ಪಿಎಸ್‌ಐ ಅಮಾನತು: ವಕೀಲರ ಹೋರಾಟ ಅಂತ್ಯ

KannadaprabhaNewsNetwork |  
Published : Feb 22, 2024, 01:48 AM IST
21ಕೆಆರ್ ಎಂಎನ್‌ 4.ಜೆಪಿಜಿರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನಾನಿರತ ವಕೀಲರು ವಿಕ್ಟರಿ ಚಿಹ್ನೆ ಪ್ರದರ್ಶಿಸಿ ಸಂಭ್ರಮಿಸಿದರು. | Kannada Prabha

ಸಾರಾಂಶ

ರಾಮನಗರ: ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಸೈಯದ್ ತನ್ವೀರ್ ಹುಸೇನ್ ಅವರನ್ನು ಕರ್ತವ್ಯದಿಂದ ಅಮಾನತುಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ವಕೀಲರು ಕಳೆದ 12 ದಿನಗಳಿಂದ ನಡೆಸುತ್ತಿದ್ದ ಹೋರಾಟವನ್ನು ಬುಧವಾರ ಕೈಬಿಟ್ಟರು.

ರಾಮನಗರ: ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಸೈಯದ್ ತನ್ವೀರ್ ಹುಸೇನ್ ಅವರನ್ನು ಕರ್ತವ್ಯದಿಂದ ಅಮಾನತುಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ವಕೀಲರು ಕಳೆದ 12 ದಿನಗಳಿಂದ ನಡೆಸುತ್ತಿದ್ದ ಹೋರಾಟವನ್ನು ಬುಧವಾರ ಕೈಬಿಟ್ಟರು.

ವಿಧಾನಸಭೆ ಅಧಿವೇಶನದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ರವರು ಪಿಎಸ್‌ಐ ತನ್ವೀರ್ ಅವರನ್ನು ಅಮಾನತು ಪಡಿಸುತ್ತಿರುವುದಾಗಿ ಘೋಷಿಸುತ್ತಿದ್ದಂತೆ ಚಳವಳಿಯಲ್ಲಿ ಭಾಗಿಯಾಗಿದ್ದ ವಕೀಲರು ಸಂಭ್ರಮಿಸಿದರು.

ಅಲ್ಲದೆ, ವಕೀಲರ ಸಮೂಹ ತಮ್ಮ ಗೆಲುವನ್ನು ಮಹಾತ್ಮಗಾಂಧಿ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅರ್ಪಿಸಿದರು. ನ್ಯಾಯಕ್ಕಾಗಿ ಆಗ್ರಹಿಸಿ ಗುರುವಾರ ವಕೀಲರ ಸಮೂಹ ವಿಧಾನಸೌಧ ಚಲೋ ನಡೆಸಲು ತೀರ್ಮಾನಿಸಿದ್ದರು. ಗೃಹ ಸಚಿವರು ಪಿಎಸ್‌ಐ ಅಮಾನತು ಘೋಷಿಸಿದ ಹಿನ್ನೆಲೆಯಲ್ಲಿ ವಕೀಲರು ಪ್ರತಿಭಟನೆಯನ್ನು ಮೊಟಕುಗೊಳಿಸಿದರು. ಅಲ್ಲದೆ, ವಿಧಾನಸೌಧ ಚಲೋ ಕಾರ್ಯಕ್ರಮವನ್ನೂ ಕೈಬಿಡಲಾಗಿದೆ ಎಂದು ಘೋಷಿಸಿದರು.

ವಕೀಲರ ಸಂಘದ ಆವರಣದಲ್ಲಿ ಫೆ.12ರಿಂದ ಆರಂಭವಾದ ವಕೀಲರ ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಫೆ.19ರಂದು ಸ್ಥಳಾಂತರಗೊಂಡು ಅಹೋರಾತ್ರಿ ಹೋರಾಟವಾಗಿ ಬದಲಾಯಿತು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಕೀಲರು ದಿಗ್ಬಂಧನ ವಿಧಿಸಿದರು.

ದಿನದಿಂದ ದಿನಕ್ಕೆ ತೀವ್ರಗೊಂಡ ವಕೀಲರ ಹೋರಾಟ, ರಾಜ್ಯದ ಗಮನ ಸೆಳೆದಿತ್ತು. ಮಾಜಿ ಸಿಎಂ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋರ್‌, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರು ಧರಣಿನಿರತ ವಕೀಲರನ್ನು ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.

ಈ ವಿಚಾರ ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ಪ್ರತಿಧ್ವನಿಸಿತ್ತು. ಹೋರಾಟದ ಕಾವು ಹೆಚ್ಚುತ್ತಿರುವುದನ್ನು ಗಮನಿಸಿದ ಗೃಹ ಸಚಿವರು, ಕೊನೆಯದಾಗಿ ಪಿಎಸ್‌ಐ ತನ್ವೀರ್ ಅವರನ್ನು ಅಮಾನತು ಮಾಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ರಾಮನಗರದಲ್ಲಿ ವಕೀಲರು ಸಂಭ್ರಮಿಸಿದರು.

ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿಶಾಲ್ ರಘು ಮಾತನಾಡಿ, ವಕೀಲರ ಮೇಲಿನ ಸುಳ್ಳು ಪ್ರಕರಣ ದಾಖಲು ವಿರೋಧಿಸಿ ಹಾಗೂ ಪಿಎಸ್‌ಐ ತನ್ವೀರ್ ಹುಸೇನ್ ಅಮಾನತಿಗೆ ಆಗ್ರಹಿಸಿ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು. ಹಿರಿಯ, ಕಿರಿಯ, ಮಹಿಳಾ ವಕೀಲರ ನ್ಯಾಯಯುತ ಹೋರಾಟದ ಫಲವಾಗಿ ಸಿಕ್ಕ ಜಯ ಇದಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಹೊಸ ಇತಿಹಾಸ ಬರೆದಿದ್ದೇವೆ. ಯಾರಿಂದಲೂ ಬಗೆಹರಿಸಲಾಗದ ಸಮಸ್ಯೆಯನ್ನು ವಕೀಲರು ಹೋರಾಡಿ ನ್ಯಾಯ ಪಡೆದುಕೊಂಡಿದ್ದಾರೆ ಎಂದರು.

ಸಣ್ಣ ವಿಚಾರವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಜಿಲ್ಲಾಡಳಿತವೇ ಕಾರಣ. ನಮ್ಮ ಹೋರಾಟವನ್ನು ಹತ್ತಿಕ್ಕುವ ಸಂದರ್ಭದಲ್ಲಿ ಮಾಧ್ಯಮಗಳು ಬೆನ್ನೆಲುಬಾಗಿ ನಿಂತ ಪರಿಣಾಮ ಅದು ವಿಧಾನಸೌಧ ತಲುಪಿತು. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿದ್ದ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿಷ್ಪ್ರಯೋಜಕ ಅಂತ ಸಾಬೀತು ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ನಾವು ಸಬ್ ಇನ್ಸ್ ಪೆಕ್ಟರ್ ನನ್ನು ಸೇವೆಯಿಂದ ವಜಾಗೊಳಿಸಿ ಅವರ ಕುಟುಂಬವನ್ನು ಬೀದಿಗೆ ತಳ್ಳಿ ಅನ್ನಲಿಲ್ಲ. ತಪ್ಪು ಮಾಡಿದ ನಮ್ಮ ವಕೀಲ ಸಹೋದರನನ್ನು ಅಮಾನತು ಮಾಡಿದೆವು. ಅದೇ ರೀತಿ ಅಮಾನತು ಮಾಡುವಂತೆ ಕೇಳಿದೆವು. ಈಗ ಅದರ ಪರಿಣಾಮ ಗೊತ್ತಾಗಿದೆ. ಸಾರ್ವಜನಿಕರ ಕೆಲಸ ಮಾಡುವ ಅಧಿಕಾರಿಗಳು ಆಡಳಿತಗಾರರ ಕೈಗೊಂಬೆಯಾಗದೆ ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಿದರೆ ಯಾರೂ ಪ್ರಶ್ನೆ ಮಾಡುವುದಿಲ್ಲ. ವಕೀಲರಿಗೆ ನ್ಯಾಯ ಕೊಡುವಲ್ಲಿ ವಿಫಲರಾದರೊ ಇಲ್ಲವೊ ಎಂಬುದನ್ನು ಡಿಸಿ, ಎಸ್ಪಿ ಆತ್ಮವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

ನಾವು ಜಯ ಸಿಕ್ಕಿದೆ ಅಂತ ಬೀಗುವುದಿಲ್ಲ. ಬದಲಿಗೆ ನ್ಯಾಯ ಸಿಕ್ಕಿದೆ ಅಂತ ಸಂತೋಷ ಆಗಿದೆ. ಎಷ್ಟೋ ಹೋರಾಟಗಳಿಗೆ ನ್ಯಾಯವೇ ಸಿಗುವುದಿಲ್ಲ. ಜಿಲ್ಲಾಡಳಿತ ನಡೆಸುವ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಪ್ರಶ್ನೆ ಮಾಡುವುದು ಸುಲಭದ ಮಾತಲ್ಲ. ಆದರೆ, ವಕೀಲರಾದ ನಮಗೆ ಅಧಿಕಾರಿಗಳನ್ನು ದಿಗ್ಬಂಧನ ಹಾಕಲು ಹೋರಾಟದಿಂದ ಮಾತ್ರ ಸಾಧ್ಯವಾಗಿದೆ ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ ತಡರಾತ್ರಿ ಬಂದು ಹೋರಾಟಗಾರರಿಗೆ ಧೈರ್ಯ ತುಂಬಿದರು. ವಿರೋಧ ಪಕ್ಷದ ನಾಯಕ ಅಶೋಕ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಕೀಲರ ಹೋರಾಟವನ್ನು ಸದನದಲ್ಲಿ ಆಡಳಿತ ಪಕ್ಷದವರ ಗಮನ ಸೆಳೆಯುವಂತೆ ಮಾಡಿದರು. ಅಲ್ಲಿ ಶಾಸಕ ಯತ್ನಾಳ್ ಗಾಂಭೀರ್ಯ ಪ್ರದರ್ಶಿಸಿದರು. ಹಾಗಾಗಿ ವಕೀಲರ ಹೋರಾಟಕ್ಕೆ ಬೆಂಬಲ ನೀಡಿದವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ವಿಶಾಲ್ ರಘು ತಿಳಿಸಿದರು.

ಈ ವೇಳೆ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ತಿಮ್ಮೇಗೌಡ, ಪದಾಧಿಕಾರಿಗಳಾದ ಮಂಜೇಶ್ ಗೌಡ, ಶಿವಣ್ಣ, ದರ್ಶನ್, ಹಿರಿಯ ವಕೀಲ ಸುಬ್ಬಾಶಾಸ್ತ್ರಿ, ಶಿವಕುಮಾರ ಸ್ವಾಮಿ, ದೇವರಾಜು, ವಿನಯ್ ಮಂಗ್ಳೆಕರ್, ಸುಬ್ಬಾಶಾಸ್ತ್ರಿ, ಮುದ್ದುಮಲ್ಲಯ್ಯ, ಟಿ.ಕೆ.ಶಾಂತಪ್ಪ, ಶಿವಣ್ಣ, ಧನಂಜಯ್ಯ, ರವಿ, ಸಿದ್ದೇಗೌಡ, ಸಿದ್ದಪ್ಪ, ಸಾಗರ್, ಪುಟ್ಟಸ್ವಾಮಿ, ಜಗದೀಶ್ ಮತ್ತಿತರರು ಭಾಗವಹಿಸಿದ್ದರು.

ಬಾಕ್ಸ್...............

ಮಾಜಿ ಸಿಎಂ ಕುಮಾರಸ್ವಾಮಿ ದೂರವಾಣಿ ಕರೆ:

ಪ್ರತಿಭಟನಾನಿರತ ವಕೀಲರನ್ನು ಉದ್ದೇಶಿಸಿ ದೂರವಾಣಿ ಮೂಲಕ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ವಕೀಲರ ಸಮೂಹಕ್ಕೆ ಅಭಿನಂದನೆ ಸಲ್ಲಿಸಿದರು. ನಿಮ್ಮ ಹೋರಾಟಕ್ಕೆ ಸರ್ಕಾರ ತಲೆಬಾಗಿದೆ. ಸರ್ಕಾರ ನಡೆದುಕೊಂಡ ರೀತಿಯಿಂದ ನೀವು ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂತು. ನಿಮ್ಮ ಹೋರಾಟಕ್ಕೆ ಸರ್ಕಾರ ಹೆದರಿದೆ. ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ. ವಕೀಲರ ಮೇಲೆ ಸದಾ ಅಭಿಮಾನ ಇದೆ ಎಂದು ಕುಮಾರಸ್ವಾಮಿ ಹೇಳಿದರು.ಬಾಕ್ಸ್.............

ಫಾಲಿ ನಾರಿಮನ್ ಗೆ ಶ್ರದ್ಧಾಂಜಲಿ ಸಲ್ಲಿಕೆ :

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಕೀಲರು ಸುಪ್ರೀಂಕೋರ್ಟ್ ಹಿರಿಯ ವಕೀಲ ಫಾಲಿ ನಾರಿಮನ್ ನಿಧನದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.21ಕೆಆರ್ ಎಂಎನ್‌ 4.ಜೆಪಿಜಿ

ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನಾನಿರತ ವಕೀಲರು ವಿಕ್ಟರಿ ಚಿಹ್ನೆ ಪ್ರದರ್ಶಿಸಿ ಸಂಭ್ರಮಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ