ಕೆಜಿಎಫ್: ನಗರದ ಪ್ರಮುಖ ಗೀತಾ ರಸ್ತೆ, ಪೈಪ್ ಲೈನ್ ರಸ್ತೆ ಹಾಗೂ ನಗರದ ವಾರ್ಡ್‌ಗಳ ರಸ್ತೆಗಳಿಗೆ ಕಳೆದ ಒಂದು ವರ್ಷದ ಹಿಂದೆ ಹಾಕಿದ್ದ ಡಾಂಬರ್, ಇತ್ತೀಚೆಗೆ ಸುರಿದ ಮಳೆಗೆ ಕಳಪೆ ಕಾಮಗಾರಿಯಿಂದ ಕಿತ್ತು ಗುಂಡಿ ಬಿದ್ದಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಲ್ಡಾನ ವೃತ್ತದ ರಸ್ತೆಯಲ್ಲಿ ಹೊಸದಾಗಿ ಡಾಂಬರ್ ಹಾಕಿದ್ದು, ಮಳೆಯಿಂದ ಹಾಳಾಗಿ ಗುಂಡಿಬಿದ್ದಿದೆ, ಕೂಡಲೇ ಅಧಿಕಾರಿಗಳು ರಸ್ತೆ ದುರಸ್ಥಿಗೆ ಕ್ರಮ ವಹಿಸಬೇಕು. ಸೂರಜ್ ಮಹಲ್ ವೃತ್ತದಿಂದ ಪೋಸ್ಟ್ ಆಫೀಸ್ ಮುಂಭಾಗದ ರಸ್ತೆಯೂ ಗುಂಡಿಗಳಿಗೆ ಹೊರತಾಗಿಲ್ಲ, ಆದ್ದರಿಂದ ರಸ್ತೆಯಲ್ಲಿನ ಗುಂಡಿ ಮುಚ್ಚಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಪಿ.ದಯಾನಂದ್ ಒತ್ತಾಯಿಸಿದ್ದಾರೆ.
ಈ ರಸ್ತೆಯಲ್ಲಿ ಪ್ರತಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಪ್ರಾಥಮಿಕ ಆರೋಗ್ಯ ಕೇಂದ್ರವೂ ಇದ್ದು ಹೆರಿಗೆಗಾಗಿ ಮಹಿಳೆಯರನ್ನು ಇದೇ ರಸ್ತೆಯಲ್ಲಿ ಕರೆ ತರಬೇಕಿದೆ. ಇನ್ನು ಅಕ್ಕಪಕ್ಕದಲ್ಲೇ ಶಾಲೆ ಇದ್ದು, ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳು, ಬೈಕ್, ಆಟೋಗಳು ಸಂಚರಿಸಿದ ಸಂದರ್ಭದಲ್ಲಿ ಗುಂಡಿಯಲ್ಲಿನ ಕೆಸರು ಮೈಮೇಲೆ ಬೀಳುವ ಆತಂಕದಲ್ಲೇ ಓಡಾಡುತ್ತಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ರಸ್ತೆ ದುರಸ್ಥಿ ಮಾಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.