ಕೊಪ್ಪಳ: ಕೊಪ್ಪಳ ತಾಲೂಕನ್ನು ಬರಪೀಡಿತ ತಾಲೂಕು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ನ್ಯಾಯಕ್ಕಾಗಿ ನಡಿಗೆ’ ಪಾದಯಾತ್ರೆ ಎರಡನೇ ದಿನವೂ ಉತ್ಸಾಹದಿಂದ ನಡೆಯಿತು.
ಬುಧವಾರ ಬೆಳಗ್ಗೆ ಬಿಸರಳ್ಳಿ ಗ್ರಾಮದಿಂದ ಪಾದಯಾತ್ರೆ ಆರಂಭಗೊಂಡಿತು. ಮುಖಂಡರು ಗವಿಸಿದ್ದೇಶ್ವರ ಶಾಖಾ ಮಠಕ್ಕೆ ತೆರಳಿ ದರ್ಶನ ಪಡೆದು, ಬಳಿಕ ಹಿರೇಸಿಂದೋಗಿ ಗ್ರಾಮದತ್ತ ಹೆಜ್ಜೆ ಹಾಕಿದರು.
ಮುಖಂಡ ಶರಣಪ್ಪ ಮಾದಿನೂರು, ನಮ್ಮ ಊರಿನ ಅಭಿವೃದ್ಧಿ ಸಂಪೂರ್ಣ ಶೂನ್ಯವಾಗಿದೆ. ಮೂಲಸೌಕರ್ಯ ಸೇರಿದಂತೆ ಜನರ ಅಗತ್ಯಗಳಿಗೆ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲ. ಭೀಕರ ಬರಗಾಲದಿಂದ ಜನರ ಬದುಕು ತತ್ತರಿಸಿದ್ದರೂ ಶಾಸಕರು ಇತ್ತ ಕಡೆ ತಲೆ ಹಾಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಿರೇಸಿಂದೋಗಿಯಿಂದ ಕಾಟ್ರಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಒಣಗಿದ ಜಮೀನುಗಳನ್ನು ವೀಕ್ಷಿಸಿದ ಮುಖಂಡರು ರೈತರೊಂದಿಗೆ ಸಂವಾದ ನಡೆಸಿದರು. ಬಳಿಕ ಕೋಳೂರು ಗ್ರಾಮದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು.
ಜೆಡಿಎಸ್ ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ ಮಾತನಾಡಿ, ಕೊಪ್ಪಳದ ಜನರ ಪರಿಸ್ಥಿತಿ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಇಲ್ಲಿನ ಜನರು ಬದುಕಿದ್ದಾರೆಯೇ ಎಂಬುದೇ ಸರ್ಕಾರಕ್ಕೆ ತಿಳಿದಿಲ್ಲ. ಸರ್ಕಾರಕ್ಕೆ ಜನರ ಹಿತ ಮುಖ್ಯವೋ, ನಿಯಮಾವಳಿಗಳು ಮುಖ್ಯವೋ? ಎಂದು ಪ್ರಶ್ನಿಸಿದರು.
ತಾಲೂಕು ಗೌರವಾಧ್ಯಕ್ಷ ಈಶಪ್ಪ ಮಾದಿನೂರು, ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ ಗಿಣಿಗೇರಿ, ಜಿಲ್ಲಾ ಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ ಸೊರಟೂರ, ಜಿಲ್ಲಾ ಎಸ್‌ಟಿ ಘಟಕದ ಅಧ್ಯಕ್ಷ ರಮೇಶ ಡಂಬ್ರಳ್ಳಿ, ತಾಲೂಕು ಅಧ್ಯಕ್ಷ ವೀರೇಶಗೌಡ್ರ ದಳಪತಿ, ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜೆಡಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ ಇದ್ದರು.