ಕನ್ನಡಪ್ರಭ ವಾರ್ತೆ ಪಾಂಡವಪುರ
ಚಳವಳಿಗಳ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಾ, ಹೋರಾಟ ಮಾಡುತ್ತಲೇ ಮಡಿದ ರೈತ ಹುತಾತ್ಮರನ್ನು ನಾಡಿನ ಜನ ಎಂದಿಗೂ ಮರೆಯಬಾರದು ಎಂದು ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ ಹೇಳಿದರು.ರೈತ ಹುತಾತ್ಮ ದಿನಾಚರಣೆ ಪ್ರಯುಕ್ತ ತಾಲೂಕಿನ ಕ್ಯಾತನಹಳ್ಳಿಯಲ್ಲಿ ರೈತನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಪುತ್ಥಳಿಗೆ ಭಾನುವಾರ ಪೂಜೆ ಸಲ್ಲಿಸಿ ಹಾಗೂ ರೈತಸಂಘದ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದರು.
ರಾಜ್ಯದಲ್ಲಿ ಆಡಳಿತ ನಡೆಸಿದ ಅನೇಕ ಸರ್ಕಾರಗಳು ಕೈಗೊಳ್ಳುತ್ತಿದ್ದ ಕೆಲ ರೈತ ವಿರೋಧಿ ತೀರ್ಮಾನಗಳನ್ನು ಖಂಡಿಸುವ ಹೋರಾಟದಲ್ಲಿ ಭಾಗಿಯಾಗಿ ಸಾಕಷ್ಟು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ ನೂರಾರು ರೈತ ಚಳವಳಿಗಾರರು ನಮ್ಮಿಂದ ದೂರವಾಗಿದ್ದಾರೆ. ಹೋರಾಟದ ಮೂಲಕ ಚಳವಳಿಗಳಿಗೆ ಶಕ್ತಿ ತುಂಬಿದ ಇಂತಹ ಮಹಾನುಭಾವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ತಿಳಿಸಿದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರ ಹಾದಿಯಲ್ಲೇ ನಡೆಯುತ್ತಾರೆ ಎಂಬ ವಿಶ್ವಾಸ ಎಲ್ಲರಲ್ಲೂ ಬಲವಾಗಿದೆ. ಇದಕ್ಕಾಗಿಯೇ ಮೇಲುಕೋಟೆ ಕ್ಷೇತ್ರದ ಮತದಾರರು ದರ್ಶನ್ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ರೈತ ಚಳವಳಿಯ ಜತೆ ಜತೆಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಕಡೆ ಗಮನ ಹರಿಸುವುದು ಮತ್ತು ಜನರ ಪ್ರೀತಿ, ವಿಶ್ವಾಸವನ್ನು ದರ್ಶನ್ ಗಳಿಸಲಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ ಮಾತನಾಡಿ, ಪ್ರೊ.ನಂಜುಂಡಸ್ವಾಮಿ, ಸುಂದರೇಶ್, ಕೆ.ಎಸ್.ಪುಟ್ಟಣ್ಣಯ್ಯ ಸೇರಿ ಅನೇಕ ರೈತ ಹೋರಾಟಗಾರರು ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಕೊಡಿಸಲು ಹೋರಾಟ ಮಾಡಿದರು ಎಂದು ತಿಳಿಸಿದರು.ಸರ್ಕಾರಿ ಕಚೇರಿ ಅಧಿಕಾರಿಗಳು ರೈತರನ್ನು ಕಚೇರಿಗೆ ಅಲೆಸುವುದನ್ನು ವಿರೋಧಿಸಿ ಚಳವಳಿ ಮೂಲಕ ಅಧಿಕಾರಿಗಳಿಗೆ ಬುದ್ಧಿ ಕಲಿಸುತ್ತಿದ್ದರು. ಈಗಲೂ ಕೂಡ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಈಗಲೂ ಕಬ್ಬಿಗೆ ಅವೈಜ್ಞಾನಿಕ ಬೆಲೆ ನೀಡಲಾಗುತ್ತಿದೆ. ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಕ್ಕರೆ ಮಾತ್ರ ರೈತ ಬದುಕಲು ಸಾಧ್ಯ. ರಾಜಕಾರಣಿಗಳು ಆರೋಪ, ಪ್ರತ್ಯಾರೋಪಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ರೈತರ ಬಗ್ಗೆ ಯಾರೂ ಚಿಂತಿಸುತ್ತಿಲ್ಲ ಎಂದು ವಿಷಾದಿಸಿದರು.
ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್, ರೈತಸಂಘ ಮಹಿಳಾ ಅಧ್ಯಕ್ಷ ಕೋಕಿಲಾ ಜ್ಞಾನೇಶ್, ಮುಖಂಡರಾದ ಮಹದೇವು, ವಿಶ್ವನಾಥ್ ಇತರರು ಇದ್ದರು.