ರಟ್ಟೀಹಳ್ಳಿಯ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಲು ಸಾರ್ವಜನಿಕರ ಮನವಿ

KannadaprabhaNewsNetwork |  
Published : May 29, 2025, 01:14 AM IST
ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ ಅವರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ರಟ್ಟೀಹಳ್ಳಿಯ ಹಲವೆಡೆ ರಾತ್ರಿ ಸಮಯದಲ್ಲಿ ಬೀದಿದೀಪಗಳು ಉರಿಯದ ಕಾರಣ ಈ ಭಾಗಗಳಲ್ಲಿ ಓಡಾಡುವುದೇ ದುಸ್ತರವಾಗಿದೆ. ಅಲ್ಲದೆ ಹಾವು- ಚೇಳುಗಳ ಕಾಟ ಹಾಗೂ ಇತ್ತೀಚಿನ ದಿನಗಳಲ್ಲಿ ಹಂದಿಗಳ ಕಾಟವು ಹೆಚ್ಚಾಗಿದೆ.

ರಟ್ಟೀಹಳ್ಳಿ: ಪಟ್ಟಣದ ಕೋಟೆ ಓಣಿ, ಉಪ್ಪಾರ ಓಣಿ ಸೇರಿದಂತೆ ವಿವಿಧ ಓಣಿಗಳಲ್ಲಿ ಮೂಲ ಸೌಲಭ್ಯಗಳಿಲ್ಲದೆ ಪಟ್ಟಣ ಪಂಚಾಯಿತಿಯವರ ನಿರ್ಲಕ್ಷ್ಯದಿಂದ ಸೊರಗುತ್ತಿದ್ದು, ಆದಷ್ಟು ಬೇಗ ಮೂಲ ಸೌಲಭ್ಯ ಕಲ್ಪಿಸುವಂತೆ ಅಲ್ಲಿನ ನಿವಾಸಿಗಳು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸುಶೀಲ್‍ಕುಮಾರ ನಾಡಗೇರ ಮಾತನಾಡಿ, ಪಟ್ಟಣದ ಕೋಟೆ ಭಾಗದ ಉಪ್ಪಾರ ಕೇರಿ, ಕೆಳಗೇರಿ, ಐರಣಿಯವರ ಮನೆ ಮುಂಭಾಗ, ಕದಂಬೇಶ್ವರ ದೇವಸ್ಥಾನ ಹತ್ತಿರ, ಗೌಡರ ಓಣಿ, ದಿಡ್ಡಿಗೇರಿ ಸೇರಿದಂತೆ ವಿವಿಧ ಭಾಗಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಪ್ರಮುಖವಾಗಿ ಇಲ್ಲಿನ ಗಟಾರಗಳು ತುಂಬಿ ತುಳುಕಿ ರಸ್ತೆ ಮೇಲೆ ಗಲೀಜು ನೀರು ಹರಿದು ಗಬ್ಬು ನಾರುತ್ತಿವೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದ್ದು, ಮಕ್ಕಳು, ವೃದ್ಧರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಸ್ಥಳೀಯ ಪಟ್ಟಣ ಪಂಚಾಯಿತಿಯವರಿಗೆ ಮನವಿ ಮಾಡಿದರೂ ಸಿಬ್ಬಂದಿ ಕ್ಯಾರೆ ಎನ್ನುತ್ತಿಲ್ಲ ಎಂದು ಆರೋಪಿಸಿದರು.

ರಾತ್ರಿ ಸಮಯದಲ್ಲಿ ಬೀದಿದೀಪಗಳು ಉರಿಯದ ಕಾರಣ ಈ ಭಾಗಗಳಲ್ಲಿ ಓಡಾಡುವುದೇ ದುಸ್ತರವಾಗಿದೆ. ಅಲ್ಲದೆ ಹಾವು- ಚೇಳುಗಳ ಕಾಟ ಹಾಗೂ ಇತ್ತೀಚಿನ ದಿನಗಳಲ್ಲಿ ಹಂದಿಗಳ ಕಾಟವು ಹೆಚ್ಚಾಗಿದ್ದು, ಭಯದಿಂದಲೇ ಸಂಚರಿಸುವಂತಾಗಿದೆ. ಈ ಭಾಗಗಳಲ್ಲಿ ಶೇ. 90ರಷ್ಟು ನಾಗರಿಕರು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಪ್ರತಿದಿನ ದುಡಿದು ತಿನ್ನುವ ಶ್ರಮಿಕ ವರ್ಗದವರೇ ಹೆಚ್ಚಿದ್ದು, ಯಾವುದಾದರೂ ಅನಾಹುತವಾದಲ್ಲಿ ಹಣ ಖರ್ಚು ಮಾಡಿ ಚಿಕಿತ್ಸೆ ಪಡೆಯುವುದೇ ದೊಡ್ಡ ಪ್ರಶ್ನೆಯಾಗಿದೆ. ಇಲ್ಲಿನ ನಿವಾಸಿಗಳಿಗೆ ಯಾವುದೇ ತೊಂದರೆಯಾದಲ್ಲಿ ಪಟ್ಟಣ ಪಂಚಾಯತಿಯವರೇ ನೇರ ಹೊಣೆಗಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇವಿಂದ್ರಪ್ಪ ಗುತ್ತಲ, ರಾಘವೇಂದ್ರ ಹದಡಿ, ಶಿವರಾಜ ಹದಡಿ, ಶಾಮರಾವ್ ಜಾಧವ್, ರಾಮು ಉಪ್ಪಾರ, ಕಿರಣ ಕಡೂರ, ಕರಿಬಸಪ್ಪ ಅಸ್ವಾಲಿ, ಕೃಷ್ಣರಾಜ್ ವೇರ್ಣೇಕರ್, ಸಂಜೀವ ಹದಡಿ, ಸಿದ್ದನಗೌಡ ಪಾಟೀಲ್, ರಾಮು ಬಳ್ಳೇಸೂರ, ಸುನೀಲ ಕಟ್ಟಿಮನಿ ಮುಂತಾದವರು ಇದ್ದರು.ಮಿಲಿಟರಿ ಬಾಲಕಿಯರ ವಸತಿನಿಲಯದ ಪ್ರವೇಶಕ್ಕೆ ಅರ್ಜಿ ಆಹ್ವಾನ

ಹಾವೇರಿ: ಧಾರವಾಡ ಶಹರದ ಸಪ್ತಾಪುರ ರಸ್ತೆಯಲ್ಲಿರುವ ಮಿಲಿಟರಿ ಬಾಲಕಿಯರ ವಸತಿನಿಲಯದಲ್ಲಿ 2025- 26ನೇ ಶೈಕ್ಷಣಿಕ ವರ್ಷಕ್ಕಾಗಿ ಧಾರವಾಡ, ಗದಗ, ಹಾವೇರಿ, ಮತ್ತು ಬಳ್ಳಾರಿ ಜಿಲ್ಲೆಗಳ ಗ್ರಾಮಾಂತರ ಪ್ರದೇಶ, ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿರುವ ಯುದ್ಧದಲ್ಲಿ ಮಡಿದ ಯೋಧರ ಮತ್ತು ಮಾಜಿ ಸೈನಿಕರ ಹೆಣ್ಣುಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ 5ನೇ ತರಗತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ವಸತಿನಿಲಯದಲ್ಲಿ ವಾಸ್ತವ್ಯ ಮತ್ತು ಊಟೋಪಚಾರಗಳು ಉಚಿತವಾಗಿದ್ದು, ಮಾಜಿ ಸೈನಿಕರ ಹೆಣ್ಣುಮಕ್ಕಳು ಈ ಸೌಲಭ್ಯದ ಉಪಯೋಗ ಪಡೆಯಬಹುದು. ವಸತಿನಿಲಯದಲ್ಲಿ ಧಾರವಾಡ ನಗರದಲ್ಲಿರುವ ವಿದ್ಯಾ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಮಾತ್ರ ನಿಲಯದಲ್ಲಿ ಪ್ರವೇಶ ನೀಡಲಾಗುವುದು.ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಮೇ 31ರೊಳಗಾಗಿ ಸಲ್ಲಿಸಬಹುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಉದಯ ಹಾಸ್ಟೆಲ್ ಸರ್ಕಲ್ ಸೈನಿಕ ವಿಶ್ರಾಂತಿಗೃಹ ಆವರಣ, ಧಾರವಾಡ ದೂ. 0836- 2440176 ಸಂಪರ್ಕಿಸಲು ಕೋರಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''