ಹೊಂಬಾಳಮ್ಮನ ಕೆರೆಗೆ ಕಾಯಕಲ್ಪ ನೀಡುವಂತೆ ಸಾರ್ವಜನಿಕರ ಆಗ್ರಹ

KannadaprabhaNewsNetwork |  
Published : Jul 06, 2025, 01:48 AM IST
ಕಾಯಕಲ್ಪಕ್ಕೆ ಕಾದಿದೆ ಹೊಂಬಾಳಮ್ಮನ ಕೆರೆ, ಚರಂಡಿ ನೀರು ಸೇರಿ ಗಬ್ಬು ವಾಸನೆಯ ಬಿರುತ್ತಿದೆ  | Kannada Prabha

ಸಾರಾಂಶ

‘ಅಂತರ್ಜಲ ಹೆಚ್ಚಾದಾಗ ಮಾತ್ರ ಬಾವಿ, ಬೋರ್ ವೆಲ್ ಗಳಲ್ಲಿ ನೀರು ಬರಲು ಸಾಧ್ಯ. ಚರಂಡಿ ನೀರು. ಕಳೆ ಗಿಡಗಳು ಬೆಳೆದು ಕೆರೆ ಅಂದವನ್ನೇ ಕಳೆದುಕೊಂಡಿದೆ, ಕೂಡಲೇ ಸರ್ಕಾರ ಕೆರೆಯ ಅಭಿವೃದ್ಧಿಪಡಿಸಿ ಅಂತರ್ಜಲ ಮಟ್ಟ ವೃದ್ಧಿಸಬೇಕಿದೆ. ಈ ಬಗ್ಗೆ ಹಲವು ಬಾರಿ ಶಾಸಕರಿಗೆ, ತಹಸೀಲ್ದಾರ್ ಅವರಿಗೆ ಕೆರೆ ಅಭಿವೃದ್ಧಿಗಾಗಿ ಮನವಿ ಸಲ್ಲಿಸಲಾಗಿದೆ’.

ಎಚ್.ಆರ್.ಮಾದೇಶ್

ಕನ್ನಡಪ್ರಭ ವಾರ್ತೆ ಮಾಗಡಿ

ಪಟ್ಟಣದ ಚರಂಡಿ ನೀರು ಕೆರೆಗೆ ಸೇರಿ ಕಲುಷಿತಗೊಂಡಿರುವ ನಾಡಪ್ರಭು ಕೆಂಪೇಗೌಡರು ಕಟ್ಟಿಸಿರುವ ಐತಿಹಾಸಿಕ ಹೊಂಬಾಳಮ್ಮನಕೆರೆಗೆ ಕಾಯಕಲ್ಪ ನೀಡಬೇಕಿದೆ. ಹೊಂಬಾಳಮ್ಮನಪೇಟೆಗೆ ಮೊದಲು ಚೆಲುವರಾಯಪಟ್ಟಣ ಎಂಬ ಹೆಸರಿತ್ತು. ಚೆಲುವರಾಯಸ್ವಾಮಿ ಪ್ರಸಿದ್ಧ ದೇವಸ್ಥಾನ ಇರುವುದರಿಂದ ಚೆಲುವರಾಯಪಟ್ಟಣ ಎಂಬ ಹೆಸರು ಬಂದಿತ್ತು. ಕ್ರಮೇಣ ಹೊಂಬಾಳಮ್ಮನಪೇಟೆಯಾಗಿ ಬದಲಾಗಿ ಈಗ ಹೊಂಬಾಳಮ್ಮನ ಕೆರೆ ಎಂಬ ಹೆಸರು ಬಂದಿದೆ.

ಕೆರೆಗೆ ಪಟ್ಟಣದ ಚರಂಡಿ ನೀರು ಸೇರಿ ದುರ್ವಾಸನೆ ಬೀರುತ್ತಿದ್ದು, ಕೆರೆಯ ತುಂಬಾ ತ್ಯಾಜ್ಯ, ಗಿಡ- ಗಂಟಿಗಳು ಬೆಳೆದುಕೊಂಡು ನೀರೇ ಕಾಣದಂತಾಗಿದೆ. ಇಂತಹ ಐತಿಹಾಸಿಕ ಕೆರೆ ಅವಸಾನದಂಚಿಗೆ ತಲುಪಿದ್ದು, ಸಂಬಂಧಪಟ್ಟವರು ಹೊಂಬಾಳಮ್ಮನ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮತ್ತು ಪರಿಸರ ಪ್ರೇಮಿಗಳ ಆಗ್ರಹಿಸಿದ್ದಾರೆ.

ಹಲವು ವರ್ಷಗಳ ಹಿಂದೆ ಹೊಂಬಾಳಮ್ಮನಕೆರೆ ಅಭಿವೃದ್ಧಿಗಾಗಿ ಭೂಮಿಪೂಜೆ ನೆರವೇರಿಸಲಾಗಿತ್ತು. ಆದರೆ ಮಾಗಡಿ- ಬೆಂಗಳೂರು ನಾಲ್ಕು ಪಥದ ಕೆಶಿಫ್ ರಸ್ತೆ ಕಾಮಗಾರಿ ಆರಂಭವಾದ ನಂತರ ರಸ್ತೆಗೆ ಕೆರೆಯ ಎಷ್ಟು ಭಾಗ ಹೋಗುತ್ತದೆಯೋ, ನಂತರ ಅಭಿವೃದ್ಧಿ ಮಾಡೋಣ ಎಂದು ಕಳೆದ ಮೂರು ವರ್ಷಗಳಿಂದಲೂ ಕೆರೆ ಅಭಿವೃದ್ಧಿ ಮಾಡಿಲ್ಲ. ಈಗ ರಸ್ತೆ ಅಗಲೀಕರಣ ಮಾಡುತ್ತಿದ್ದು ರಸ್ತೆ ಜಾಗ ಗುರುತಿಸಲಾಗಿದೆ, ಕೂಡಲೇ ಹೊಂಬಾಳಮ್ಮನ ಕೆರೆ ಅಭಿವೃದ್ಧಿ ಮಾಡುವಂತೆ ಪಟ್ಟಣ ನಾಗರಿಕರಿಂದ ಒತ್ತಾಯ ಕೇಳಿ ಬಂದಿದೆ.

ಕೆರೆ ಉಳಿವಿಗಾಗಿ ಹೋರಾಟ: ಹಲವು ವರ್ಷಗಳ ಹಿಂದೆ ಹೊಂಬಾಳಮ್ಮನ ಕೆರೆ ಮುಚ್ಚಿ ಸರ್ಕಾರಿ ಬಸ್ ನಿಲ್ದಾಣ ಮಾಡುವ ಗುರಿ ಇತ್ತು. ಆ ಸಮಯದಲ್ಲಿ ಹೊಂಬಾಳಮ್ಮನಪೇಟೆಯ ಕೆಲ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಯಾವುದೇ ಕಾರಣಕ್ಕೂ ಕೆರೆ ಮುಚ್ಚಲು ಅವಕಾಶ ಕೊಡುವುದಿಲ್ಲ. ಇಲ್ಲಿ ಕೆರೆ ಬಿಟ್ಟು ಯಾವುದೇ ಸರ್ಕಾರಿ ಕಾಮಗಾರಿಗಳು ನಡೆಯಬಾರದೆಂಬ ಹೋರಾಟದ ಪರಿಣಾಮ ಸರ್ಕಾರಿ ಬಸ್ ನಿಲ್ದಾಣ ಯೋಜನೆ ಕೈ ಬಿಡಲಾಯಿತು ಎಂದು ಪರಿಸರ ಪ್ರೇಮಿ ಹಾಗೂ ಸಾಹಿತಿ ಹೊಂಬಾಳಮ್ಮನಪೇಟೆ ನಿವಾಸಿ ಡಿ.ರಾಮಚಂದ್ರಯ್ಯ ಹೇಳುತ್ತಾರೆ.

ಅಂತರ್ಜಲದ ಹೆಚ್ಚಳಕ್ಕೆ ಸಹಕಾರಿ:

ಪಟ್ಟಣದಲ್ಲಿ ಅಂತರ್ಜಲ ಮಟ್ಟ ವೃದ್ಧಿಗೆ ಹೊಂಬಾಳಮ್ಮನಕೆರೆಯದ್ದು ಪ್ರಮುಖ ಪಾತ್ರ. 50 ವರ್ಷಗಳ ಹಿಂದೆ ಹೊಂಬಾಳಮ್ಮನ ಕೆರೆ ನೀರನ್ನು ಕುಡಿಯಲು ಬಳಸಲಾಗುತ್ತಿತ್ತು. ಆಗ ಯಾವುದೇ ಚರಂಡಿ ನೀರು ಕೆರೆಗೆ ಸೇರುತ್ತಿರಲಿಲ್ಲ. ಬಾಳಮ್ಮನಪೇಟೆಯಲ್ಲಿ ಹಲವು ಬಾವಿಗಳಿಗೂ ಈ ಕೆರೆಯೇ ಜೀವಜಲವಾಗಿತ್ತು. ದೊಡ್ಡ ಹನುಮಯ್ಯ ಉಪ್ಪು ನೀರು ಬಾವಿ ಹೊಂಬಾಳಮ್ಮನಪೇಟೆಯ ಅರ್ಧ ಭಾಗದಷ್ಟು ನೀರಿನ ಸಮಸ್ಯೆಯನ್ನು ಬಗೆಹರಿಸುತ್ತಿತ್ತು. ಹೊಂಬಾಳಮ್ಮನ ಪೇಟೆಯಲ್ಲಿ ತರಕಾರಿ, ಹೂ ಕೃಷಿ ಮಾಡುತ್ತಿದ್ದರು. ಅಂತಹ ಹೊಂಬಾಳಮ್ಮನಕೆರೆ ಇಂದು ಕಲುಷಿತಗೊಂಡು ಬಳಕೆಗೆ ಅಯೋಗ್ಯವಾಗಿರುವುದು ದುರಂತ.

‘ಹಲ ವರ್ಷಗಳ ಹಿಂದೆಯೇ ಸರ್ಕಾರಿ ಬಸ್ ನಿಲ್ದಾಣ ಮಾಡಲು ಕೆರೆ ಮುಚ್ಚುವ ಹುನ್ನಾರ ನಡೆದಿತ್ತು. ಅಂದಿನ ಜಿಲ್ಲಾಧಿಕಾರಿಗಳಿಗೆ ಕೆರೆಯ ಮಹತ್ವದ ಬಗ್ಗೆ ತಿಳಿಸಿ, ಹೋರಾಟ ಮಾಡಿದ ಪರಿಣಾಮ ಕೆಂಪೇಗೌಡರ ಐತಿಹಾಸಿಕ ಕೆರೆ ಉಳಿದಿದೆ. ಈ ಹಿಂದೆ ಹೊಂಬಾಳಮ್ಮನ ಪೇಟೆಯ ಹಲವು ಬಾವಿಗಳಿಗೆ ಹೊಂಬಾಳಮ್ಮನ ಕೆರೆ ಅಂತರ್ಜಲವೇ ಮೂಲವಾಗಿತ್ತು. ಈಗ ಕೆರೆ ಅಭಿವೃದ್ಧಿಪಡಿಸಿ ಗತವೈಭವ ಸ್ಥಾಪಿಸಬೇಕಿದೆ’.

-ಡಿ.ರಾಮಚಂದ್ರಯ್ಯ, ಸಾಹಿತಿ, ಹೊಂಬಾಳಮ್ಮನಪೇಟೆ

‘ಅಂತರ್ಜಲ ಹೆಚ್ಚಾದಾಗ ಮಾತ್ರ ಬಾವಿ, ಬೋರ್ ವೆಲ್ ಗಳಲ್ಲಿ ನೀರು ಬರಲು ಸಾಧ್ಯ. ಚರಂಡಿ ನೀರು. ಕಳೆ ಗಿಡಗಳು ಬೆಳೆದು ಕೆರೆ ಅಂದವನ್ನೇ ಕಳೆದುಕೊಂಡಿದೆ, ಕೂಡಲೇ ಸರ್ಕಾರ ಕೆರೆಯ ಅಭಿವೃದ್ಧಿಪಡಿಸಿ ಅಂತರ್ಜಲ ಮಟ್ಟ ವೃದ್ಧಿಸಬೇಕಿದೆ. ಈ ಬಗ್ಗೆ ಹಲವು ಬಾರಿ ಶಾಸಕರಿಗೆ, ತಹಸೀಲ್ದಾರ್ ಅವರಿಗೆ ಕೆರೆ ಅಭಿವೃದ್ಧಿಗಾಗಿ ಮನವಿ ಸಲ್ಲಿಸಲಾಗಿದೆ’.

-ರವಿಕುಮಾರ್, ಜಿಲ್ಲಾ ಯುವ ಘಟಕದ ಅಧ್ಯಕ್ಷರು, ರೈತ ಸಂಘ, ಮಾಗಡಿ

‘ಕೆರೆ ಉಳಿಸಿದಾಗ ಮಾತ್ರ ಅಂತರ್ಜಲ ವೃದ್ಧಿಯಾಗಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಸಿಗುತ್ತದೆ. ಪಟ್ಟಣದ ಹೃದಯ ಭಾಗದಲ್ಲಿರುವ ಹೊಂಬಾಳಮ್ಮನಪೇಟೆ ಕೆರೆ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಹೇಮಾವತಿ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಕೆರೆ ಅಭಿವೃದ್ಧಿಪಡಿಸಿದಾಗ ಮಾತ್ರ ನೀರು ಉಳಿಸಿಕೊಳ್ಳಲು ಸಾಧ್ಯ. ಕೂಡಲೇ ಕೆರೆ ಅಭಿವೃದ್ಧಿಗೆ ಮುಂದಾಗಿ’.

-ನರಸಿಂಹಮೂರ್ತಿ, ಪ್ರಗತಿಪರ ರೈತ, ಮಾಗಡಿ

PREV