ಪ್ರಕರಣದ ತನಿಖೆ ಸಿಬಿಐಗೆ ವಹಿಸಿ ವರದಿ ನೀಡಿ, ನ್ಯಾಯ ಒದಗಿಸಬೇಕು : ಪಿಎಸ್‌ಐ ಪರಶುರಾಮ ಪತ್ನಿ ಶ್ವೇತಾ ಆಗ್ರಹ

KannadaprabhaNewsNetwork |  
Published : Aug 06, 2024, 12:40 AM ISTUpdated : Aug 06, 2024, 12:38 PM IST
05ಕೆಪಿಆರ್‌ಸಿಆರ್‌ 01: ಮೃತ ಪಿಎಸ್‌ಐ ಪರಶುರಾಮ ಪತ್ನಿ ಶ್ವೇತಾ | Kannada Prabha

ಸಾರಾಂಶ

ನಮಗೆ ಉಂಟಾಗಿರುವ ನೋವು ಬೇರೆಯವರಿಗೆ ಆಗಬಾರದು ಅದಕ್ಕಾಗಿ ಪ್ರಕರಣದ ತನಿಖೆ ಸಿಬಿಐಗೆ ವಹಿಸಿ ಆದಷ್ಟು ಬೇಗ ತನಿಖೆ ನಡೆಸಿ ವರದಿಯನ್ನು ನೀಡಿ, ನ್ಯಾಯ ಒದಗಿಸಬೇಕು, ಕೂಡಲೇ ಶಾಸಕ ಚೆನ್ನಾರೆಡ್ಡಿ ತುನ್ನೂರು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

 ರಾಯಚೂರು :  ಯಾದಗಿರಿ ಪಿಎಸ್‌ಐ ಪರಶುರಾಮ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಅದನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಮೃತ ಪಿಎಸ್‌ಐ ಪತ್ನಿ ಶ್ವೇತಾ ಆಗ್ರಹಿಸಿದರು.

ಸ್ಥಳೀಯ ಐಡಿಎಸ್‌ಎಂಟಿ ಬಡಾವಣೆಯಲ್ಲಿರುವ ತಮ್ಮ ತವರು ಮನೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಐಡಿ ವರದಿ ಮೇಲೆ ನನಗೆ ನಂಬಿಕೆಯಿಲ್ಲ, ಮುಂದಿನ ದಿನಗಳಲ್ಲಿ ಏನಾದರೂ ಆಗಬಹುದು, ಇದೀಗ ಯಾದಗಿರಿ ಪಿಎಸ್ಐ ಸಾವಾಗಿದೆ. ನಾಳೆ ಬೀದರ್, ಧಾರವಾಡ ಪೊಲೀಸ್‌ ಅಧಿಕಾರಿಗಳ ಸಾವಾಗಬಹುದು. ನಮ್ಮ ಕುಟುಂಬಕ್ಕೆ ಆಗಿರುವ ಅನ್ಯಾಯ ಮತ್ತೊಂದು ಕುಟುಂಬದಲ್ಲಿ ಘಟಿಸಕೂಡದು. ನಮಗೆ ಉಂಟಾಗಿರುವ ನೋವು ಬೇರೆಯವರಿಗೆ ಆಗಬಾರದು ಅದಕ್ಕಾಗಿ ಪ್ರಕರಣದ ತನಿಖೆ ಸಿಬಿಐಗೆ ವಹಿಸಿ ಆದಷ್ಟು ಬೇಗ ತನಿಖೆ ನಡೆಸಿ ವರದಿಯನ್ನು ನೀಡಿ, ನ್ಯಾಯ ಒದಗಿಸಬೇಕು, ಕೂಡಲೇ ಶಾಸಕ ಚೆನ್ನಾರೆಡ್ಡಿ ತುನ್ನೂರು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಶಾಸಕರಿಗೆ ದುಡ್ಡು ಕೊಟ್ಟಿಲ್ಲವೆಂದರೆ ಡಿವೈಎಸ್ಪಿ, ಸಿಪಿಐ, ಎಸ್ಪಿ ಸೇರಿ ಪೊಲೀಸ್‌ ಅಧಿಕಾರಿಗಳಿಗೆ ಪೋಸ್ಟಿಂಗ್‌ ಕೊಡಲ್ಲ, ದುಡ್ಡು ಕೊಟ್ಟಿಲ್ಲವೆಂದರೆ ದೂರದ ಪ್ರದೇಶಕ್ಕೆ ವರ್ಗಾಯಿಸುತ್ತಾರೆ. ಶಾಸಕರು ಡಿಮ್ಯಾಂಡ್‌ ಮಾಡಿದಷ್ಟು ಹಣ ನೀಡಬೇಕು. ಹೆರಿಗೆ ಸಮಯವಿದೆ ಎಂದು ಎಷ್ಟು ಮನವಿ ಮಾಡಿದರು ಸಹ ಶಾಸಕರು ಒಪ್ಪಿಲ್ಲ, ಪೊಲೀಸ್‌ ಇಲಾಖೆಯವರೇ ಬೆಂಬಲಕ್ಕೆ ನಿಂತಿಲ್ಲ ಎಂದು ದೂರಿದರು.

ನಮ್ಮ ಕುಟುಂಬದಲ್ಲಿ ಆದಂತಹ ಘಟನೆ ಯಾರಿಗೂ ಆಗಬಾರದು, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರು ಇಂತಹ ವ್ಯವಸ್ಥೆ ಇರಬಾರದು. ಪಿಎಸ್‌ಐಗೆ ಕನಿಷ್ಠ 2-3 ವರ್ಷ ಒಂದೇ ಕಡೆ ಸೇವೆ ಮಾಡಲು ಅವಕಾಶ ನೀಡಬೇಕು. ಲಂಚ ಕೊಟ್ಟಿಲ್ಲವೆಂದರು ಅವರನ್ನು ಆರೇಳು ತಿಂಗಳಲ್ಲಿ ವರ್ಗಾವಣೆ ಮಾಡುವ ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು. ನಮ್ಮ ಕುಟುಂಬಕ್ಕೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದಾಗಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎಂದರು.

ಪತಿ ನನ್ನಿಂದ ದೂರವಾಗಿ ನೌಕರಿ ಸಿಕ್ಕರೇ ಅದನ್ನು ಪಡೆದು ಏನು ಮಾಡಲಿ, ನನ್ನ ಮಕ್ಕಳಿಗೆ ತಂದೆ ಸ್ಥಾನ ತುಂಬಲು ಆಗುತ್ತದೆಯೇ? ನನಗೆ ನ್ಯಾಯ ಸಿಗಬೇಕು. ಶಾಸಕರು ರಾಜಿನಾಮೆ ನೀಡಬೇಕು, ಸಾರ್ವಜನಿಕವಾಗಿ ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ಮೃತ ಪಿಎಸ್ಐ ಪರಶುರಾಮ ಪತ್ನಿ ಶ್ವೇತಾ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ
ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ