ದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಜನರಲ್ಲಿ ಸುರಕ್ಷತೆಯ ಭಾವನೆ ಕಟ್ಟಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಶೇಖರ ಎಚ್. ಟೆಕ್ಕಣ್ಣನವರ್ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು.
ಸಶಸ್ತ್ರ ಮೀಸಲು ಪೊಲೀಸ್ ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ನಾಗರೀಕ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಒಳಗೊಂಡಂತೆ ಮಾರ್ಗದುದ್ದಕ್ಕೂ ದುಗ್ಗಮ್ಮನ ಜಾತ್ರೆ ಭಕ್ತರು, ಸಾರ್ವಜನಿಕರು ಯಾವುದೇ ಭಯ, ಆತಂಕವಿಲ್ಲದೇ ಆಚರಿಸುವಂತೆ ಅಭಯ ನೀಡುವ ಜೊತೆಗೆ ಸಮಾಜಘಾತುಕ ಶಕ್ತಿಗಳು, ರೌಡಿ ಶೀಟರ್‌ಗಳು, ಪುಡಿ ರೌಡಿಗಳು, ಕಿಡಿಗೇಡಿಗಳಿಗೆ ಪೊಲೀಸ್ ಇಲಾಖೆಯು ಪಥ ಸಂಚಲನದ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿತು.
ರಾಜ್ಯ, ರಾಷ್ಟ್ರ, ವಿದೇಶಗಳಿಂದಲೂ ದುಗ್ಗಮ್ಮನ ಜಾತ್ರೆಗೆ ಲಕ್ಷಾಂತರ ಜನ ಭಕ್ತರು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಧರ್ಮದರ್ಶಿಗಳ ಸಮಿತಿಯಿಂದ ಅಂತಿಮ ಸಿದ್ಧತೆಗಳು ನಡೆದಿವೆ. ಪ್ರತಿಯೊಂದು ಮನೆಗಳೂ ಸುಣ್ಣ ಬಣ್ಣ ಬಳಿದುಕೊಂಡು ಕಂಗೊಳಿಸುತ್ತಿವೆ. ದೇವಸ್ಥಾನ ಸಮಿತಿ ಸಹ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಪಾಲಿಕೆ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಜಾತ್ರೋತ್ಸವದ ವೇಳೆ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸುತ್ತಿದೆ.ಪಥ ಸಂಚಲನ ಸಾಗಿದ ಮಾರ್ಗದುದ್ದಕ್ಕೂ ಕೈಯಲ್ಲಿ ಲಾಠಿ, ಶಸ್ತ್ರ ಹಿಡಿದ ಆರ್‌ಎಎಫ್ ತಂಡದ ಅಧಿಕಾರಿ, ಸಿಬ್ಬಂದಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸರು, ನಾಗರೀಕ ಪೊಲೀಸ್ ಸಿಬ್ಬಂದಿ ಪಥ ಸಂಚಲನದಲ್ಲಿ ಸಾಗುತ್ತ, ಭಕ್ತಾದಿಗಳು, ಸಾರ್ವಜನಿಕರು ಭಯಮುಕ್ತರಾಗಿ ಜಾತ್ರೆ ಆಚರಿಸುವಂತೆ ಭರವಸೆ ಮೂಡಿಸಿದರು. ಮಾರ್ಗದ ಉದ್ದಕ್ಕೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ಪಥ ಸಂಚಲನವನ್ನು ಸಾರ್ವಜನಿಕರು, ದಾರಿಹೋಕರು, ಮಕ್ಕಳು ನಿಂತು ನೋಡುತ್ತಿದ್ದರು. ನಗರದ ವಿವಿಧೆಡೆ ನಿತ್ಯವೂ ಪಥ ಸಂಚಲನ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ.
- - -
* ರೌಡಿಗಳು, ಸಮಾಜಘಾತುಕರಿಗೆ ಎಸ್‌ಪಿ ಶೇಖರ್ ಎಚ್ಚರಿಕೆ
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತ್ರೋತ್ಸವದ ಹಿನ್ನೆಲೆ ಎಲ್ಲ ಕಡೆ ಭದ್ರತಾ ಕ್ರಮಗಳನ್ನು, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಪಥ ಸಂಚಲನದಲ್ಲಿ ಆರ್‌ಎಎಪ್ ಜೊತೆಗೆ ನಮ್ಮ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಹ ಸುಮಾರು 2 ಕಿಮೀ ರೂಟ್ ಮಾರ್ಚ್ ಮಾಡಿದ್ದೇವೆ ಎಂದರು.
ಸಾರ್ವಜನಿಕರಲ್ಲಿ ಇರುವಂತಹ ಭಯದ ವಾತಾವರಣ ನಿವಾರಿಸಿ, ಭರವಸೆಯಿಂದ ಹಬ್ಬ, ಜಾತ್ರೆ ಆಚರಿಸಲು ಪಥ ಸಂಚಲನ ಸಹಕಾರಿಯಾಗಲಿದೆ. ದಾವಣಗೆರೆ ನಗರ, ಜಿಲ್ಲೆಯ ಸಮಾಜಘಾತುಕ ಶಕ್ತಿಗಳು, ರೌಡಿಗಳು, ರೌಡಿ ಶೀಟರ್‌ಗಳು, ಪುಡಿ ರೌಡಿಗಳು, ಕಿಡಿಗೇಡಿಗಳು ಸೇರಿದಂತೆ ಹಬ್ಬದ ವಾತಾವರಣವನ್ನು ಕದಡುವವರಿಗೆ ಎಚ್ಚರಿಕೆ ನೀಡುವುದು ಸಹ ಪಥ ಸಂಚಲನದ ಉದ್ದೇಶ ಎಂದು ಜಿಲ್ಲಾ ಎಸ್‌ಪಿ ಅವರು ಸ್ಪಷ್ಟಪಡಿಸಿದರು.
-16ಕೆಡಿವಿಜಿ3, 4.ಜೆಪಿಜಿ: