-ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆಗ್ರಹ
ಕನ್ನಡಪ್ರಭ ವಾರ್ತೆ ಸುರಪುರ
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅಂಗವಾಗಿ ನಡೆಯುತ್ತಿರುವ ಮನೆ-ಮನೆ ಸಮೀಕ್ಷೆ (ಎನ್ಯುಮರೇಶನ್) ಹಾಗೂ ಫಾರಂ ಭರ್ತಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರು, ವಿಶೇಷವಾಗಿ ರೈತರು ಮತ್ತು ಗ್ರಾಮೀಣ ಭಾಗದ ಅವಿದ್ಯಾವಂತರು ಹಲವು ತೊಂದರೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಎಸ್‌ಐಆರ್ ಅಭಿಯಾನದ ಅವಧಿಯನ್ನು ಒಂದು ತಿಂಗಳು ವಿಸ್ತರಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಆಗ್ರಹಿಸಿದೆ.ನಗರದ ತಾಲೂಕು ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಜೂನ್ 30ರಿಂದ ಜುಲೈ 29ರವರೆಗೆ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಬಳಸಲಾಗುತ್ತಿರುವ ಫಾರಂನ ಎರಡೂ (ಎಡ-ಬಲ) ಬದಿಗಳಲ್ಲೂ ಮಾಹಿತಿಯನ್ನು ಭರ್ತಿ ಮಾಡಬೇಕಿರುವುದರಿಂದ ಸರಿಯಾದ ಅರಿವಿನ ಕೊರತೆಯಿಂದ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಬಿಎಲ್‌ಒಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಅವರಿಗೆ ಸರಿಯಾದ ಮಾಹಿತಿ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಅಗತ್ಯ ಮಾರ್ಗದರ್ಶನ ದೊರೆಯುತ್ತಿಲ್ಲ. ಕೆಲವು ಗ್ರಾಮಗಳಿಗೆ ಇನ್ನೂ ಎನ್ಯುಮರೇಶನ್ ಫಾರಂಗಳು ತಲುಪಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ಆರೋಪಿಸಿದರು.
ಪಶ್ಚಿಮ ಬಂಗಾಳದಲ್ಲಿ ದಾಖಲೆಗಳ ಸಮಸ್ಯೆಯಿಂದ 92 ಲಕ್ಷ ಮತದಾರರು ಸಂಕಷ್ಟಕ್ಕೆ ಸಿಲುಕಿರುವ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಕರ್ನಾಟಕದಲ್ಲಿಯೂ ಇಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಚುನಾವಣಾ ಆಯೋಗ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮುಖಂಡರಾದ ಚಂದ್ರಶೇಖರ ಕಟ್ಟಿಮನಿ, ಸಿದ್ದಪ್ಪ ಸುರಪುರಕರ್, ಮೂರ್ತಿ ಬೊಮ್ಮನಹಳ್ಳಿ, ಖಾಜಾಹುಸೇನ ಗುಡಗುಂಟಿ, ಮರೆಪ್ಪ ಕಾಂಗ್ರೆಸ್, ಮಹೇಶಕುಮಾರ ಸುಂಗಲ, ಹುಲುಗಪ್ಪ ಶೆಳ್ಳಿಗಿ ಹಾಗೂ ಬಸವರಾಜ ಗೋನಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಫೋಟೋ ಶೀರ್ಷಿಕೆ: ಸುರಪುರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್‌ಐಆರ್ ಅಭಿಯಾನದ ಅವಧಿ ವಿಸ್ತರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿದರು.