ಉಳ್ಳಾಲ: ಮೂವರು ಮಕ್ಕಳ ತಂದೆಯಾಗಿದ್ದರೂ ಪಿಯು ಶಿಕ್ಷಣ ಸಂಪೂರ್ಣಗೊಳಿಸದ ಕೊರಗು ಹೊಂದಿದ್ದ 57 ವರ್ಷದ ಫೈನಾನ್ಶಿಯರ್ ಇದೀಗ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗಿ ಮಾದರಿಯಾಗಿದ್ದಾರೆ. ಉಳ್ಳಾಲ ತಾಲೂಕಿನ ಕೊಲ್ಯ ಕಣೀರುತೋಟ ನಿವಾಸಿ ಹಾಗೂ ಚಿಟ್‌ಫಂಡ್ ವ್ಯವಹಾರ ನಡೆಸುತ್ತಿರುವ ಮೋಹನ್ ರಾಜ್ ಅಮೀನ್ ಅವರು ಈ ಸಾಧನೆ ಮಾಡಿದ್ದಾರೆ.
ಅವರ ಹಿರಿಯ ಮಗಳು ಪೃಥ್ವಿರೇಖ ಬಿಎಸ್ಸಿ ಪದವೀಧರೆಯಾಗಿದ್ದು ಖಾಸಗಿ ಉದ್ಯೋಗದಲ್ಲಿದ್ದಾರೆ. ಎರಡನೇ ಮಗಳು ಪೃಕೃತಿ ಡಿಪ್ಲೋಮಾ ಪೂರ್ಣಗೊಳಿಸಿ ಖಾಸಗಿ ಉದ್ಯೋಗದಲ್ಲಿದ್ದಾರೆ. ಕಿರಿಯ ಮಗ ಕ್ಷಿತಿಜ್ ರಾಜ್ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದಾರೆ.ಮೋಹನ್ ರಾಜ್ ಅವರು ಮುಡಿಪುವಿನ ಸರಕಾರಿ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದು, ಪರೀಕ್ಷಾ ಕೇಂದ್ರಕ್ಕೆ ಬಂದಾಗ ಅವರ ವಯಸ್ಸು ಕಂಡು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆಶ್ಚರ್ಯಗೊಂಡರು. ತಾನು ಪರೀಕ್ಷೆ ಬರೆಯಲು ಬಂದಿರುವುದಾಗಿ ತಿಳಿಸಿದ ಬಳಿಕ ಅವರ ಉತ್ಸಾಹಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಪೂರ್ಣ ಬೆಂಬಲ ನೀಡಿದರು.
ಕಳೆದ ನವೆಂಬರ್‌ನಿಂದ ಅವರು ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದು ತೊಕ್ಕೊಟ್ಟಿನ ಖಾಸಗಿ ಟ್ಯೂಷನ್ ಸಂಸ್ಥೆಯಲ್ಲಿ ಬೆಳಿಗ್ಗೆ 8 ರಿಂದ 11ರವರೆಗೆ ಹಾಗೂ ಸಂಜೆ ವೇಳೆಯಲ್ಲೂ ತರಬೇತಿ ಪಡೆದಿದ್ದರು. ಅವರ ಪ್ರಯತ್ನಕ್ಕೆ ಪತ್ನಿ ಮಮತಾ ಸಂಪೂರ್ಣ ಪ್ರೋತ್ಸಾಹ ನೀಡಿದ್ದರು. ಸುಮಾರು ನಲ್ವತ್ತೆರಡು ವರ್ಷಗಳಿಂದ ಉಳಿದಿದ್ದ ಪಿಯುಸಿ ಶಿಕ್ಷಣ ಪೂರ್ಣಗೊಳಿಸುವ ಕನಸನ್ನು ಅವರು ಇದೀಗ ಸಾಕಾರಗೊಳಿಸಿದ್ದಾರೆ. ಮಕ್ಕಳು ಶಿಕ್ಷಣ ಪಡೆಯಲು ಪೋಷಕರು ಪೂರಕ ವಾತಾವರಣ ನಿರ್ಮಿಸಬೇಕು. ನಿರ್ದಿಷ್ಟ ಅಂಕಗಳ ಒತ್ತಡ ಕೊಡಬಾರದು; ಇಲ್ಲವಾದರೆ ಶಿಕ್ಷಣ ಮಕ್ಕಳಿಗೆ ಸರೆಮನೆಯಂತಾಗುತ್ತದೆ ಎಂದು ಮೋಹನ್ ರಾಜ್ ಅವರು ಪೋಷಕರಿಗೆ ಕಿವಿಮಾತು ಹೇಳಿದ್ದಾರೆ.ಮಧ್ಯ ವಯಸ್ಸಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿರುವ ಮೋಹನ್ ರಾಜ್ ಅವರು, ಸಾಧಿಸುವ ಛಲವಿದ್ದರೆ ಬಡತನವೂ ವಯಸ್ಸೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.