಮ್ಮದ್ ಶರೀಫ್ ವಿಎಚ್‌ಪಿಯ ಶರಣ್ ಪಂಪ್‌ವೆಲ್‌ಗೆ ಬಕ್ರೀದ್ ದಿನ ಸವಾಲು ಹಾಕಿದ್ದಕ್ಕೆ ಉತ್ತರವಾಗಿ ಬಿ.ಸಿ. ರೋಡಿನ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಬಜರಂಗದಳ- ವಿಎಚ್‌ಪಿ ಬಿ.ಸಿ. ರೋಡು ಚಲೋ ಕಾರ್ಯಕ್ರಮ‌ ನಡೆಸಿತ್ತು. ಇದರಲ್ಲಿ ಭಾಗವಹಿಸಿದ್ದ ಶರಣ್ ಪಂಪ್‌ವೆಲ್ ಹಾಗೂ ಭರತ್ ಕುಮ್ಡೇಲು ಮುಸ್ಲಿಂ ಸಮುದಾಯದ ಭಾವನೆಗೆ ಮತ್ತು ಧರ್ಮದ ಘನತೆಗೆ ಧಕ್ಕೆ ಉಂಟಾಗುವಂತೆ ಭಾಷಣ ಮಾಡಿದ್ದಾರೆ. ಇದರಿಂದ ಎರಡು ಕೋಮುಗಳ ನಡುವೆ ಸಂಘರ್ಷ ಸಾಧ್ಯತೆ ಎಂದು ಆರೋಪಿಸಿ ಮಹಮ್ಮದ್ ರಫೀಕ್ ಕೆಳಗಿನಪೇಟೆ ಎಂಬವರು ನೀಡಿದ ದೂರಿನಂತೆ ಶರಣ್ ಪಂಪ್‌ವೆಲ್ ಹಾಗೂ ಭರತ್ ಕುಮ್ಡೇಲು ಮತ್ತಿತರರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿತ್ತು.

ಇದೀಗ ನ್ಯಾಯಾಲಯ ಶರಣ್ ಪಂಪ್‌ವೆಲ್ , ಭರತ್ ಕುಮ್ಡೇಲು, ಸಚಿನ್ ಹಾಗೂ ಬಿಜೆಪಿ ನಾಯಕರಾದ ವಿಕಾಸ್ ಪುತ್ತೂರು, ಚೆನ್ನಪ್ಪ ಕೋಟ್ಯಾನ್ ಹೆಸರು ಉಲ್ಲೇಖಿಸಿ ಸಮನ್ಸ್‌ ಜಾರಿಗೊಳಿಸಿದೆ. ಖಂಡನೆ: ಐವರು ಹಿಂದೂ ಮುಖಂಡರ ವಿರುದ್ಧ ಕೇಸು ದಾಖಲಿಸಿರುವ ಬಂಟ್ವಾಳ‌ ಪೊಲೀಸರ ಕ್ರಮದ ಬಗ್ಗೆ ಆಕ್ರೋಶ ಕೇಳಿಬಂದಿದೆ.

ಪ್ರಚೋದನೆ ಮತ್ತು ಶಾಂತಿ ಕದಡಲು ಉದ್ದೇಶಿಸಿದ್ದ ಶರೀಫ್ ವಿರುದ್ಧ ಕೇಸು ದಾಖಲಿಸುವ ಬದಲು, ಹಿಂದೂ ಮುಖಂಡರ ಮೇಲೆ ಎಫ್‌ಐಆರ್ ದಾಖಲಿಸಿದ್ದರು, ಇದೀಗ ಅವರ ಜೊತೆ ಬಿಜೆಪಿ ನಾಯಕರಾದ ವಿಕಾಸ್ ಪುತ್ತೂರು, ಚೆನ್ನಪ್ಪ ಕೋಟ್ಯಾನ್ ಹಾಗು ವಿಶ್ವ ಹಿಂದೂ ಪರಿಷತ್ತಿನ ಸಚಿನ್ ಮೆಲ್ಕಾರ್ ಹೆಸರುಗಳನ್ನೂ ಸೇರಿಸಿ, ಎಫ್ ಐಆರ್ ದಾಖಲಿಸಿ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದೆ. ದ್ವೇಷ ಮತ್ತು ಟಾರ್ಗೆಟ್ ಮಾಡಿ ಎಫ್‌ಐಆರ್ ದಾಖಲಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ ಎಂದು ಸಂಘಪರಿವಾರ ಪ್ರಮುಖರು ಹೇಳಿದ್ದಾರೆ.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು