ಪಂ. ಭೀಮಸೇನ ಸಂಗೀತ ಲೋಕದ ಅಜರಾಮರ-ರತ್ನಾಕರ ಭಟ್‌ ಜೋಶಿ

KannadaprabhaNewsNetwork | Published : Feb 6, 2024 1:35 AM

ಸಾರಾಂಶ

ಭಾರತರತ್ನ ಪಂ. ಭೀಮಸೇನ್ ಜೋಶಿ ಹಿಂದುಸ್ತಾನಿ ಸಂಗೀತ ಲೋಕದ ಅಜರಾಮರ ಗಾಯಕರಾಗಿದ್ದಾರೆ. ಭೌತಿಕವಾಗಿ ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ ತಮ್ಮ ಗಾನ ಮಾಧುರ್ಯದ ಮೂಲಕ ಸಂಗೀತ ಪ್ರೇಮಿಗಳ ಮನದಲ್ಲಿ ನೆಲೆಸಿದ್ದಾರೆ ಎಂದು ಖ್ಯಾತ ವೈದಿಕ ವಿದ್ವಾಂಸ ರತ್ನಾಕರ ಭಟ್ ಜೋಶಿ ಹೇಳಿದರು.

ಗದಗ:ಭಾರತರತ್ನ ಪಂ. ಭೀಮಸೇನ್ ಜೋಶಿ ಹಿಂದುಸ್ತಾನಿ ಸಂಗೀತ ಲೋಕದ ಅಜರಾಮರ ಗಾಯಕರಾಗಿದ್ದಾರೆ. ಭೌತಿಕವಾಗಿ ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ ತಮ್ಮ ಗಾನ ಮಾಧುರ್ಯದ ಮೂಲಕ ಸಂಗೀತ ಪ್ರೇಮಿಗಳ ಮನದಲ್ಲಿ ನೆಲೆಸಿದ್ದಾರೆ ಎಂದು ಖ್ಯಾತ ವೈದಿಕ ವಿದ್ವಾಂಸ ರತ್ನಾಕರ ಭಟ್ ಜೋಶಿ ಹೇಳಿದರು.

ನಗರದ ಮರಾಠಿ ವಾಙ್ಮಯಿ ಪ್ರೇಮಿ ಮಂಡಳ ಭಾರತರತ್ನ ಪಂ. ಭೀಮಸೇನ್ ಜೋಶಿ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ ಸ್ವರನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ೮೦ರ ದಶಕದಲ್ಲಿ ಉತ್ತರ ಕರ್ನಾಟಕದ ಹಲವು ಕಡೆಗಳಲ್ಲಿ ಸಂಗೀತ ಸುಧೆ ಹರಿಸಿದ ಭೀಮಸೇನ ಜೋಶಿ ಮರಾಠಿ ವಾಙ್ಮಯಿ ಪ್ರೇಮಿ ಮಂಡಳದಲ್ಲಿಯೂ ತಮ್ಮ ಕಾರ್ಯಕ್ರಮ ನೀಡಿದ್ದನ್ನು ಸ್ಮರಿಸಿಕೊಂಡರು.

ಬೆಂಗಳೂರಿನ ಹಿರಿಯ ಹಿಂದುಸ್ತಾನಿ ಸಂಗೀತ ಕಲಾವಿದ ಪಂ. ಕೀರ್ತಿಕುಮಾರ ಬಡಶೇಷಿ ಮಾತನಾಡಿ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಪರಂಪರೆಯ ಅನರ್ಘ್ಯರತ್ನ ಪಂಡಿತ್ ಭೀಮಸೇನ ಜೋಶಿಯವರಾಗಿದ್ದು, ಅವರ ನೇರ ಶಿಷ್ಯ ಪಂ. ಅರವಿಂದ ಹುಯಿಲಗೋಳಕರ್ ತಮ್ಮ ಶಿಷ್ಯ ವೃಂದದ ಮೂಲಕ ಈ ಘರಾಣೆಯ ಶಾಸ್ತ್ರೀಯ ಸಂಗೀತ ಗದಗ ಪರಿಸರದಲ್ಲಿ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಪ್ರತಿಷ್ಠಾನದ ಸಹಕಾರ್ಯದರ್ಶಿ ರವೀಂದ್ರ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತಿಷ್ಠಾನದ ಅಧ್ಯಕ್ಷ ಪಂ.ಅರವಿಂದ ಹುಯಿಲಗೋಳಕರ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಶರದರಾವ್‌ ಹುಯಿಲಗೋಳ, ವೆಂಕಟೇಶ ಗುಡಿ, ರವೀಂದ್ರ ಜೋಶಿ, ಶ್ರೀಕಾಂತ ಹೂಲಿ, ಅನೀಲ ತೆಂಬದಮನಿ, ಸುರೇಶ ವೈದ್ಯ, ಪುರಾಣಿಕ ಡಾ. ಧನೇಶ ದೇಸಾಯಿ, ಡಾ. ಅನಂತ ಶಿವಪುರ, ಪ್ರೊ. ಆರ್.ಎನ್. ಕುಲಕರ್ಣಿ, ಎಸ್.ಬಿ. ಕುಲಕರ್ಣಿ ಪಾಲ್ಗೊಂಡಿದ್ದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಅರುಣ ರಾಜಪುರೋಹಿತ ವಂದಿಸಿದರು.

ನಂತರ ಹಿಂದುಸ್ತಾನಿ ಸಂಗೀತ ಕಲಾವಿದ ಪಂ. ಕೀರ್ತಿಕುಮಾರ ಬಡಶೇಷಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಸಂತವಾಣಿ ಹಾಗೂ ಭಜನೆ ಪ್ರಸ್ತುತಪಡಿಸಿದರು. ಹಿರಿಯ ಸಂವಾದಿನಿ ಕಲಾವಿದ ವಿಠ್ಠಲ ಕಟ್ಟೆಣ್ಣವರ ಸಂವಾದಿನಿ, ವೆಂಕಟೇಶ ಜೋಶಿ ತಬಲಾ, ವಿಠ್ಠಲ ಕಟ್ಟಿ ತಾಳ, ಶ್ರೀಕಾಂತ ಹೂಲಿ ಮತ್ತು ವೈಶಾಲಿ ಕುಲಕರ್ಣಿ ತಂಬೂರಿ ಸಾಥ್ ನೀಡಿದರು.

Share this article