ಪಬ್ಲಿಕ್‌ ಸೈಕಲ್‌ ಸವಾರಿಗೆ ಸಾರ್ವಜನಿಕರ ನಿರಾಸಕ್ತಿ

KannadaprabhaNewsNetwork |  
Published : Mar 09, 2025, 01:47 AM IST
ಪೋಟೋ ಇದೆ. | Kannada Prabha

ಸಾರಾಂಶ

ಹುಬ್ಬಳ್ಳಿಯಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಕಡೆ ತೆರಳಲು ಆಟೋದವರಿಗೆ ಕನಿಷ್ಠ ₹70 ನೀಡಬೇಕು. ಆ ದೃಷ್ಟಿಯಲ್ಲಿ ಎಲ್ಲರೂ ಸೈಕಲ್‌ ಹತ್ತಬೇಕಿತ್ತು. ಆದರೆ ಗ್ರಾಮೀಣರಂತೂ ಈ ಡಾಕ್‌ ಸ್ಟೇಶನ್‌ಗಳತ್ತ ಸುಳಿಯಲೇ ಇಲ್ಲ.

ಶಿವಾನಂದ ಅಂಗಡಿ

ಹುಬ್ಬಳ್ಳಿ: ಹುಬ್ಬಳ್ಳಿ ಮಹಾನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಜಾರಿಗೊಳಿಸಿದ ''''ಸಾರ್ವಜನಿಕ ಬೈಸಿಕಲ್ ಸವಾರಿ'''' (ಪಿಬಿಎಸ್‌) ಯೋಜನೆಗೆ ಎರಡೇ ವರ್ಷದಲ್ಲಿ ಗ್ರಹಣ ಹಿಡಿದಿದ್ದು, ಸವಾರರು ಇಲ್ಲದೇ ಸೈಕಲ್‌ಗಳು ಡಾಕ್ ಸ್ಟೇಶನ್‌ದಲ್ಲಿ ಧೂಳು ಮೆತ್ತಿಕೊಳ್ಳುತ್ತಿವೆ.

2023ರ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ವಾಯುಮಾಲಿನ್ಯ ತಡೆ ಹಾಗೂ ಸಂಚಾರ ದಟ್ಟಣೆ ತಪ್ಪಿಸಲು ''''ಸಾರ್ವಜನಿಕ ಸೈಕಲ್ ಸವಾರಿ'''' ಯೋಜನೆಯನ್ನು ಆರಂಭಿಸಲಾಯಿತು. ಯೋಜನೆಯ ಉದ್ದೇಶವೇನೋ ಉತ್ತಮವಾಗಿದೆ. ಆದರೆ ಸೈಕಲ್‌ ಸವಾರಿ ಮೇಲಿದ್ದ ಆಸಕ್ತಿ ಜನತೆಗೆ ಕಡಿಮೆಯಾಗಿದ್ದು, ಡಾಕ್‌ ಸ್ಟೇಶನ್‌ಗಳಲ್ಲೇ ಸೈಕಲ್‌ಗಳು ಸದಾಕಾಲ ಲಾಕ್‌ ಆಗಿರುವುದು ಕಂಡು ಬರುತ್ತಿದೆ.

ಹುಬ್ಬಳ್ಳಿಗೆ ದಿನವೊಂದಕ್ಕೆ ಲಕ್ಷಾಂತರ ಜನರು ಬರುತ್ತಾರೆ. ಒಂದು ಪ್ರದೇಶದಿಂದ ಮತ್ತೊಂದು ಕಡೆ ತೆರಳಲು ಆಟೋದವರಿಗೆ ಕನಿಷ್ಠ ₹70 ನೀಡಬೇಕು. ಆ ದೃಷ್ಟಿಯಲ್ಲಿ ಎಲ್ಲರೂ ಸೈಕಲ್‌ ಹತ್ತಬೇಕಿತ್ತು. ಆದರೆ ಗ್ರಾಮೀಣರಂತೂ ಈ ಡಾಕ್‌ ಸ್ಟೇಶನ್‌ಗಳತ್ತ ಸುಳಿಯಲೇ ಇಲ್ಲ.

34 ಡಾಕ್ ಸ್ಟೇಶನ್‌

ಪಬ್ಲಿಕ್‌ ಸೈಕಲ್‌ ಸವಾರಿಗಾಗಿಯೇ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೋಟ್ಯಂತರ ರು. ಖರ್ಚಾಗಿದ್ದು, ಸೈಕಲ್‌ ನಿಲ್ಲಿಸುವ ಸಲುವಾಗಿಯೇ 34 ಡಾಕ್ ಸ್ಟೇಶನ್ ನಿರ್ಮಿಸಲಾಗಿದೆ. ಇವುಗಳಲ್ಲಿ 300 ಸೈಕಲ್‌ಗಳು, 40 ಎಲೆಕ್ಟ್ರಿಕ್ ಸೈಕಲ್‌ಗಳು ಸೇವೆಯಲ್ಲಿವೆ. ಆ್ಯಪ್‌ ಇಲ್ಲವೇ ಕಾರ್ಡ್‌ ಮೂಲಕ ಸೈಕಲ್ ಉಪಯೋಗಿಸಬಹುದಾಗಿದ್ದು, ಗ್ರಾಹಕರಿಗೆ ನೋಂದಣಿ ಬಳಿಕ ಕಾರ್ಡ್‌ ನೀಡಲಾಗುತ್ತಿದ್ದು, ಕಾರ್ಡ್‌ಗೆ ₹300 ನಿಗದಿಗೊಳಿಸಲಾಗಿದೆ. ₹100 ಕಾರ್ಡಿಗೆ ಹಾಗೂ ₹100 ವಿಮಾ ಕಂಪನಿಗೆ ಜಮಾ ಆಗುತ್ತದೆ. ಉಳಿದ ₹100 ದಲ್ಲಿ ಗ್ರಾಹಕರು ಸೈಕಲ್ ಹೊಡೆಯಲು ಉಪಯೋಗಿಸಬಹುದಾಗಿದೆ. ಗ್ರಾಹಕರಿಗೆ ಪ್ರತಿದಿನ ಮೊದಲ ಒಂದು ಗಂಟೆ ಸವಾರಿ ಉಚಿತವಾಗಿದ್ದು, ನಂತರ ಒಂದು ಗಂಟೆಗೆ ಪೆಡಲ್‌ ಸೈಕಲ್‌ಗೆ ₹5 ಹಾಗೂ ಎಲೆಕ್ಟ್ರಿಕ್‌ ಸೈಕಲ್‌ ₹10 ಕಾರ್ಡ್‌ನಿಂದಲೇ ಪಾವತಿ ಆಗುತ್ತದೆ.

ಡಾಕ್‌ ಸ್ಟೇಶನ್‌ದಲ್ಲಿ ಡಾಕ್‌ ಬಾಕ್ಸ್‌ಗೆ ಸ್ಕ್ಯಾನರ್‌ ಕೂಡಿಸಿದ್ದು, ಕಾರ್ಡ್‌ ಸ್ಕ್ಯಾನ್‌ ಆಗುತ್ತಿದ್ದಂತೆ ಲಾಕ್‌ ತೆಗೆಯುತ್ತದೆ. ಲಾಕ್‌ ಬಾಕ್ಸ್‌ಗೆ ಸರ್ವರ್ ಅಳವಡಿಸಿದ್ದು, ಲಾಕ್‌ ತೆಗೆಯುತ್ತಿದ್ದಂತೆ ಕಾಲ್‌ ಸೆಂಟರ್‌ ಸಿಬ್ಬಂದಿಗೆ ಮಾಹಿತಿ ರವಾನೆಯಾಗುತ್ತದೆ. ಸೈಕಲ್‌ ಟ್ಯೂಬ್‌ಲೆಸ್‌ ಟೈರ್ ಹೊಂದಿದ್ದು, ಹ್ಯಾಂಡಲ್‌ ಸೇರಿದಂತೆ ಬಹುತೇಕ ಭಾಗ ಅಲ್ಯೂಮಿನಿಯಂ. ಹ್ಯಾಂಡಲ್‌ ಮುಂದೆಯೇ ಬಾಸ್ಕೆಟ್ ಇದ್ದು, ಇದರಲ್ಲಿ ಸೋಲಾರ್‌ ಪ್ಲೇಟ್ ಅಳವಡಿಸಲಾಗಿದೆ. ಸೈಕಲ್‌ ಓಡಿದಂತೆ ಸೋಲಾರ್‌ ಪ್ಲೇಟ್‌ ಚಾರ್ಜ್‌ ಆಗುತ್ತದೆ. ಇದರಿಂದ ಸೈಕಲ್‌ ಸೀಟ್‌ ಕೆಳಗೆ ಅಳವಡಿಸಲಾದ ಜೆಪಿಎಸ್‌ ಕಾರ್ಯನಿರ್ವಹಣೆ ಸುಗಮವಾಗುತ್ತದೆ. ಪೆಡಲ್‌ ಜತೆಗೆ ಮೂರು ಗೇರ್‌ ವ್ಯವಸ್ಥೆ ಇದ್ದು, ಗೇರ್‌ ಬದಲಾವಣೆ ಆದಂತೆ ವೇಗ ಹೆಚ್ಚುತ್ತದೆ. ಎರಡ್ಮೂರು ಡಾಕ್‌ ಸ್ಟೇಶನ್‌ಗಳ ಮಧ್ಯೆ ಒಬ್ಬ ಸಿಬ್ಬಂದಿ ಇದ್ದು, ಒಟ್ಟು 5 ಜನ ಸೈಕಲ್‌ ಸ್ವಚ್ಛತೆ, ಡಾಕ್‌ ಬಾಕ್ಸ್‌ಗಳ ನಿರ್ವಹಣೆ ಜವಾಬ್ದಾರಿ ನೋಡಿಕೊಳ್ಳುತ್ತಿದ್ದು, ಸಮಸ್ಯೆ ಬಂದಲ್ಲಿ ಕಾಲ್‌ಸೆಂಟರ್‌ ಸಿಬ್ಬಂದಿಗೆ ಮಾಹಿತಿ ನೀಡುತ್ತಾರೆ.

ಕಾಲ್‌ಸೆಂಟರ್‌ ನಿರ್ವಹಣೆ

ಇಲ್ಲಿಯ ಕಾಟನ್ ಮಾರ್ಕೆಟ್‌ನಲ್ಲಿರುವ ಸಾಂಸ್ಕೃತಿಕ ಭವನದಲ್ಲಿರುವ ಸ್ಮಾರ್ಟ್ ಸಿಟಿ ಕಚೇರಿ ಪಕ್ಕದಲ್ಲಿಯೇ ಪಬ್ಲಿಕ್ ಸೈಕಲ್ ಸವಾರಿ ಟೆಲಿ ಕಮ್ಯೂನಿಕೇಶನ್‌ ಕಾಲ್ ಸೆಂಟರ್ ಇದ್ದು, ಪಬ್ಲಿಕ್‌ ಸೈಕಲ್‌ ಸವಾರಿ ವ್ಯವಸ್ಥೆ ಇಲ್ಲಿಂದಲೇ ನಿರ್ವಹಣೆ ಆಗುತ್ತದೆ. ಡಾಕ್ ಸ್ಟೇಶನ್‌ದಿಂದ ಹೊರಟ ಸೈಕಲ್ ಮೂರು ಗಂಟೆ ಬಳಿಕವೂ ಡಾಕ್ ಸ್ಟೇಶನ್ ಸೇರದಿದ್ದರೆ ಸಂಬಂಧಿಸಿದ ಗ್ರಾಹಕನಿಗೆ ಸಿಬ್ಬಂದಿ ಫೋನ್ ಮಾಡಿ ವಿಚಾರಿಸುತ್ತಾರೆ. ಸೈಕಲ್‌ಗೆ ಜಿಪಿಎಸ್ ಕೂಡಾ ಅಳವಡಿಸಿರುವುದರಿಂದ ಎಲ್ಲಿದೆ ಎಂಬುದು ಸಿಬ್ಬಂದಿಗೆ ಗೊತ್ತಾಗುತ್ತದೆ.

ಕಾಲ್ ಸೆಂಟರ್ ಸೇರಿದಂತೆ ಎಲ್ಲ ಡಾಕ್ ಸ್ಟೇಶನ್‌ಗಳಲ್ಲಿ ಸೈಕಲ್‌ಗಳ ದುರಸ್ತಿ, ನಿರ್ವಹಣೆಗಾಗಿಯೇ 10 ಸಿಬ್ಬಂದಿ ಇದ್ದು, ಒಬ್ಬರು ಪ್ರಾಜೆಕ್ಟ್‌ ಮ್ಯಾನೇಜರ್‌ ಇದ್ದಾರೆ.

3 ಸಾವಿರ ಕಾರ್ಡ್‌

ಸೈಕಲ್ ಸವಾರಿಗೆ 3 ಸಾವಿರ ಜನರು ಕಾರ್ಡ್ ಮಾಡಿಸಿದ್ದಾರೆ. ಆದರೆ ಇಡೀ ದಿನ 90 ಸೈಕಲ್‌ಗಳೂ ಓಡುವುದಿಲ್ಲ. ಬೆಳಗಿನ ಜಾವದಲ್ಲಿ ಪೇಪರ್ ಹಂಚುವ ಹುಡುಗರು, ನಿವೃತ್ತರು ಹಾಗೂ ವಾಯು ವಿಹಾರಕ್ಕೆ ತೆರಳುವವರು, ಸಂಜೆ ಸಹ ಕೆಲವರು ಸೈಕಲ್ ಉಪಯೋಗಿಸುತ್ತಾರೆ. ಇದೇ ಅವಧಿಯಲ್ಲಿಯೇ 40ರಿಂದ 50 ಸೈಕಲ್‌ಗಳು ಸಂಚರಿಸುತ್ತಿರುತ್ತವೆ ಎನ್ನುತ್ತಾರೆ ಸಿಬ್ಬಂದಿ.

ಒಂದು ಡಾಕ್ ಸ್ಟೇಶಸ್‌ನಿಂದ ಹೊರಟ ಸೈಕಲ್ ಬೇರೆ ಡಾಕ್‌ ಸ್ಟೇಶನ್‌ದಲ್ಲೂ ಲಾಕ್‌ ಮಾಡಬಹುದು. ಈ ಡಾಕ್ ಸ್ಟೇಶನ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಸುಸಜ್ಜಿತವಾಗಿವೆ. 5ರಿಂದ 10 ಸೈಕಲ್‌ಗಳನ್ನು ಇಲ್ಲಿ ಲಾಕ್ ಮಾಡಬಹುದಾಗಿದೆ.

ಡಾಕ್‌ ಸ್ಟೇಶನ್‌ಗಳಲ್ಲಿ ಎಷ್ಟೇ ಸೂಚನೆಗಳ ಮೂಲಕ ತಿಳಿಸಿದರೂ ಎಲೆಕ್ಟ್ರಿಕ್‌ ಸೈಕಲ್‌ಗಳನ್ನು ಉಪಯೋಗಿಸುವುದು ಸವಾರರಿಗೆ ಗೊತ್ತಾಗಲೇ ಇಲ್ಲ. ಒಂದು ಸೈಕಲ್‌ನ್ನು ಐದಾರು ಜನರು ಹೊಡೆದು ಹಾಳುಮಾಡಿದ್ದಾರೆ ಎಂದು ಸಿಬ್ಬಂದಿ ಕಳವಳ ವ್ಯಕ್ತಪಡಿಸುತ್ತಾರೆ.ಮೊದಲ ಗಂಟೆ ಉಚಿತ

ಪಬ್ಲಿಕ್ ಸೈಕಲ್ ಸವಾರಿ ಯೋಜನೆಯಡಿ ಗ್ರಾಹಕರಿಗೆ ಮೊದಲ ಗಂಟೆ ಉಚಿತವಾಗಿರುತ್ತದೆ. ಜತೆಗೆ ರೀಚಾರ್ಜ್ ಮಾಡಿದರೆ ಹಬ್ಬದ ವೇಳೆಗೆ ₹200 ಸವಾರಿ ಖರ್ಚು ಮಾಡಿದರೆ ₹400 ಆಫರ್ ಕೊಡುತ್ತೇವೆ. ಜನರಿಗಾಗಿ ತಂದಿದ್ದು, ಎಲ್ಲರೂ ಉಪಯೋಗಿಸಿ ಯೋಜನೆ ಉಳಿಸಿಕೊಳ್ಳಬೇಕು.

- ಮಹೇಶ ಕಾಪಸೆ, ಪಬ್ಲಿಕ್ ಸೈಕಲ್ ಸವಾರಿ ಪ್ರಾಜೆಕ್ಟ್ ಮ್ಯಾನೇಜರ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ