ದಾಬಸ್‌ಪೇಟೆ: ಕಳೆದ ಹದಿನೈದು ದಿನಗಳಿಂದ ಸೋಂಪುರ ಹೋಬಳಿಯಾದ್ಯಂತ ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪ್ರತಿ ಹಳ್ಳಿಗಳಲ್ಲಿ, ಜನನಿಬೀಡ ಪ್ರದೇಶ, ಕೈಗಾರಿಕೆಗಳಲ್ಲಿ ಕಳ್ಳತನದ ಬಗ್ಗೆ, ಕಳ್ಳರ ಬಗ್ಗೆ ನಿಗಾ ವಹಿಸುವಂತೆ ಪೊಲೀಸರು ಜನಜಾಗೃತಿ ಮೂಡಿಸುತ್ತಿದ್ದಾರೆ.
ಪಿಎಸ್‌ಐ ವಿಜಯಕುಮಾರಿ ಮಾತನಾಡಿ, ನೆಲಮಂಗಲ ತಾಲೂಕಾದ್ಯಂತ ಕಳ್ಳರ ಕಾಟ ಹೆಚ್ಚುತ್ತಿದ್ದು, ಒಂಟಿ ಮನೆ, ದೇವಾಲಯ ಸೇರಿದಂತೆ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಮಹಿಳೆಯರು ಚಿನ್ನಾಭರಣ ಧರಿಸಿ ಪ್ರದರ್ಶಿಸಬೇಡಿ. ದ್ವಿಚಕ್ರ ವಾಹನ ಅಥವಾ ಕಾರುಗಳನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿ ಹ್ಯಾಂಡಲ್ ಲಾಕ್ ಮಾಡಿ, ಬ್ಯಾಂಕುಗಳಿಂದ ಹೆಚ್ಚಿನ ಹಣಪಡೆಯಲು ಮತ್ತು ಕಟ್ಟಲು ಅಥವಾ ಎಟಿಎಂನಿಂದ ಹಣ ತೆಗೆಯುವಾಗ ಅಪರಿಚಿತರ ಸಹಾಯ ಪಡೆಯಬೇಡಿ. ನಿಮ್ಮ ಗಮನವನ್ನು ಬೇರೆಡೆ ಸೆಳೆದು ಬೆಲೆಬಾಳುವ ವಸ್ತುಗಳನ್ನು ಅಪಹರಿಸುತ್ತಿದ್ದಾರೆ ಎಂದರು.
ಪಿಎಸ್‌ಐ ಸಿದ್ದಪ್ಪ ಮಾತನಾಡಿ, ಅಪರಿಚಿತರೊಂದಿಗೆ ವ್ಯವಹರಿಸಬೇಡಿ. ವಿಳಾಸ ಮತ್ತು ಫೋನ್ ನಂಬರ್ ಕೊಡಬೇಡಿ. ಮನೆಗಳ ಹತ್ತಿರ ಕುಡಿಯುವ ನೀರು, ಕೆಲಸ, ವಿಳಾಸ ಕೇಳುವ ನೆಪದಲ್ಲಿ ಬರುವ ಮತ್ತು ಪೊಲೀಸರ ಸೋಗಿನಲ್ಲಿ ಬರುವ ವ್ಯಕ್ತಿಗಳೊಂದಿಗೆ ಜಾಗರೂಕರಾಗಿರಬೇಕು. ಮನೆ ಮತ್ತು ಅಂಗಡಿಗಳಲ್ಲಿ ಹೆಚ್ಚಿನ ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡು ಜಾಗೃತರಾಗಿ ಎಂದು ಹೇಳಿದರು.