ಭಟ್ಕಳ:
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸರಕಾರ ಪ್ರಜಾಸೇವೆ ಆಂದೋಲನ ಸಭೆಯನ್ನು ಪ್ರತಿ ಶನಿವಾರ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ನಡೆಸುತ್ತಿದ್ದು, ಈ ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಪಾಲ್ಗೊಳ್ಳುವದರಿಂದ ಜನರು ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಸರಕಾರದ ಯೋಜನೆಯನ್ನು ಜನರು ಸದುಪಯೋಗ ಪಡೆಯಬೇಕೆಂದರು.
ಸಭೆ ಆರಂಭವಾಗುತ್ತಿದ್ದಂತೆಯೇ ಸಾರ್ವಜನಿಕರು ತಂದಿದ್ದ ಅರ್ಜಿಗಳನ್ನು ಕಂಪ್ಯೂಟರೀಕರಣಗೊಳಿಸಿ, ಕೆಲವು ಅರ್ಜಿಗಳನ್ನು ಇತ್ಯರ್ಥ ಪಡಿಸಲಾಯಿತಾದರೂ ಸಾರ್ವಜನಿಕರು ಸರಕಾರದ ಸುತ್ತೋಲೆಯಂತೆ ಎಲ್ಲಾ ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಬೇಕು ಎಂದು ಪಟ್ಟು ಹಿಡಿದರು. ಆಗ ಸಹಾಯಕ ಆಯುಕ್ತ ಮಹೇಶ, ಅರ್ಜಿಗಳನ್ನು ವಿಲೇವಾರಿ ಮಾಡಲು ಪ್ರತಿಯೊಂದು ಇಲಾಖೆಗೂ ಮೂರು ದಿನಗಳ ಕಾಲಾವಕಾಶವಿದೆ ಎಂದರು. ಇದಕ್ಕೆ ಆಕ್ಷೇಪಿಸಿದ ಸಾರ್ವಜನಿಕರು, ಸ್ಥಳದಲ್ಲಿಯೇ ಇತ್ಯರ್ಥವಾಗಬೇಕು ಎಂದು ಪಟ್ಟು ಹಿಡಿದರು. ಪ್ರಜಾ ಸೇವೆ ಸಭೆಯನ್ನು ಗ್ರಾಮ ಸಭೆಯನ್ನಾಗಿ ಮಾಡಿ ಅಧಿಕಾರಿಗಳಿಂದ ವರದಿ ವಾಚಿಸುವುದು ಸರಿಯಲ್ಲ ಎಂದೂ ಆಕ್ಷೇಪಿಸಿದರು. ಅರ್ಜಿಗಳನ್ನು ಸ್ವೀಕರಿಸಿದ್ದ ಅಧಿಕಾರಿಗಳು ಅವುಗಳ ವಿಲೇವಾರಿಯನ್ನು ಸಭೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಮಾಡಬೇಕು. ಫಲಾನುಭವಿಗಳನ್ನು ವೇದಿಕೆಗೆ ಕರೆದು ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳ ಸಮಕ್ಷಮ ಇತ್ಯರ್ಥ ಪಡಿಸಬೇಕು ಎಂದೂ ಪಟ್ಟು ಹಿಡಿದರು.ಇದಕ್ಕೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಒಟ್ಟಾರೆಯಾಗಿ ಬಂದ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗುವುದು. ಸ್ಥಳದಲ್ಲಿ ಮಂಜೂರಿ ಮಾಡುವಂತಹ ಅರ್ಜಿಗಳನ್ನು ಇಲ್ಲಿಯೇ ಮಂಜೂರಿ ಮಾಡುತ್ತೇವೆ. ಕೆಲವೊಂದು ಪ್ರಕರಣಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇರುವ ಕಾರಣ ಅವುಗಳನ್ನು ಸಂಬಂ ಧಪಟ್ಟ ಇಲಾಖೆಗೆ ಕಳುಹಿಸಲಾಗುವುದು ಎಂದರು.
ಸಭೆಯಲ್ಲಿ ನಗರಸಭಾ ಆಯುಕ್ತ ಬಾಬಾಸಾಹೇಬ್ ಮಾನೆ, ತಾಲೂಕಾ ಪಂಚಾಯತ ವ್ಯವಸ್ಥಾಪಕ ರಾಜೇಶ ಮಹಾಲೆ, ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ರಾಜು ನಾಯ್ಕ ಕೊಪ್ಪ, ಮಾವಳ್ಳಿ-೧ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ನಯನಾ ನಾಯ್ಕ, ಮಾವಳ್ಳಿ-೨ರ ಮಾಜಿ ಅಧ್ಯಕ್ಷೆ ನಾಗರತ್ನಾ ಪಡಿಯಾರ್ ಸೇರಿದಂತೆ ಹಲವು ಅಧಿಕಾರಿಗಳಿದ್ದರು.