ಕನ್ನಡಪ್ರಭ ವಾರ್ತೆ, ತುಮಕೂರು
ಮಣ್ಣು ಉಳಿಸಿ, ಜೀವ ಸಂಕುಲ ರಕ್ಷಿಸಿ ಎಂದು ಕರ್ನಾಟಕ ಪ್ರಗತಿಪರ ರೈತರು ಹಾಗೂ ದೇವರಾಯನದುರ್ಗ ಜೀವ-ಜೀವವೈವಿಧ್ಯತೆಗಳ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಕರಪತ್ರ ವಿತರಣೆ, ತಮಟೆ ಚಳುವಳಿ ಮೂಲಕ ತಾಲೂಕಿನ ದೇವರಾಯನದುರ್ಗ, ನಾಮದ ಚಿಲುಮೆ ಸುತ್ತಮುತ್ತಲ ಗ್ರಾಮಗಳಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಯಿತು.ಸಮಿತಿಯ ಮಹಾ ಪೋಷಕರಾದ ಹೈಕೋರ್ಟ್ ನ್ಯಾಯವಾದಿ ಎಲ್.ರಮೇಶ್ ನಾಯ್ಕ್ ನೇತೃತ್ವದ ಈ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮ ಪಂಚಾಯ್ತಿಗಳ ಸದಸ್ಯರು, ಗ್ರಾಮದ ಮುಖಂಡರು ಭಾಗವಹಿಸಿ ಮಣ್ಣಿನ ಮಹತ್ವದ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.
ಈ ವೇಳೆ ಮಾತನಾಡಿದ ಎಲ್. ರಮೇಶ್ ನಾಯ್ಕ್, ಗಿಡಮರಗಳೂ ಸೇರಿದಂತೆ ಎಲ್ಲಾ ಜೀವಿಗಳಿಗೂ ಮಣ್ಣಿಂದಲೇ ಕಾಯ, ಮಣ್ಣಿಂದಲೇ ಬದುಕು. ಮಣ್ಣಿಲ್ಲದೆ ಜೀವಿಗಳಿಲ್ಲ, ಮಣ್ಣಿಲ್ಲದೆ ಯಾವುದರ ಬದುಕಿಲ್ಲ, ಆಹಾರ ಧಾನ್ಯ ಬೆಳೆಯಲು ಮಣ್ಣೇ ಆಧಾರ. ಅನ್ನ ನೀಡುವ ರೈತರಿಗೆ ಮಣ್ಣೇ ಜೀವನಾಧಾರ. ಮಣ್ಣನ್ನು, ಅದರ ಫಲವತ್ತತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ. ರಾಸಾಯನಿಕಗಳನ್ನು ಬಳಸಿ ಮಣ್ಣಿನ ಆರೋಗ್ಯ ಕೆಡದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.ರೈತರು ದೇಶದ ಬೆನ್ನೆಲುಬು, ಆಹಾರ ಉತ್ಪಾದನೆಯ ಮೂಲ ಎಂದು ಹೇಳುವ ನಾವು ಅನ್ನದಾತರ ಸಮಸ್ಯೆಗಳನ್ನು ಬಗೆಹರಿಸುವ ವಿಚಾರದಲ್ಲಿ ವಿಮುಖರಾಗುತ್ತಿರುವುದು ದುರಾದೃಷ್ಟಕರ. ದೇಶದ ಪ್ರಮುಖ ಆರ್ಥಿಕ ಶಕ್ತಿಯಾಗಬಹುದಾದ ಕೃಷಿಯನ್ನು ಸರ್ಕಾರಗಳು, ಇಂದಿನ ಯುವಜನರು ಕಡೆಗಣಿಸಿದ್ದಾರೆ. ಕಾರಣ ಕೃಷಿ ಇಂದು ಲಾಭದಾಯಕವಾಗಿಲ್ಲ. ಕೃಷಿ ಇಲ್ಲದೆ ದೇಶವಿಲ್ಲ ಎನ್ನುವ ಸಂದರ್ಭದಲ್ಲಿ ಕೃಷಿಗೆ ನಾವು ಹೆಚ್ಚು ಮಹತ್ವ, ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಘಸಂಸ್ಥೆಗಳು ಕಾಳಜಿವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ಊರ್ಡಿಗೆರೆ ಹೋಬಳಿಯ ಅರೆಗುಜ್ಜನಹಳ್ಳಿ, ಮೈದಾಳ, ಜನಪನಹಳ್ಳಿ, ದುರ್ಗದಹಳ್ಳಿ, ನಾಮದ ಚಿಲುಮೆ, ಲಕ್ಷ್ಮಿ ತಾಂಡ್ಯ, ಜನಪನಹಳ್ಳಿ ತಾಂಡ್ಯ, ಭೈರಾಪುರ, ಮಾದಗೊಂಡನಹಳ್ಳಿ, ಕದರನಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ತಮಟೆ ಚಳವಳಿ ಮೂಲಕ ಕರಪತ್ರ ವಿತರಿಸಿ ಜನಜಾಗೃತಿ ಮೂಡಿಸಲಾಯಿತು.ಸಮಿತಿ ಅಧ್ಯಕ್ಷ ಬಿ.ಆರ್.ರವೀಂದ್ರ, ಮೈದಾಳ ಗ್ರಾ.ಪಂ. ಸದಸ್ಯರಾದ ಕೆ.ಎಸ್.ನರಸಿಂಹಮೂರ್ತಿ, ಮೈದಾಳ ಮಲ್ಲಣ್ಣ, ಗಿರೀಶ್, ಕದರನಹಳ್ಳಿ ಪುಟ್ಟರಾಜು, ಪಣಗಾರ್ ಲಕ್ಷ್ಮೀಕಾಂತ್, ಜನಪನಹಳ್ಳಿ ಗ್ರಾ.ಪ. ಸದಸ್ಯರಾದ ನರಸಿಂಹರಾಜು, ಶ್ರೀರಂಗಪ್ಪ, ಗೋವಿಂದರಾಜು, ದೊಡ್ಡನರಸಯ್ಯ, ಅರೆಗುಜ್ಜನಹಳ್ಳಿ ಗ್ರಾ.ಪಂ.ಸದಸ್ಯರಾದ ಕಾಳಿಯ ನಾಯ್ಕ್, ಡಕಣ ನಾಯ್ಕ್, ಎ.ಆರ್.ಮಂಜುನಾಥ್, ಬಿ.ಹನುಮಂತರಾಯಪ್ಪ, ಸೀತಕಲ್ ಪಂಚಾಯ್ತಿಯ ನಾಗರಾಜು, ಪುಟ್ಟರಾಜು, ಬಿ.ಎಂ.ಪಾಳ್ಯ ಬಾಲುಗೌಡ್ರು, ಆಲಮರದ ಪಾಳ್ಯದ ನರಸಿಂಹಮೂರ್ತಿ ಮೊದಲಾದವರು ಜಾಗೃತಿ ಆಂದೋಲನದಲ್ಲಿ ಪಾಲ್ಗೊಂಡಿದ್ದರು.ಕೋಟ್
ಒಡಲಲ್ಲಿ ಲಕ್ಷಾಂತರ ಜೀವವೈವಿಧ್ಯಗಳು ತುಂಬಿಕೊಂಡಿರುವ ದೇವರಾಯನದುರ್ಗ, ನಾಮದ ಚಿಲುಮೆ, ರಾಮದೇವರ ಬೆಟ್ಟ, ಮೈದಾಳ ಕೆರೆಗಳನ್ನು ಸ್ವಾಭಾವಿಕವಾಗಿ ಉಳಿಯುವಂತೆ ರಕ್ಷಣೆ ಮಾಡಬೇಕು. ಈ ಪ್ರದೇಶದ ಫಲವತ್ತಾದ ಮಣ್ಣನ್ನು ತೆಗೆದು ಹೊರಗೆ ಸಾಗಿಸದಂತೆ ಸರ್ಕಾರ, ಜನರು ಎಚ್ಚರವಹಿಸಬೇಕು. ಈ ಬಗ್ಗೆ ಸುತ್ತಮುತ್ತಲ ಹಳ್ಳಿಗಳ ಜನ ಜಗೃತರಾಗಬೇಕು - ರಮೇಶ ನಾಯ್ಕ , ಹೈ ಕೋರ್ಟ್ ನ್ಯಾಯವಾದಿ