ಕನ್ನಡಪ್ರಭ ವಾರ್ತೆ ರಾಯಚೂರು
ಯಾದಗಿರಿ ಪಿಎಸ್ಐ ಪರಶುರಾಮ ಸಾವಿಗೆ ಶಾಸಕ ಚನ್ನಾರೆಡ್ಡಿ ಲಂಚದ ಬೇಡಿಕೆ ಕಾರಣ ಎಂದು ಆರೋಪಿಸಿ, ಶಾಸಕ ಹಾಗೂ ಅವರ ಪುತ್ರ ಪಂಪನಗೌಡ (ಸನ್ನಿಗೌಡ) ಇವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಘಟನೆ ವಿರುದ್ಧ ಘೋಷಣೆ ಕೂಗಿದರು. ಶಾಸಕ ಚನ್ನಾರೆಡ್ಡಿ ವೇಷ ಹಾಕಿ ಭಿಕ್ಷೆ ಬೇಡಿ ಹಣ ಸಂಗ್ರಹಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ನಂತರ ಮುಖ್ಯ ರಸ್ತೆ, ವೃತ್ತದ ಮುಖಾಂತರ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆ ನಡೆಸಿ ಜಿಲ್ಲಾಡಳಿತ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಿದರು. ಪಿಎಸ್ಐ ಪರಶುರಾಮ ಅವರು ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶಾಸಕ ಚನ್ನಾರೆಡ್ಡಿ ಹಾಗೂ ಮಗ ಪಂಪನಗೌಡ ಹಣದ ಬೇಡಿಕೆ ಇಟ್ಟು ಮಾನಸಿಕ ಕಿರುಕುಳ ನೀಡಿದ್ದರು. ಹಣ ನೀಡಲು ನಿರಾಕರಿಸಿದ್ದಕ್ಕಾಗಿ ಬೇರೆಡೆ ವರ್ಗಾಯಿಸುವುದಾಗಿ ಬೆದರಿಕೆ ಹಾಕಿದ್ದರಿಂದ ಖಿನ್ನತೆಗೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಆಪಾದಿಸಿದರು.
ಯಾದಗಿರಿ ಪೊಲೀಸ್ ಠಾಣೆಗೆ ನಿಯೋಜನೆಗೊಂಡು ಕೇವಲ 7 ತಿಂಗಳಾಗಿತ್ತು. ಪರಶುರಾಮ ಹಣ ನೀಡಲು ನಿರಾಕರಿಸಿದ್ದಕ್ಕೆ ವರ್ಗಾವಣೆಗೆ ಮುಂದಾಗಿದ್ದರು. ಒಂದು ಸ್ಥಳದಲ್ಲಿ ಕನಿಷ್ಠ 2 ವರ್ಷವಾದರೂ ಕರ್ತವ್ಯ ನಿರ್ವಹಿಸಿರಬೇಕು. ವರ್ಗಾವಣೆಗೆ ಬೆದರಿಕೆ ಹಾಕಿದ್ದು ಖಂಡನೀಯ. ಹಣದ ಬೇಡಿಕೆ ಇಟ್ಟಿದ್ದರೂ ಮೇಲಾಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.ಪರಶುರಾಮ ಸಾವಿಗೆ ಶಾಸಕ ಹಾಗೂ ಪುತ್ರನ ವಿರುದ್ಧ ದೂರು ದಾಖಲಾದರೂ ಪೊಲೀಸರು ಬಂಧಿಸಿಲ್ಲ. ಘಟನೆ ನಡೆದು 2 ದಿನಗಳಾದರೂ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದ್ದು ಖಂಡನೀಯ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲೆ ದೌರ್ಜನ್ಯ, ಕೊಲೆ, ಅತ್ಯಾಚಾರ ನಡೆದರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ತಿಳಿಸಿದ್ದು, ಈಗ ಅವರ ಹೇಳಿಕೆಯಂತೆ ಇಬ್ಬರನ್ನು ಹೊಣೆ ಮಾಡಬೇಕು ಹಾಗೂ ವರ್ಗಾವಣೆ ಬೆದರಿಕೆ ಹಾಕಿ ಹಣ ಕೇಳಿದ್ದ ಶಾಸಕ ಚನ್ನಾರೆಡ್ಡಿ ಹಾಗೂ ಪುತ್ರ ಪಂಪನಗೌಡರನ್ನು ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡರಾದ ವಿಶ್ವನಾಥ ಪಟ್ಟಿ, ನರಸಿಂಹಲು ನೆಲಹಾಳ, ಕೆ.ಇ ಕುಮಾರ, ಇ.ಕುಮಾರಸ್ವಾಮಿ, ಮಾರುತಿ ಚಿಕ್ಕಸುಗೂರು, ಆಂಜನೇಯ, ಆರ್. ಸಿ ವೆಂಕಟೇಶ, ಸಿದ್ದಮ್ಮ ವಸಂತ, ಪಾರ್ಥಸಾರತಿ, ಲಕ್ಷ್ಮಣ ಹುಲಿಗಾರ,ಅರವಿಂದ ಪಟ್ಟಿ,ವಿನಾಯಕ,ಗೌತಮ್,ನಾಗರಾಜ, ಸಿದ್ದಪ್ಪ ಕೆ. ಸೇರಿ ಅನೇಕರು ಇದ್ದರು.