ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಿ

KannadaprabhaNewsNetwork |  
Published : May 10, 2026, 01:15 AM IST
51 | Kannada Prabha

ಸಾರಾಂಶ

ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸ್ಕ್ಯಾನಿಂಗ್ ಯಂತ್ರಗಳ ಸೌಲಭ್ಯವಿದ್ದರೂ ಸಹ ಹೊರಗಡೆ ಸ್ಕ್ಯಾನಿಂಗ್ ಮಾಡಿಸುವಂತೆ ಚೀಟಿ ಪಡೆದುಕೊಳ್ಳುತ್ತಾರೆ

ಕನ್ನಡಪ್ರಭ ವಾರ್ತೆ ನಂಜನಗೂಡು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮರ್ಪಕವಾಗಿ ಉತ್ತಮವಾದ ಆರೋಗ್ಯ ಸೇವೆಯನ್ನು ಒದಗಿಸಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಮತ್ತು ಆಡಳಿತ ಅಧಿಕಾರಿಗಳ ಜೊತೆ ತುರ್ತು ಸಭೆಯನ್ನು ನಡೆಸಿ ಅವರು ಮಾತನಾಡಿದರು. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲಾಗುತ್ತಿಲ್ಲ, ಸಾಮಾನ್ಯ ಹೆರಿಗೆಯಾದರು ಸಹ ಮೈಸೂರಿಗೆ ಕರೆದುಕೊಂಡು ಹೋಗುವಂತೆ ಶಿಫಾರಸು ಮಾಡಲಾಗುತ್ತಿದೆ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗೆ ವೈದ್ಯರು ಮುಂದಾಗುತ್ತಿಲ್ಲ, ಜೊತೆಗೆ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸ್ಕ್ಯಾನಿಂಗ್ ಯಂತ್ರಗಳ ಸೌಲಭ್ಯವಿದ್ದರೂ ಸಹ ಹೊರಗಡೆ ಸ್ಕ್ಯಾನಿಂಗ್ ಮಾಡಿಸುವಂತೆ ಚೀಟಿ ಪಡೆದುಕೊಳ್ಳುತ್ತಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ, ಆದ್ದರಿಂದ ವೈದ್ಯರು ಮತ್ತು ವೈದ್ಯಾಧಿಕಾರಿಗಳ ನಡುವೆ ಬಾಂಧವ್ಯವಿಟ್ಟುಕೊಂಡು ಕೆಲಸದಲ್ಲಿ ನಿರತರಾಗಬೇಕು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ನೆರವಾಗುವ ಜೊತೆಗೆ ಆಸ್ಪತ್ರೆಗೆ ಬರುವ ಎಲ್ಲಾ ಸಾರ್ವಜನಿಕರಿಗೂ ಉತ್ತಮ ಗುಣಮಟ್ಟದ ಚಿಕಿತ್ಸೆ ಲಭ್ಯವಾಗುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು. ಆಸ್ಪತ್ರೆಯ ಆಡಳಿತ ಅಧಿಕಾರಿ ನಾಗರಾಜು ಮಾತನಾಡಿ, ನಂಜನಗೂಡಿನ ಜನಸಂಖ್ಯೆಯ ಪ್ರಮಾಣದಲ್ಲಿ ಹೆಚ್ಚುವರಿಯಾಗಿದ್ದು, ಆಸ್ಪತ್ರೆಗೆ ದಿನನಿತ್ಯ 800 ರಿಂದ 900 ಹೊರರೋಗಿಗಳು ಬರುತ್ತಿದ್ದಾರೆ, ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆಯಿಂದ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹೆಚ್ಚಿನ ಕೆಲಸದ ಒತ್ತಡವಿದೆ, ಈ ನಡುವೆಯು ಸಹ ವೈದ್ಯರು ರೋಗಿಗಳಿಗೆ ಸಮರ್ಪಕವಾದ ಚಿಕಿತ್ಸೆ ನೀಡಲಾಗುತ್ತಿದೆ, ಗಂಭೀರವಾದ ಕೆಲವು ಪ್ರಕರಣಗಳಿರುವ ದಿನಕ್ಕೆ 15 ರಿಂದ 20 ರೋಗಿಗಳನ್ನು ಮಾತ್ರ ಮೈಸೂರಿನ ಆಸ್ಪತ್ರೆಗೆ ಹೋಗುವಂತೆ ಸೂಚನೆ ನೀಡಲಾಗುತ್ತಿದೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಕೊರತೆ ಇಲ್ಲ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಹೇಳಿದರು. ಶಾಸಕ ದರ್ಶನ್ ಮಾತನಾಡಿ, ಕಾಡಂಚಿನ ಪ್ರದೇಶಗಳಲ್ಲಿ ಅಪಘಾತಗಳಾದಲ್ಲಿ ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಸೇವೆ ದೊರಕುತ್ತಿಲ್ಲ ಎಂಬ ದೂರು ಸಾಕಷ್ಟು ಕೇಳಿ ಬರುತ್ತಿರುವುದರಿಂದ ಆಸ್ಪತ್ರೆಯಲ್ಲಿರುವ ಒಂದು ಆಂಬ್ಯುಲೆನ್ಸ್ ನನ್ನು ಯಡಿಯಾಲ ಪ್ರಾಥಮಿಕ ಕೇಂದ್ರಗಳಲ್ಲಿ ನಿಲ್ಲಿಸಿ ಆ ಭಾಗದ ಜನರಿಗೆ ಸೂಕ್ತ ಸಮಯದಲ್ಲಿ ಆಂಬ್ಯುಲೆನ್ಸ್ ಸೇವೆ ದೊರಕುವಂತೆ ಕ್ರಮವಹಿಸಬೇಕು ಎಂದು ಸೂಚಿಸಿದರಲ್ಲದೆ, ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ ತಾಲೂಕು ಆಸ್ಪತ್ರೆಯನ್ನು150 ಹಾಸಿಗೆ ಗಳಿಗೆ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು, ಸಿಬ್ಬಂದಿಗಳ ಕೊರತೆಯಾದಲ್ಲಿ ಮೈಸೂರಿನ ಮೆಡಿಕಲ್ ಕಾಲೇಜಿನ ಪಿಜಿ ವಿದ್ಯಾರ್ಥಿಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಹಂಟಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿ ಹಂಟಾ ವೈರಸ್ ಹೆಚ್ಚಾಗಿ ಇಲಿಗಳಿಂದ ಮನುಷ್ಯರಿಗೆ ಹರಡುವ ಭೀತಿ ಎದುರಾಗಿದ್ದು, ಹಂಟಾ ವೈರಸ್ ತಡೆಗಟ್ಟುವ ಸಲುವಾಗಿ ಗ್ರಾಪಂ ಮತ್ತು ಪಟ್ಟಣ ಪ್ರದೇಶಗಳಲ್ಲಿ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು, ಜೊತೆಗೆ ರಾಜ್ಯ ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಹೊರಡಿಸುವ ಸೂಚನೆಗಳನ್ನು ಪಾಲಿಸುವಂತೆ ಜನರಿಗೆ ತಿಳುವಳಿಸಿಕೆ ಮೂಡಿಸಬೇಕು, ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ಸ್ವಚ್ಛತೆಯಿಲ್ಲ ಎಂಬ ಬಗ್ಗೆ ದೂರು ಕೇಳಿ ಬರುತ್ತಿದ್ದು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಸೂಚನೆ ನೀಡಬೇಕು ಎಂದು ತಾಪಂ ಇಓ ಜರಾಲ್ಡ್ ರಾಜೇಶ್ ಸೂಚನೆ ನೀಡಿದರು. ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಕ್ರಮವಹಿಸಿ ತಾಲೂಕಿನಾದ್ಯಂತ ಸುಮಾರು 23 ನಕಲಿ ವೈದ್ಯರು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ವ್ಯಾಪಕ ದೂರು ಕೇಳಿ ಬರುತ್ತಿದ್ದು, ತಾಲೂಕು ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆವಹಿಸಿ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಕ್ರಮವಹಿಸಬೇಕು ಎಂದು ಈಶ್ವರ್ ಕಾನಟ್ಕೆ ರವರಿಗೆ ಸೂಚನೆ ನೀಡಿದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಸೀಲ್ದಾರ್ ಸ್ಮಿತಾರಾಮು, ತಾಪಂ ಇಓ ಜೆರಾಲ್ಡ್ ರಾಜೇಶ್, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಶಿವಪ್ರಸಾದ್, ತಾಲೂಕು ಆರೋಗ್ಯ ಅಧಿಕಾರಿ ಈಶ್ವರ್ ಕಾನಟ್ಕೆ, ಮುಖಂಡರಾದ ನಾಗರಾಜು, ಮಂಜುನಾಥ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಪ್ರತಿಷ್ಠೆ ಬಿಟ್ಟು ಪಕ್ಷ ಸಂಘಟಿಸಿ: ನಿಖಿಲ್‌ ಕುಮಾರಸ್ವಾಮಿ
ನಂದಿನಿ ಉತ್ಪನ್ನಗಳು ಬಳಸಿದರೆ ರೈತರಿಗೆ ಅನುಕೂಲ