ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ ಇಂದಿನ ದಿನಗಳಲ್ಲಿ ಓದು, ಕಲಿಕೆ, ಸಂಸ್ಕಾರ, ಸಮಯ ಪ್ರಜ್ಞೆ ಹೆಚ್ಚಾಗಬೇಕು, ಸಭೆ, ಸಮಾರಂಭಗಳು, ಹೊಗಳಿಕೆಯ ಕಾರ್ಯಕ್ರಮಗಳು ಕಡಿಮೆಯಾಗಬೇಕು ಆಗ ಮಾತ್ರ ಒಂದು ಕ್ಷೇತ್ರ ಬೆಳವಣಿಗೆಯಾಗಲಿ, ಅಭಿವೃದ್ಧಿಯಾಗಲಿ ಸಾಧಿಸಲು ಸಾಧ್ಯ ಎಂದು ಡಿಐಜಿ ರವಿ ಡಿ. ಚೆನ್ನಣ್ಣನವರ್ ತಿಳಿಸಿದರು.ಪಟ್ಟಣದ ಕನಕ ಭವನದಲ್ಲಿ ಶಿಕ್ಷಣ ಇಲಾಖೆಯಿಂದ ಶನಿವಾರ ನಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿ ಪಡೆದ ಸಾವಿರ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತಾಲೂಕಿಗೆ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯ ತಂದೆ ಕ್ಷೌರಿಕನ ಮಗಳು ಎಂದು ಕೇಳಿ ಸಂತಸವಾಯಿತು.ಇದೇ ರೀತಿ ಡ್ರೈವರ್, ಪೈಂಟರ್, ದಿನಗೂಲಿ ನೌಕರ, ಅಗಸ, ದರ್ಜಿಯ ಮಕ್ಕಳು ಉನ್ನತ ಮಟ್ಟದಲ್ಲಿ ಅಂಕ ಗಳಿಸಿ ವಿದ್ಯಾವಂತರಾದಾಗ ಮಾತ್ರ ಆ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ ಎಂದರು. ಉಳ್ಳವರ ಮಕ್ಕಳೇ ಪ್ರಗತಿ ಸಾಧಿಸಿದರೆ ಅದು ಅಭಿವೃದ್ಧಿಯ ಸಂಕೇತವಲ್ಲ, ಉಳ್ಳವರ ಸಮಾನಾಗಿ ಬಡವನ ಮಕ್ಕಳು ಬೆಳೆಯಬೇಕು ಎಂದರು.ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ಒಬ್ಬ ಮಂತ್ರಿಗೆ ಸಮವಿದ್ದಂತೆ, ಆದ್ದರಿಂದ ಓದುತ್ತೇನೆ ಎಂಬ ಇಚ್ಛಾಶಕ್ತಿಯುಳ್ಳ ವಿದ್ಯಾರ್ಥಿಗಳು ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳಾಗುವ ಕನಸನ್ನು ಹೊತ್ತು ಓದಬೇಕು ಎಂದರು.ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನಮ್ಮ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ಅವರು ನುಡಿದಂತೆ ಒಂಭತ್ತನೇ ಸ್ಥಾನದಲ್ಲಿದ್ದ ತಾಲೂಕನ್ನು ಮೊದಲನೇ ಸ್ಥಾನಕ್ಕೆ ತಂದಿದ್ದಾರೆ, ಅದಕ್ಕಾಗಿ ಅವರನ್ನು ನಾನು ಅಭಿನಂದಿಸಿದ್ದೇನೆ ಎಂದರು.ನಮ್ಮ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಬೆರೆಯದ ರೀತಿ ಕೆಲಸವನ್ನು ಮಾಡಿದ್ದರ ಪರಿಣಾಮವಾಗಿ ನಮ್ಮ ಕ್ಷೇತ್ರ ಶಿಕ್ಷಣದಲ್ಲಿ ಮೊದಲನೇ ಸ್ಥಾನದಲ್ಲಿ ಬಂದು ನಿಂತಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ರಾಜು ಮಾತನಾಡಿ, ತಾಲೂಕಿನ ಶಾಲೆಗಳಲ್ಲಿ ಮಕ್ಕಳಿಗೆ ಪ್ರತೀ ತಿಂಗಳ ಮೊದಲ ದಿನ ನಿಗದಿತ ಪಠ್ಯ ನೀಡಲಾಗುತ್ತಿತ್ತು, ಆ ಪಠ್ಯವನ್ನು ವಿದ್ಯಾರ್ಥಿಗಳು ಇಡೀ ತಿಂಗಳು ಕಲಿಯಬೇಕಿತ್ತು. ತಿಂಗಳ ಕೊನೆಯಲ್ಲಿ ನಡೆಯುವ ಪರೀಕ್ಷೆಯಲ್ಲಿ ಆ ಪಠ್ಯದಿಂದಲೇ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಆದರೆ ಇಲ್ಲಿ ಶಿಕ್ಷಕರು, ಪ್ರಶ್ನೆ ಪತ್ರಿಕೆ ತಯಾರಿಸುವವರು ಎಲ್ಲರೂ ಬೇರೆ ಶಾಲೆಯವರೇ ಆಗಿರುತ್ತಿದ್ದರು. ಇಲ್ಲಿ ಅನುತ್ತೀರ್ಣ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಪ್ರತೀ ತಿಂಗಳು ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು ಎಂದರು.ಮೈಮುಲ್ ನಿರ್ದೇಶಕ ಈರೇಗೌಡ, ಮುಖಂಡರಾದ ನಂದಿನಿ ಚಂದ್ರಶೇಖರ್, ರವಿ ನರಸೀಪುರ, ಬಿ.ವಿ. ಬಸವರಾಜು, ಶಿವಪ್ಪ ಕೋಟೆ, ಮಧುಕುಮಾರ್, ಸೋಮೇಶ್, ಅಶೋಕ್, ಭಾಗ್ಯಲಕ್ಷ್ಮಿ, ಶ್ರೀನಿವಾಸ, ಪುರದಕಟ್ಟೆ ಬಸವರಾಜು, ಶಿವರಾಜು, ಕ್ಯಾತನಹಳ್ಳಿ ನಾಗರಾಜು, ಅಜರುದ್ದೀನ್, ರಾಜು, ಸೌಮ್ಯ, ಮಂಜು, ಲಾಯರ್ ಲೋಕೇಶ್, ಚಂದ್ರು, ಶಿಕ್ಷಕರಾದ ಪ್ರಮೋದಕುಮಾರ್, ನಾಗರಾಜು, ನಿಂಗರಾಜು, ನಾರಾಯಣಸ್ವಾಮಿ, ರೂಪ ಪ್ರಮೋದ್, ಭೀಮಪ್ಪ, ಪ್ರಕಾಶ್, ಆನಂದ, ಚನ್ನನಾಯಕ, ಅನಿತಾ, ಸಾವಿತ್ರಿ, ನಂಜುಂಡಯ್ಯ, ಶಿವಶಂಕರ್, ನಂದೀಶ್, ಮಹದೇವಸ್ವಾಮಿ, ನಂಜುಂಡಸ್ವಾಮಿ, ರಾಜು, ಸ್ವಾಮಿನಾಯಕ, ಶ್ರೀನಿವಾಸ, ರವಿ, ಸಿದ್ದನಾಯಕ, ಕೃಷ್ಣಯ್ಯ, ಚಂದ್ರಶೇಖರ್, ಪ್ರಸನ್ನಕುಮಾರ್, ಶಿವಪ್ಪ, ದಾಸಾಚಾರ್ ಇದ್ದರು.-----------------