ಪಿಎಸ್‌ಐಗೆೆ ಮಾಜಿ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ: ಪುತ್ರಿ ಪರವಾಗಿ ತಂದೆ ಕ್ಷಮೆಯಾಚನೆ

KannadaprabhaNewsNetwork |  
Published : Aug 15, 2026, 02:30 AM IST
೧೪ಕೆಎಂಎನ್‌ಡಿ-೧ಮಾಜಿ ಶಾಸಕ ಸುರೇಶ್‌ಗೌಡ ಪುತ್ರಿ ಐಶ್ವರ್ಯ | Kannada Prabha

ಸಾರಾಂಶ

ಭೀಮನ ಅಮಾವಾಸ್ಯೆಯ ದಿನ ನನ್ನ ಮಗಳು ಇಬ್ಬರು ಸಣ್ಣ ಮಕ್ಕಳೊಂದಿಗೆ ಆರತಿ ಉಕ್ಕಡ ದೇವಸ್ಥಾನಕ್ಕೆ ತೆರಳಿದ್ದಳು. ಆ ವೇಳೆ ಸಬ್‌ಇನ್ಸ್‌ಪೆಕ್ಟರ್‌ವೊಬ್ಬರು ಒಳಗೆ ಬಿಡಲಿಲ್ಲ. ಆಗ ಮಾತಿಗೆ ಮಾತು ಬೆಳೆದು ಈ ಅಹಿತಕರ ಘಟನೆ ನಡೆದಿರಬಹುದು. ಸ್ಥಳದಲ್ಲಿ ವಾಸ್ತವವಾಗಿ ಏನು ನಡೆಯಿತು ಎಂಬುದು ನನಗೆ ಪೂರ್ಣವಾಗಿ ತಿಳಿದಿಲ್ಲ. ಘಟನೆಯಲ್ಲಿ ನನ್ನ ಮಗಳ ಕಡೆಯ ದೂರನ್ನೂ ಪೊಲೀಸರು ಆಲಿಸಬೇಕಿತ್ತು. ಅವಳು ಆ ಕ್ಷಣದಲ್ಲಿ ತಾಳ್ಮೆ ಕಳೆದುಕೊಂಡಿರಬಹುದು. ಆದರೆ, ನಾವು ಸಾರ್ವಜನಿಕ ಜೀವನದಲ್ಲಿರುವವರು, ಈ ರೀತಿ ಎಂದಿಗೂ ನಡೆದುಕೊಳ್ಳಬಾರದು. ಹೀಗಾಗಿ ನನ್ನ ಮಗಳ ವರ್ತನೆಗಾಗಿ ನಾನೇ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಆರತಿ ಉಕ್ಕಡದ ದೇವಸ್ಥಾನದಲ್ಲಿ ಶ್ರೀ ಅಹಲ್ಯಾದೇವಿಯ ದರ್ಶನ ಪಡೆಯಲು ಬಂದಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್‌ಗೌಡ ಪುತ್ರಿ ಐಶ್ವರ್ಯ ಮಹಿಳಾ ಪಿಎಸ್‌ಐವೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.

ಮಂಡ್ಯ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಸವಿತಾ ಬಿ.ಪೊಲೀಸ್ ಪಾಟೀಲ ಎಂಬುವರೇ ಕಪಾಳಮೋಕ್ಷಕ್ಕೆ ಒಳಗಾದವರು. ಗರ್ಭಗುಡಿ ಪ್ರಾಂಗಣದಲ್ಲಿ ಕರ್ತವ್ಯದಲ್ಲಿದ್ದ ತಮ್ಮ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಐಶ್ವರ್ಯ ವಿರುದ್ಧ ಪಾಂಡವಪುರ ತಾಲೂಕು ಕ್ಯಾತನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ನಡೆದಿದ್ದೇನು?:

ಪಿಎಸ್‌ಐ ಸವಿತಾ ಅವರು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಆ.೧೨ರಂದು ಆರತಿ ಉಕ್ಕಡದ ಗರ್ಭಗುಡಿ ಪ್ರಾಂಗಣದಲ್ಲಿ ಕರ್ತವ್ಯಕ್ಕೆ ನೇಮಕಗೊಂಡಿದ್ದರು. ಸಂಜೆ ೪.೩೦ರ ಸಮಯಕ್ಕೆ ಮದ್ದೂರು ಪಿಎಸ್‌ಐ ಶೇಖರ್ ಒಬ್ಬ ಗಂಡಸು ಮತ್ತು ಇಬ್ಬರು ಹೆಂಗಸರನ್ನು ದೇವಸ್ಥಾನದ ಬಲಬದಿಗೆ ಕರೆದುಕೊಂಡು ಬಂದರು. ನಂತರ ಆ ಮೂವರು ಭಕ್ತಾಧಿಗಳು ಹೋಗುತ್ತಿದ್ದ ಸಾಲಿನ ವಿರುದ್ಧ ದಿಕ್ಕಿನಲ್ಲಿ ತೆರಳುತ್ತಿದ್ದಾಗ ಸವಿತಾ ಅವರು ತಡೆದಿದ್ದಾರೆ. ಈ ಸಮಯದಲ್ಲಿ ಐಶ್ವರ್ಯ ನಾನು ಗರ್ಭಗುಡಿಯ ಒಳಗೆ ಹೋಗಬೇಕು. ನನ್ನನ್ನು ನೇರವಾಗಿ ಒಳಗೆ ಹೋಗಲು ಬಿಡಿ ಎಂದು ಕೇಳಿದ್ದಾಳೆ. ಜನಸಂದಣಿ ಇರುವುದರಿಂದ ತಕ್ಷಣ ಒಳಗೆ ಬಿಡಲಾಗುವುದಿಲ್ಲ. ಸ್ವಲ್ಪ ಸಮಯ ಕಾಯುವಂತೆ ತಿಳಿಸಿದ್ದಾಗಿ ಸವಿತಾ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಆಗ ಐಶ್ವರ್ಯ ನಾನು ಕಾಯಲು ಸಾಧ್ಯವಿಲ್ಲ. ನಾನು ಯಾರೆಂದು ನಿನಗೆ ಗೊತ್ತೆ. ನಾನು ಒಬ್ಬ ಪೊಲಿಟಿಕಲ್ ಲೀಡರ್ ಮಗಳು ಎಂದೆಲ್ಲಾ ಗಲಾಟೆ ಮಾಡಿದಳು. ನೀವು ಯಾರಾದರೂ ಸರಿ. ಸ್ವಲ್ಪ ಸಮಯ ಕಾಯಲೇಬೇಕು. ಈಗ ಒಳ ಹೋಗಲು ಬಿಡುವುದಿಲ್ಲ ಎಂದು ಸವಿತಾ ಸ್ಪಷ್ಟವಾಗಿ ಹೇಳಿದ್ದಾರೆ.

ಇದರಿಂದ ಕ್ರೋಧಗೊಂಡ ಐಶ್ವರ್ಯ ಏರು ಧ್ವನಿಯಲ್ಲಿ ಮಾತನಾಡುತ್ತಾ ಅವಾಚ್ಯಶಬ್ಧಗಳಿಂದ ಸವಿತಾರನ್ನು ನಿಂದಿಸಿದ್ದಾಳೆ. ಆಗ ಅಲ್ಲಿಗೆ ಬಂದ ಇನ್ಸ್‌ಪೆಕ್ಟರ್ ಲಕ್ಷ್ಮೀ ಅವರಿಗೆ ಅವಳನ್ನು ಹೇಗೆ ಒಳಗೆ ಬಿಟ್ಟೆ. ನನ್ನನ್ನು ಏಕೆ ಇಲ್ಲಿ ನಿಲ್ಲಿಸಿದ್ದೀಯಾ ಎಂದು ಪ್ರಶ್ನಿಸುತ್ತಾ, ಸವಿತಾ ಕಡೆ ನೋಡುತ್ತಾ ನಿನಗೆ ಎಲ್ಲಿ ಬುದ್ದಿ ಕಲಿಸಬೇಕೆಂಬುದು ನನಗೆ ಗೊತ್ತೆಂದು ಹೇಳುತ್ತಾ ಏಕಾಏಕಿ ಕಪಾಳಮೋಕ್ಷ ಮಾಡಿದಳು. ಆ ಸಮಯದಲ್ಲಿ ನನ್ನನ್ನು ನಾನು ರಕ್ಷಿಸಿಕೊಳ್ಳಲು ನನ್ನ ಕೈ ಅಡ್ಡ ಮಾಡಿ ಅವಳ ಮುಖಕ್ಕೆ ತಳ್ಳಿದೆನು ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ನಾನು ಒಬ್ಬ ಎಂಎಲ್‌ಎ ಮಗಳು, ಡಿವೈಎಸ್ಪಿ ಹೆಂಡತಿ. ನನ್ನನ್ನೇ ಕಾಯಿಸುತ್ತೀಯಾ. ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ನಿನಗೊಂದು ಗತಿ ಕಾಣಿಸುತ್ತೇನೆ ಎಂದು ಐಶ್ವರ್ಯ ಬೆದರಿಕೆ ಹಾಕಿದಳು. ತಕ್ಷಣವೇ ಅಲ್ಲಿಗೆ ಬಂದ ಇತರೆ ಪೊಲೀಸ್ ಅಧಿಕಾರಿಗಳು ಏಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಕೇಳಿದಾಗ ಅವರನ್ನೂ ಏಕವಚನದಲ್ಲಿ ನಿಂದಿಸಿದಳು ಎಂದು ತಿಳಿಸಿದ್ದಾರೆ.

ಕರ್ತವ್ಯದಲ್ಲಿದ್ದ ನನಗೆ ಕಪಾಳಮೋಕ್ಷ ಮಾಡಿ ಅವಾಚ್ಯಶಬ್ಧಗಳಿಂದ ನಿಂದಿಸಿರುವ ಐಶ್ವರ್ಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪಾಂಡವಪುರ ತಾಲೂಕು ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಸವಿತಾ ಅವರು ದೂರು ಸಲ್ಲಿಸಿದ್ದಾರೆ.

-------

ಪುತ್ರಿ ಪರವಾಗಿ ತಂದೆ ಕ್ಷಮೆಯಾಚನೆ

ಭೀಮನ ಅಮಾವಾಸ್ಯೆಯ ದಿನ ನನ್ನ ಮಗಳು ಇಬ್ಬರು ಸಣ್ಣ ಮಕ್ಕಳೊಂದಿಗೆ ಆರತಿ ಉಕ್ಕಡ ದೇವಸ್ಥಾನಕ್ಕೆ ತೆರಳಿದ್ದಳು. ಆ ವೇಳೆ ಸಬ್‌ಇನ್ಸ್‌ಪೆಕ್ಟರ್‌ವೊಬ್ಬರು ಒಳಗೆ ಬಿಡಲಿಲ್ಲ. ಆಗ ಮಾತಿಗೆ ಮಾತು ಬೆಳೆದು ಈ ಅಹಿತಕರ ಘಟನೆ ನಡೆದಿರಬಹುದು. ಸ್ಥಳದಲ್ಲಿ ವಾಸ್ತವವಾಗಿ ಏನು ನಡೆಯಿತು ಎಂಬುದು ನನಗೆ ಪೂರ್ಣವಾಗಿ ತಿಳಿದಿಲ್ಲ. ಘಟನೆಯಲ್ಲಿ ನನ್ನ ಮಗಳ ಕಡೆಯ ದೂರನ್ನೂ ಪೊಲೀಸರು ಆಲಿಸಬೇಕಿತ್ತು. ಅವಳು ಆ ಕ್ಷಣದಲ್ಲಿ ತಾಳ್ಮೆ ಕಳೆದುಕೊಂಡಿರಬಹುದು. ಆದರೆ, ನಾವು ಸಾರ್ವಜನಿಕ ಜೀವನದಲ್ಲಿರುವವರು, ಈ ರೀತಿ ಎಂದಿಗೂ ನಡೆದುಕೊಳ್ಳಬಾರದು. ಹೀಗಾಗಿ ನನ್ನ ಮಗಳ ವರ್ತನೆಗಾಗಿ ನಾನೇ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೀಲ್ಸ್ ಕಾಲದಲ್ಲೂ ಚಿತ್ರಮಂದಿರ ನಿರ್ಮಾಣ ಧೈರ್ಯದ ಕೆಲಸ
ಆಟೋ ನಿಲ್ದಾಣ ನಿರ್ಮಾಣ ಸಾಮಗ್ರಿಗಳ ತೆರವು: ಆಟೋ ಚಾಲಕರ ಸಂಘ ಆಕ್ರೋಶ