ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಿ

KannadaprabhaNewsNetwork |  
Published : Mar 09, 2025, 01:47 AM IST
ಲೋಕಾಪುರ | Kannada Prabha

ಸಾರಾಂಶ

ಲೋಕಾಪುರ ಪ್ರಾಥಮಿಕ ಆರೋಗ್ಯ ಕೆಂದ್ರವನ್ನು ಸಮುದಾಯ ಆರೋಗ್ಯ ಕೆಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಸ್ಥಳೀಯ ಮುಖಂಡರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪಟ್ಟಣದ ಪ್ರಾಥಮಿಕ ಆರೋಗ್ಯ ಕೆಂದ್ರವನ್ನು ಸಮುದಾಯ ಆರೋಗ್ಯ ಕೆಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು. ಇದನ್ನು ಮೇಲ್ದರ್ಜೆಗೆ ಏರಿಸಿ ಕನಿಷ್ಠ ೫೦ ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರತಿನಿತ್ಯ ನೂರಾರು ರೋಗಿಗಳು ಆಗಮಿಸುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬ ಕೂಗು ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಆದ್ರೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರಿಗೆ ಹೈಟೆಕ್ ಆರೋಗ್ಯ ಸೇವೆ ಮರೀಚಿಕೆಯಾಗಿದೆ.

ಸ್ಥಳೀಯ ಪಂಚಮಸಾಲಿ ಸಮಾಜದ ಮುಖಂಡ ಪ್ರಕಾಶ ಚುಳಕಿ ಮಾತನಾಡಿ, ಮುಧೋಳದಿಂದ ೨೩ ಕಿ.ಮೀ ದೂರದಲ್ಲಿರುವ ಮುಧೋಳ ತಾಲೂಕು ಕೇಂದ್ರದಷ್ಟೇ ಪ್ರಾಮುಖ್ಯತೆ ಲೋಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಹೊಂದಿದೆ. ಪ್ರತಿ ದಿವಸ ನೂರಾರು ಜನರು ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಳ್ಳುತ್ತಾರೆ. ೨೪ ಹಳ್ಳಿಗಳ ನೂರಾರು ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಮುಧೋಳ, ಬಾಗಲಕೋಟೆ ದೂರವಾದ ಕಾರಣ ಲೋಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿದರೆ ಬಡವರಿಗೆ ವರದಾನವಾಗುತ್ತದೆ. ಸೂಕ್ತ ಸೌಲಭ್ಯ ಇಲ್ಲದೇ ಮೂಲಭೂತ ಸೌಕರ್ಯದ ಕೊರತೆಯೂ ಇದ್ದು, ಎಂಬಿಬಿಎಸ್ ಓದಿರುವ ವೈದ್ಯರ ಕೊರತೆಯೂ ಇದೆ ಎಂದರು.

ಕಳೆದ ಹಲವಾರು ವರ್ಷಗಳಿಂದ ಆಯುರ್ವೇದ ವೈದ್ಯರೇ ಪೂರ್ಣ ಪ್ರಮಾಣದಲ್ಲಿ ಆಸ್ಪತ್ರೆ ನೋಡಿಕೊಳ್ಳುತ್ತಿದ್ದು, ಎಂಬಿಬಿಎಸ್ ವೈದ್ಯರ ಅವಶ್ಯಕತೆಯಿದೆ. ಅಲ್ಲದೇ ಅಸ್ಪತ್ರೆ ಮೇಲ್ದರ್ಜೆಗೆ ಏರಿಸಿ ಕನಿಷ್ಠ ೫೦ ಹಾಸಿಗೆಯ ಸುಸಜ್ಜಿತೆ ಆಸ್ಪತ್ರೆಯನ್ನಾದರೂ ಮಾಡಿಕೊಡಬೇಕು ಎನ್ನುವ ಬೇಡಿಕೆ ಸ್ಥಳೀಯರದ್ದಾಗಿದೆ.

ಮುಖಂಡ ಅರುಣ ನರಗುಂದ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಹಾಗೂ ಜನದಟ್ಟಣೆ ಹೆಚ್ಚಿತ್ತಿರುವ ಪಟ್ಟಣಗಳಲ್ಲಿ ಲೋಕಾಪುರ ಪಟ್ಟಣ ಪಂಚಾಯತಿಯು ಮುಂಚೂಣೆಯಲ್ಲಿದೆ. ಇಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಈ ನೆಲೆಯಲ್ಲಿ ಈ ಅಸ್ಪತ್ರೆ ಮೇಲ್ದರ್ಜೆಗೇರಿಸಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಇದೆ ಎಂದರು.

ದಲಿತ ಮುಖಂಡ ಮಹೇಶ ಹುಗ್ಗಿ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ೫ ಉಪಕೇಂದ್ರ ಮತ್ತು ೨೨ ಹಳ್ಳಿಗಳನ್ನು ಹೊಂದಿರುತ್ತದೆ. ಆದ್ದರಿಂದ ಇದನ್ನು ಸಾರ್ವಜನಿಕರ ಹಿತಾದೃಷ್ಟಿ ಸಲುವಾಗಿ ಸಮುದಾಯ ಆರೋಗ್ಯ ಕೆಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕೆಂದು ಮನವಿ ಮಾಡಿದರು.

ಈ ವೇಳೆ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಲೋಕಣ್ಣ ಉಳ್ಳಾಗಡ್ಡಿ, ಯುವ ಘಟಕದ ರಾಜ್ಯಾಧ್ಯಕ್ಷ ಪ್ರಮೋದ ತೆಗ್ಗಿ, ಅರುಣ ನರಗುಂದ, ವಿನಾಯಕ ಗಂಗಣ್ಣವರ, ರವಿ ಚೌಧರಿ ಇದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ