ಶ್ರೀಮಂಗಲದಲ್ಲಿ ಸಿಎನ್‌ಸಿಯಿಂದ ಜನಜಾಗೃತಿ ಮಾನವ ಸರಪಳಿ

KannadaprabhaNewsNetwork |  
Published : Oct 01, 2024, 01:41 AM IST
ಚಿತ್ರ :  30ಎಂಡಿಕೆ4 : ಶ್ರೀಮಂಗಲದಲ್ಲಿ ಜನಜಾಗೃತಿ ಮಾನವ ಸರಪಳಿ ನಡೆಸಲಾಯಿತು.  | Kannada Prabha

ಸಾರಾಂಶ

ಕೊಡಗು ಜಿಲ್ಲೆಯ ವಿವಿಧೆಡೆ ಬೃಹತ್‌ ಭೂ ಪರಿವರ್ತನೆ ಮತ್ತು ಭೂ ವಿಲೇವಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣದಲ್ಲಿ ತೊಡಗಿರುವ ಉದ್ಯಮಪತಿ ಬಂಡವಾಳಶಾಹಿಗಳು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮೂಲಕ ಕೊಡವರ ಮಾತೃಭೂಮಿ ಕೊಡವಲ್ಯಾಂಡ್ ಮೇಲೆ ನಡೆಸುತ್ತಿರುವ ನಯವಂಚನೆಯ ಸಂಚನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬಯಲು ಮಾಡಲಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಸಿಎನ್ಸಿ ವತಿಯಿಂದ ಶ್ರೀಮಂಗಲದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

ಗಣೇಶೋತ್ಸವ, ದಸರಾ, ಹಾಕಿ ಉತ್ಸವ, ದೇವಾಲಯಗಳ ಹಬ್ಬಗಳಿಗೆ ದೇಣಿಗೆ ನೀಡುತ್ತಿರುವ ಭೂಮಾಫಿಯಾಗಳು ದಾನ, ಧರ್ಮ, ಪರಿಸರ ಸಂರಕ್ಷಣೆಯ ನಾಟಕವಾಡುತ್ತಿದ್ದಾರೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಸಮಾಜಸೇವೆಯ ಮುಖವಾಡ ತೊಟ್ಟುಕೊಂಡಿದ್ದಾರೆ. ಈ ನಯವಂಚಕತನದ ಷಡ್ಯಂತ್ರವನ್ನು ಸಿಎನ್ಸಿ ಸಂಘಟನೆ ಹೋರಾಟದ ಮೂಲಕ ಬಯಲು ಮಾಡಲಿದೆ ಎಂದರು.

ಮಾಫಿಯಾಗಳು ನೀಡುವ ಆಮಿಷಗಳನ್ನು ತಿರಸ್ಕರಿಸಿ ಭೂಅಕ್ರಮಗಳ ವಿರುದ್ಧ ಕೊಡವರು ಜಾಗೃತರಾಗದಿದ್ದಲ್ಲಿ ಕೊಡವ ಲ್ಯಾಂಡ್ ನ್ನು ಕಳೆದುಕೊಳ್ಳುವ ಹೀನಾಯ ಸ್ಥಿತಿ ಬರಬಹುದೆಂದು ಎನ್.ಯು.ನಾಚಪ್ಪ ಬೇಸರ ವ್ಯಕ್ತಪಡಿಸಿದರು.

ಬೃಹತ್ ಮೊತ್ತದ ಲಂಚದ ರೂಪದ ಹಣ ನೀಡುವ ಭೂಮಾಫಿಯಾಗಳನ್ನು ಪ್ರೀತಿಯಿಂದ ಕಾಣುವ ಆಡಳಿತ ವರ್ಗ ಮುಗ್ಧ ರೈತರನ್ನು ಹಾಗೂ ಮೂಲ ನಿವಾಸಿಗಳನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ಹೋರಾಟ ನಡೆಸುವ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.

ಜನಜಾಗೃತಿ ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದ ಸಿಎನ್ಸಿ ಪ್ರಮುಖರು ಹಾಗೂ ಗ್ರಾಮಸ್ಥರು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಬೃಹತ್ ಭೂಪರಿವರ್ತನೆ ಮತ್ತು ಭೂ ವಿಲೇವಾರಿ ವಿರುದ್ಧ ಅ.5 ರಂದು ತಿತಿಮತಿ, ಅ.9ರಂದು ಅಮ್ಮತ್ತಿ, ನಂತರದ ದಿನಗಳಲ್ಲಿ ಭಾಗಮಂಡಲ ಹಾಗೂ ಮಡಿಕೇರಿಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಸಲಾಗುವುದು ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ತಿಳಿಸಿದರು.

ಅಜ್ಜಮಾಡ ಸಾವಿತ್ರಿ, ಅಜ್ಜಮಾಡ ಸುಮಾ, ಚೊಟ್ಟೆಯಂಡಮಾಡ ಪಾರ್ವತಿ, ಚೆಂಗುಲಂಡ ರಾಜಪ್ಪ, ಚೆಂಗುಲಂಡ ರ್ಯಾಲಿ, ಅಜ್ಜಮಾಡ ಮೋಹನ್, ಅಜ್ಜಮಾಡ ಇಮ್ಮಿ, ಅಜ್ಜಮಾಡ ಚೆಂಗಪ್ಪ, ಮಾಣೀರ ಮುತ್ತಪ್ಪ, ಬಾದುಮಂಡ ರಾಜಪ್ಪ, ಚೋಟ್ಟೆಯಂಡಮಾಡ ತಿಮ್ಮಯ್ಯ, ಕಾಳಿಮಾಡ ಹರೀಶ್ ಮತ್ತಿತರರು ಇದ್ದರು.

PREV

Recommended Stories

ಮಗುವಿಗೆ ಗಂಟೆಯೊಳಗಾಗಿ ತಾಯಿಯ ಎದೆ ಹಾಲು ನೀಡಿ
ಸರ್ಕಾರಿ ಶಾಲೆಗಳ ಉಳಿವು, ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್​ ಮೂಲಕ ರಾಜ್ಯ ಪರ್ಯಟನೆ