ಸಮ್ಮತಿ ಇಲ್ಲದೆ ಪಿತ್ರಾರ್ಜಿತ ಆಸ್ತಿ ಮಾರಾಟ: ಸಿಎಂ ಪತ್ನಿ ಹೆಸರಿಗೆ ಮಾಡಿರುವುದು ಊರ್ಜಿತಾ ಅಲ್ಲ

KannadaprabhaNewsNetwork |  
Published : Jul 22, 2024, 01:17 AM IST
32 | Kannada Prabha

ಸಾರಾಂಶ

ಎಂಡಿಎ ರೂಪಿಸಿರುವ 50:50 ಅನುಪಾತದ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ. ಆದರೆ ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿಗೆ ಬಂದಿದ್ದ ಕೆಸರೆಯಲ್ಲಿನ ಸರ್ವೇ ನಂ. 464ರ 3.16 ಎಕರೆ ಜಾಗವನ್ನು ಮಾರಾಟ ಮಾಡಿದ್ದು, ಅದು ಪಿತ್ರಾರ್ಜಿತ ಆಸ್ತಿ. ಆದರೂ ಕುಟುಂಬ ಇತರ ಸದಸ್ಯರ ಸಮ್ಮತಿ ಪಡೆಯದೆ ಮಾರಾಟ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮಾರಾಟ ಮಾಡಲಾದ ಜಮೀನು ಪಿತ್ರಾರ್ಜಿತ ಆಸ್ತಿಯಾಗಿದ್ದು, ಕುಟುಂಬದ ಇತರರ ಸಮ್ಮತಿ ಇಲ್ಲದೆ ಮಾರಾಟ ಮಾಡಿರುವುದರಿಂದ ಕುಟುಂಬ ಸದಸ್ಯರಿಗೆ ಪರಿಹಾರ ಕೊಡಿಸಲು ಯತ್ನಿಸಲಾಗುತ್ತಿದೆ ಎಂದು ಮಾಜಿ ಸಚಿವ ಎನ್‌. ಮಹೇಶ್‌ ತಿಳಿಸಿದರು.

ಎಂಡಿಎ ರೂಪಿಸಿರುವ 50:50 ಅನುಪಾತದ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ. ಆದರೆ ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿಗೆ ಬಂದಿದ್ದ ಕೆಸರೆಯಲ್ಲಿನ ಸರ್ವೇ ನಂ. 464ರ 3.16 ಎಕರೆ ಜಾಗವನ್ನು ಮಾರಾಟ ಮಾಡಿದ್ದು, ಅದು ಪಿತ್ರಾರ್ಜಿತ ಆಸ್ತಿ. ಆದರೂ ಕುಟುಂಬ ಇತರ ಸದಸ್ಯರ ಸಮ್ಮತಿ ಪಡೆಯದೆ ಮಾರಾಟ ಮಾಡಲಾಗಿದೆ. ಆದ್ದರಿಂದ ಕುಟುಂಬದ ಇತರ ಸದಸ್ಯರಿಗೆ ಪರಿಹಾರ ದೊರಕಿಸಿಕೊಡಬೇಕು. ಈ ನಿಟ್ಟಿನಲ್ಲಿ ನಾವು ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಿರುವುದಾಗಿ ಅವರು ಹೇಳಿದರು.

1935 ರಲ್ಲಿ ನಿಂಗ ಎಂಬವರು ಗ್ರಾಂಟ್‌ ಖರೀದಿಸಿದರು. ಅವರಿಗೆ ಮೈಲಾರಯ್ಯ, ಮೈಲಾರ್ಯ ಹಾಗೂ ಜವರ ಎಂಬ ಮೂವರು ಮಕ್ಕಳಿದ್ದರು. ಇವರಲ್ಲಿ ಜವರಯ್ಯ ಎಂಬವರು ಸಿಎಂ ಪತ್ನಿ ಪಾರ್ವತಮ್ಮ ಅವರ ಸಹೋದರ ಮಲ್ಲಿಕಾರ್ಜುನಸ್ವಾಮಿ ಅವರಿಗೆ ಆ ಜಮೀನು ಮಾರಿದ್ದಾರೆ. ಇದು ಪಿತ್ರಾರ್ಜಿತ ಆಸ್ತಿಯಾಗಿರುವ ಕಾರಣ ಇನ್ನುಳಿದ ಸಹೋದರರು ಅಥವಾ ಅವರ ಮಕ್ಕಳ ಸಹಿ, ಸಮ್ಮತಿ ಪಡೆದು ಮಾರಾಟ ಮಾಡಬೇಕಾಗಿತ್ತು. ಆದರೆ ಆ ರೀತಿ ಮಾಡಿಲ್ಲ. ತಾವೊಬ್ಬರೇ ಹೇಗೋ ಇತರರ ಹಕ್ಕು ಖುಲಾಸೆ ಮಾಡಿಸಿ ಮಾರಾಟ ಮಾಡಿದ್ದಾರೆ ಎಂದು ಅವರು ದೂರಿದರು.

ಹೀಗಾಗಿ ಸಿಎಂ ಪತ್ನಿಯ ಸಹೋದರರೊಬ್ಬರಿಗೆ ಆ ಜಮೀನು ಮಾರಾಟ ಮಾಡಿರುವುದೇ ಊರ್ಜಿತವಲ್ಲ. ಅಲ್ಲದೆ, ಎಂಡಿಎ ಆ ಜಮೀನಿನಲ್ಲಿ ನಿವೇಶನ ನಿರ್ಮಾಣ ಮಾಡಿ, ಅದಕ್ಕೆ ಸಂಬಂಧಿಸಿದಂತೆ 50:50 ಅನುಪಾತದ ಪ್ರಕಾರ ಸಿಎಂ ಪತ್ನಿ ಪಾರ್ವತಮ್ಮ ಅವರಿಗೆ ಕೆಲ ನಿವೇಶನ ನೀಡಿದೆ. ಹಗರಣ ಬೆಳಕಿಗೆ ಬಂದ ನಂತರ ಸಿಎಂ ಹೇಳಿಕೆ ನೀಡಿ, ತಮಗೆ ನಿವೇಶನ ಬೇಡ, ಬದಲಾಗಿ ಆ ಜಮೀನಿನ ಈಗಿನ ಮೌಲ್ಯವಾದ 62 ಕೋಟಿ ಪರಿಹಾರ ನೀಡಲಿ ಎಂದು ಕೇಳಿದ್ದಾರೆ. ವಾಸ್ತವವಾಗಿ ಆ ಪರಿಹಾರದಲ್ಲಿ ಜಮೀನಿನ ಮೂಲ ಹಕ್ಕುದಾರರಿಗೂ ಪಾಲು ಬರಬೇಕಾಗಿದೆ ಎಂದು ಎನ್‌. ಮಹೇಶ್‌ ವಾದಿಸಿದರು.

ಇದೇ ವೇಳೆ, ಮೂಲ ಮಾರಾಟದಲ್ಲಿಯೇ ಗೊಂದಲವುಂಟಾಗಿದ್ದು, ತಾವು ಮೂಲ ಕುಟುಂಬದ ಕೆಲವರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದೇವೆ. ತಮಗೆ ಆದು ಮಾರಾಟ ಆಗಿರುವುದು ತಿಳಿದಿರಲಿಲ್ಲ. ಪಿತ್ರಾರ್ಜಿತ ಆಸ್ತಿಯಲ್ಲಿ ತಮಗೂ ಪಾಲು ಬರಬೇಕಾಗಿತ್ತು. ಆದರೆ ಅದು ತಪ್ಪಿ ಹೋಗಿದೆ. ಹೀಗಾಗಿ ದಲಿತ ಕುಟುಂಬದವರಾದ ತಮಗೆ ಅದಕ್ಕೆ ಸಂಬಧಿಸಿದ ಪರಿಹಾರದಲ್ಲಿ ಪಾಲು ಬರಬೇಕು ಎಂದು ಅವರು ತಿಳಿಸಿದರು.

ಈ ನಿಟ್ಟಿನಲ್ಲಿ ತಾವು ಡಿಸಿಗೂ ಕುಟುಂಬದವರಿಂದ ಮನವಿ ಕೊಡಿಸಿದ್ದು, ಸಂಬಂಧ ದಲಿತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್‌. ಶ್ರೀವತ್ಸ, ಮಾಜಿ ಶಾಸಕ ಎಸ್. ಬಾಲರಾಜು, ಮಾಜಿ ಉಪ ಮೇಯರ್ ವಿ. ಶೈಲೇಂದ್ರ, ಪಾಲಿಕೆ ಮಾಜಿ ಸದಸ್ಯೆ ಅಶ್ವಿನಿ ಶರತ್, ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ಕೌಟಿಲ್ಯ ರಘು ಇದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು