ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ‘ಪರೀಕ್ಷೆ-1’ ರಾಜ್ಯಾದ್ಯಂತ ಮಾ.1ರಿಂದ ಆರಂಭ

KannadaprabhaNewsNetwork |  
Published : Feb 28, 2025, 12:50 AM ISTUpdated : Feb 28, 2025, 06:55 AM IST
ಪರೀಕ್ಷೆ  | Kannada Prabha

ಸಾರಾಂಶ

ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ‘ಪರೀಕ್ಷೆ-1’ ರಾಜ್ಯಾದ್ಯಂತ ಮಾ.1ರಿಂದ ಆರಂಭವಾಗಲಿದ್ದು, ಪರೀಕ್ಷಾ ಅಕ್ರಮ ತಡೆಗೆ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಾರಿಗೊಳಿಸಿದ್ದ ವೆಬ್‌ಕಾಸ್ಟಿಂಗ್‌ ಕಣ್ಗಾವಲನ್ನು ಈ ಬಾರಿ ಪಿಯು ಪರೀಕ್ಷೆಗೂ ವಿಸ್ತರಿಸಲಾಗಿದೆ.

 ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ‘ಪರೀಕ್ಷೆ-1’ ರಾಜ್ಯಾದ್ಯಂತ ಮಾ.1ರಿಂದ ಆರಂಭವಾಗಲಿದ್ದು, ಪರೀಕ್ಷಾ ಅಕ್ರಮ ತಡೆಗೆ ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಾರಿಗೊಳಿಸಿದ್ದ ವೆಬ್‌ಕಾಸ್ಟಿಂಗ್‌ ಕಣ್ಗಾವಲನ್ನು ಈ ಬಾರಿ ಪಿಯು ಪರೀಕ್ಷೆಗೂ ವಿಸ್ತರಿಸಲಾಗಿದೆ.

ಕಳೆದ ವರ್ಷ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಾರಿಗೆ ತಂದ ವೆಬ್‌ಕಾಸ್ಟಿಂಗ್‌ ವ್ಯವಸ್ಥೆಯಿಂದ ಪರೀಕ್ಷಾ ಕೊಠಡಿಗಳಲ್ಲಿ ನಡೆಯುತ್ತಿದ್ದ ಬಹುತೇಕ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಬಿದ್ದ ಪರಿಣಾಮ ಫಲಿತಾಂಶ ಭಾರೀ ಪ್ರಮಾಣದಲ್ಲಿ ಕುಸಿತವಾಗಿತ್ತು. ಈ ವರ್ಷ ಪಿಯು ಪರೀಕ್ಷೆಗೂ ಈ ವ್ಯವಸ್ಥೆ ಜಾರಿಯಿಂದ ಈ ಬಾರಿ ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಪಿಯು ಪರೀಕ್ಷೆ ನಡೆಯುವ ಎಲ್ಲ 1,171 ಕೇಂದ್ರಗಳ ಪ್ರತಿ ಪರೀಕ್ಷಾ ಕೊಠಡಿಯಲ್ಲೂ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅವಳಡಿಸಲಾಗಿದೆ. ಪರೀಕ್ಷೆ ಅವಧಿಯಲ್ಲಿ ಯಾವುದೇ ಕೊಠಡಿಯಲ್ಲಿ ವಿದ್ಯಾರ್ಥಿಗಳು ಪರಸ್ಪರ ಮಾತನಾಡುವುದು, ನಕಲು ಮಾಡುವುದು, ಕಾಪಿ ಚೀಟಿ ಇಟ್ಟುಕೊಂಡು ಪರೀಕ್ಷೆ ಬರೆಯವುದು, ಪರೀಕ್ಷಾ ಮೇಲ್ವಿಚಾರಕರು ಅಥವಾ ಇನ್ಯಾರಾದರೂ ಸಾಮೂಹಿಕ ನಕಲು ಪ್ರಯತ್ನ ನಡೆಸುವಂತಹ ಘಟನೆಗಳು ನಡೆದರೆ ಅದನ್ನು ವೆಬ್‌ಕಾಸ್ಟಿಂಗ್‌ ಮೂಲಕ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಿರುವ ನಿಯಂತ್ರಣ ಕೊಠಡಿಗಳಲ್ಲೇ ಕೂತು ಜಿಲ್ಲಾಧಿಕಾರಿ, ಜಿ.ಪಂ.ಸಿಇಒ ಸೇರಿ ಉನ್ನತ ಅಧಿಕಾರಿಗಳು ಗಮನಹರಿಸಬಹುದಾಗಿದೆ. ತಕ್ಷಣ ಅಕ್ರಮ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಾಗಲಿದೆ.

7.13 ಲಕ್ಷ ವಿದ್ಯಾರ್ಥಿಗಳು: ಈ ಬಾರಿ ಒಟ್ಟು 7,13, 862 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 6,61,474 ಮಂದಿ ಶಾಲಾ ತರಗತಿ ವಿದ್ಯಾರ್ಥಿಗಳು, 34,071 ಪುನರಾವರ್ತಿತ ಮತ್ತು 18,317 ಖಾಸಗಿ ಅಭ್ಯರ್ಥಿಗಳಾಗಿದ್ದಾರೆ. ಐವರು ತೃತೀಯ ಲಿಂಗಿಗಳು ನೋಂದಾಯಿಸಿಕೊಂಡಿದ್ದಾರೆ.ಪರೀಕ್ಷಾ ಅಕ್ರಮ ತಡೆಗೆ ಪ್ರತಿ ಬಾರಿಯಂತೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲ ಜೆರಾಕ್ಸ್‌, ಸೈಬರ್‌ ಕೇಂದ್ರ ಮುಚ್ಚಿಸಲಾಗಿದೆ. 2,342 ಸ್ಥಾನಿಕ ಜಾಗೃತ ದಳ, 504 ವಿಚಕ್ಷಣ ಜಾಗೃತ ದಳ ರಚಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್‌ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ