ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಮುಖ್ಯ: ಉಸ್ತುವಾರಿ ಸಚಿವ ಶಿವಾನಂದ ಪಾಟೀಲ

KannadaprabhaNewsNetwork |  
Published : Jul 22, 2025, 12:17 AM IST
21ಎಚ್‌ವಿಆರ್1- | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಈ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ.

ಹಾವೇರಿ: ಸಮಾಜದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ನೇರ ಸಂಪರ್ಕದಲ್ಲಿದ್ದರೆ ಅಪರಾಧ ಪ್ರಕರಣಗಳನ್ನು ತಡೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ತಿಳಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ಆಯೋಜಿಸಿದ್ದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಉದ್ಘಾಟಿಸಿ, ಮಾಹಿತಿ ಹಾಗೂ ಅಧಿಕಾರಿಗಳ ಸಂದೇಶ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸಮಾಜದಲ್ಲಿ ಅನೇಕ ಘಟನೆಗಳು ನಡೆಯುತ್ತವೆ, ಅಂತಹ ಘಟನೆಗಳಿಂದ ಸಮಾಜದ ಶಾಂತಿ ಕದಡುವ ಸಾಧ್ಯತೆ ಇರುತ್ತದೆ. ಸಜ್ಜನರಂತೆ ನಟನೆ ಮಾಡಿಕೊಂಡು ಅಪರಾಧ ಪ್ರಕರಣಗಳಲ್ಲಿ ಭಾಗಿಗಳಾದವರನ್ನು ಕಂಡುಹಿಡಿಯಲು ಈ ಯೋಜನೆ ಸಹಕಾರಿಯಾಗಿದೆ ಎಂದರು. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಮನೆ ಮನೆಗೆ ಪೊಲೀಸ್ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ದೇಶದಲ್ಲಿ ಪೊಲೀಸರು ಪರಿಣಾಮಕಾರಿ ಕೆಲಸ ಮಾಡಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ಪರಿಣಾಮಕಾರಿ ಕೆಲಸಗಳನ್ನು ಮಾಡಿದ್ದಾರೆ. ಪೊಲೀಸರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಾರೆ. ಜಾತಿ ಹಾಗೂ ಗುಂಪುಗಳ ಹೆಸರಿನಲ್ಲಿ ಸಮಾಜದ ಸಾಮರಸ್ಯ ಕದಡುವ ಕೆಲಸ ನಡೆಯುತ್ತದೆ. ಇಂತಹ ಘಟನೆಗಳನ್ನು ತಡೆಯಬೇಕು. ಜಿಲ್ಲೆಯಲ್ಲಿ ಈ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ಇದೆ. ಆದಾಗ್ಯೂ ಪೊಲೀಸ್ ಇಲಾಖೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಜಿಲ್ಲೆಯಲ್ಲಿ ನಡೆಯುವ ಅಪರಾಧ ಪ್ರಕರಣಗಳ ತಡೆಯುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗುರುತರ ಜವಾಬ್ದಾರಿ ಇದೆ. ಹಾವೇರಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಮಟ್ಕಾ, ಅಕ್ರಮ ಮರಳು ಸಾಗಾಣಿಕೆ ಸೇರಿ ವಿವಿಧ ಅಕ್ರಮ ಚಟುವಟಕೆಗಳಿಗೆ ಹಂತ- ಹಂತವಾಗಿ ಕಡಿವಾಣ ಹಾಕಲಾಗುವುದು. ಬೈಕ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಬಾರದು ಹಾಗೂ ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಬೇಕು. ಕಳ್ಳತನವಾದ ಬೈಕ್‌ಗಳನ್ನು ಪತ್ತೆ ಹಚ್ಚಲಾಗಿದೆ. ಇನ್ನೂ ಕೆಲವು ಪತ್ತೆ ಹಚ್ಚಬೇಕಿದೆ. ಸೇವ್ ಸಿಟಿ ಕಾರ್ಯಕ್ರಮದಡಿ ಸ್ಥಳೀಯ ನಗರ ಸಂಸ್ಥೆಗಳು ಅನುದಾನ ನೀಡಿದರೆ ಅಗತ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ ವಹಿಸಲಾಗುವುದು. ರಾಣಿಬೆನ್ನೂರಿಗೆ ಭೇಟಿ ನೀಡಿ, ಟ್ರಾಫಿಕ್ ಸಮಸ್ಯೆ ಕುರಿತು ಈಗಾಗಗೇ ಪರಿಶೀಲಿಸಲಾಗಿದೆ. ವಾಹನಗಳ ನಿಲುಗಡೆ ಯೋಜನೆ ಮಾಡಲಾಗುತ್ತಿದೆ. ಸಾರ್ವಜನಿಕರು ತಮ್ಮ ಏನೇ ಸಮಸ್ಯೆಗಳಿದ್ದರೂ ನನ್ನನ್ನು ನೇರವಾಗಿ ಭೇಟಿಯಾಗಬಹುದು ಎಂದರು. ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ದೇಶ ಆರ್ಥಿಕ, ಸಾಮಾಜಿಕ ಹಾಗೂ ತಾಂತ್ರಿಕವಾಗಿ ಮುಂದುವರಿದಿದ್ದರೂ ಕಳ್ಳತನದಂಥ ಅಪರಾಧ ಪ್ರಕರಣಗಳು ನಡೆಯುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಮನೆಯಿಂದ ಮಹಿಳೆ ಅಥವಾ ಪುರುಷ ಇರಲಿ, ಸುರಕ್ಷಿತವಾಗಿ ಮರಳಿ ಬರುತ್ತಾರೆ ಎಂಬ ಭರವಸೆ ಇಲ್ಲದಂತಾಗಿದೆ. ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ಪ್ರಜ್ಞಾವಂತರಾದರೆ ಅಪರಾಧ ಪ್ರಕರಣಗಳನ್ನು ತಡೆಯಬಹುದು. ನಾವು- ನೀವು ಇಂದು ಇಲ್ಲಿ ಮುಕ್ತವಾಗಿ ಚರ್ಚಿಸುತ್ತಿದ್ದೇವೆ ಎಂದರೆ ಅದಕ್ಕೆ ಪೊಲೀಸರು ಕಾರಣರಾಗಿದ್ದಾರೆ. ದಿನದ 24 ಗಂಟೆ ಪೊಲೀಸರು ಕಾರ್ಯನಿರ್ವಹಿಸುತ್ತಾರೆ. ಅವರಿಗೆ ಅಭಿನಂದನೆ ಹೇಳಬೇಕು ಎಂದರು.ಕಾರ್ಯಕ್ರಮದಲ್ಲಿ ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ ಖಾದ್ರಿ, ಶಾಸಕ ಪ್ರಕಾಶ ಕೋಳಿವಾಡ. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಹಿರೇಮಠ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಫ್.ಎಫ್.ಎನ್. ಗಾಜಿಗೌಡರ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್ ಉಪಸ್ಥಿತರಿದ್ದರು, ಸಿಪಿಐ ಮಹಾಂತೇಶ ಲಂಬಿ ನಿರೂಪಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ ವಂದಿಸಿದರು.

ಸಾರ್ವಜನಿಕರಿಂದ ಮನವಿಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ, ಗ್ರಾಮೀಣ ಪ್ರದೇಶದಲ್ಲಿ ಗೂಡಂಗಡಿ ಹಾಗೂ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ, ಬೈಕ್ ಕಳ್ಳತನ, ಮೀಟರ್ ಬಡ್ಡಿ, ಮಟ್ಕಾ, ಶಾಲಾ- ಕಾಲೇಜುಗಳ ಬಳಿ ಗುಟ್ಕಾ- ಬೀಡಿ ಅಂಗಡಿ ಹಾವಳಿ, ದ್ವಿಚಕ್ರವಾಹನ ಸೇರಿದಂತೆ ವಾಹನಗಳ ಕರ್ಕಶ ಶಬ್ದ ಹಾವಳಿ ತಡೆಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಿಟಿ ಕ್ಯಾಮೆರಾ ಅಳವಡಿಕೆ ಮಾಡಬೇಕು ಹಾಗೂ ರಾಣಿಬೆನ್ನೂರು ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲೆಯ ಎಲ್ಲ ತಾಲೂಕುಗಳ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಚಿವರಿಗೆ ಮನವಿ ಮಾಡಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!