ಹಾವೇರಿ: ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಭ್ರಷ್ಟಾಚಾರದ ಹೊರೆಯನ್ನು ಜನರ ಮೇಲೆ ಹಾಕುತ್ತಿದೆ. ಅಲ್ಲದೇ ತೆರಿಗೆ ಏರಿಕೆ, ಬೆಲೆ ಏರಿಕೆಯ ಭಾರವನ್ನೂ ಜನಸಾಮಾನ್ಯರ ಮೇಲೆ ಹಾಕಿ ಜನರಿಂದ ಲೂಟಿ ಮಾಡುತ್ತಿದೆ. ಅತ್ಯಂತ ಕೆಟ್ಟ ಸರ್ಕಾರ ಕರ್ನಾಟಕದಲ್ಲಿದ್ದು, ಜನಾಕ್ರೋಶವೇ ರಾಜ್ಯ ಸರ್ಕಾರವನ್ನು ಕಿತ್ತೊಗೆಯಲಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ನಗರದ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಗುರುವಾರ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.
ರಾಜ್ಯದ ಇತಿಹಾಸದಲ್ಲಿ ಇಷ್ಟೊಂದು ಕೆಟ್ಟ ಸರ್ಕಾರ ನೋಡಿರಲಿಲ್ಲ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಅಂದರೆ ಎಲ್ಲ ಆರ್ಥಿಕ ವ್ಯವಹಾರ ಗೊತ್ತಿರುವ ಅಷ್ಟೇ ಅಲ್ಲ ಒಬ್ಬ ಹಿರಿಯ ಶಾಸಕರು ಹಿಂದಿನ ಸಂಸತ್ ಸದಸ್ಯರಾದ ಬಸವರಾಜ ರಾಯರಡ್ಡಿ ಅವರು ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಇದೆ ಅಂತ ಹೇಳಿದ್ದಾರೆ. ಸ್ವತಃ ಮುಖ್ಯಮಂತ್ರಿ ಕಚೇರಿಯ ಆರ್ಥಿಕ ಸಲಹೆಗಾರರು ಹೇಳುತ್ತಿದ್ದಾರೆ. ಮುಖ್ಯಮಂತಿಗೆ ನೈತಿಕತೆ ಇದ್ದರೆ, ಅವರು ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಆರ್ಥಿಕ ಸಲಹೆಗಾರರನ್ನು ತೆಗೆಯಬೇಕು ಎಂದು ಆಗ್ರಹಿಸಿದರು.ನಾನು ಮುಖ್ಯಮಂತ್ರಿಯಾಗುವ ಮುಂಚೆ ಕಾಂಟ್ರಾಕ್ಟರ್ ಅಸೋಸಿಯೇಷನ್‌ವರು ಕಾಂಗ್ರೆಸ್ ಒತ್ತಡಕ್ಕೆ ಮಣಿದು ನಮ್ಮ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ಇದೆ ಅಂತ ಆರೋಪ ಮಾಡಿದರು. ನಾನು ದಾಖಲೆ ಕೊಡಿ ತನಿಖೆ ನಡೆಸುತ್ತೇನೆ ಎಂದು ಹೇಳಿದೆ. ಅವರು ದಾಖಲೆ ಕೊಡಲಿಲ್ಲ. ಈಗ ಅದೇ ಕಾಂಟಾಕ್ಟರ್ ಅಸೋಷಿಯಷನ್‌ನವರು ಈಗಿನದು ಶೇ. 60 ಕಮಿಶನ್ ಸರ್ಕಾರ ಅಂತ ಹೇಳಿದ್ದಾರೆ. ಈಗ ಅಬಕಾರಿ ಗುತ್ತಿಗೆದಾರರೂ ಅಬಕಾರಿ ಇಲಾಖೆಯಲ್ಲಿ ಲೂಟಿಯಾಗುತ್ತಿದೆ ಅಂತ ಹೇಳಿದ್ದಾರೆ. ಇಂತಹ ದುಷ್ಟ, ಭ್ರಷ್ಟ, ಅನಿಷ್ಟ, ಕನಿಷ್ಠ ಸರ್ಕಾರದ ವಿರುದ್ಧ ಜನಾಕ್ರೋಶ ಮುಗಿಲು ಮುಟ್ಟಿದೆ. ಆ ಜನಾಕ್ರೋಶವೇ ಈ ಸರ್ಕಾರವನ್ನು ಕಿತ್ತೊಗೆಯಲಿದೆ. 2028ರಲ್ಲಿ ಜನರಿಂದ ಜನಪರ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರೋಣ ಎಂದರು.
21ರಂದು ಹಾವೇರಿಗೆ ಜನಾಕ್ರೋಶ ಯಾತ್ರೆರಾಜ್ಯ ಸರ್ಕಾರವು ಜನರ ಮೇಲೆ ಭ್ರಷ್ಟಾಚಾರದ ಹೊರೆಯನ್ನು ಹಾಕಿ, ಜನರಿಂದ ಲೂಟಿ ಮಾಡುತ್ತಿದೆ. ಇಡೀ ಕರ್ನಾಟಕದ ಜನತೆಗೆ ಜಾಗೃತಿ ಮೂಡಿಸಲು ಬಿಜೆಪಿ ಜನಾಕ್ರೋಶ ಯಾತ್ರೆಯನ್ನು ಆರಂಭಿಸಿದೆ. ಏ. 21ರಂದು ಯಾತ್ರೆ ಹಾವೇರಿಗೆ ಬರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಈ ಭ್ರಷ್ಟ, ದುಷ್ಟ ಸರ್ಕಾರದ ವಿರುದ್ಧ ಹೊರಾಟ ಮಾಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಕರೆ ನೀಡಿದರು.ಸಿದ್ದರಾಮಯ್ಯನವರು ಈ ವರ್ಷ ₹1.16 ಲಕ್ಷ ಕೋಟಿ, ಕಳೆದ ವರ್ಷ ₹1.5 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ರಾಜ್ಯದ ಒಟ್ಟು ಸಾಲ ಏಳೂವರೆ ಲಕ್ಷ ಕೋಟಿ ರು. ಆಗಿದ್ದರೆ, ಅದರಲ್ಲಿ ನಾಲ್ಕುವರೆ ಲಕ್ಷ ಕೋಟಿ ರು. ಸಿದ್ದರಾಮಯ್ಯ ಅವರು ಪಡೆದಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಸಿದ್ದರಾಮಯ್ಯ ಅವರು ಸಾಲದ ಎಕ್ಸ್ಪರ್ಟ್. ಸಾಲದ ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ ಎಂದರು.