ಕುಮಟಾ: ಜನರ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳು ಹಾಗೂ ವಿವಿಧ ಇಲಾಖೆಗಳ ಸೇವೆಗಳನ್ನು ತಲುಪಿಸುವುದು, ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸುವುದು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವುದು ಪ್ರಜಾಸೇವಾ ಅಂದೋಲನದ ಮುಖ್ಯ ಉದ್ದೇಶ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಕಲ್ಲಬ್ಬೆಯ ರವಿ ಹೆಗಡೆ ಬೊಗ್ರಿಬೈಲ ಸೇತುವೆ ಕೊಂಡಿ ರಸ್ತೆ ದುರಸ್ತಿ ಹಾಗೂ ಕುಡವಳ್ಳಿ ರಸ್ತೆ ನಿರ್ಮಾಣ ಕುರಿತು ವಿನಂತಿಸಿದರು. ವಾಲಗಳ್ಳಿಯಲ್ಲೂ ರಸ್ತೆ ಹೊಂಡಗಳ ಕುರಿತು ಪ್ರಸ್ತಾಪವಾಯಿತು. ಪ್ರತಿಕ್ರಿಯಿಸಿದ ಶಾಸಕ ಶೆಟ್ಟಿ, ರಸ್ತೆಗಳ ನಿರ್ವಹಣೆ, ದುರಸ್ತಿ ಹಾಗೂ ಹೊಸ ಕಾಮಗಾರಿಗಳನ್ನು ಮಳೆಗಾಲದ ನಡುವೆ ನಡೆಸುವುದು ಹಾನಿಕರ. ಆದರೂ ಅನಿವಾರ್ಯವಾದಲ್ಲಿ ತುರ್ತು ದುರಸ್ತಿ ಮಾಡಿಕೊಡಲಾಗುವುದು. ಕುಡವಳ್ಳಿ ರಸ್ತೆಗೆ ಈಗಾಗಲೇ ಮಂಜೂರಿ ದೊರೆತಿದ್ದು, ಟೆಂಡರ್ ಕರೆದು ಕಾಮಗಾರಿ ನಡೆಸಲಾಗುವುದು. ಬಹುಗ್ರಾಮ ಯೋಜನೆ ಜಾರಿ ಬಳಿಕ ಜೆಜೆಎಂ ಯೋಜನೆಯಡಿ ಎಲ್ಲೆಡೆ ಸಮರ್ಪಕ ನೀರು ವಿತರಣೆ ಸಾಧ್ಯವಾಗಲಿದೆ ಎಂದರು.
ಸಂತೆಗುಳಿ ವಿನಾಯಕ ಭಟ್ ಅವರಿಗೆ ಸಂಬಂಧಿಸಿ ಹೆಸ್ಕಾಂ ೪ ತಿಂಗಳ ಬಿಲ್ ಒಟ್ಟಿಗೇ ಕೊಡಲಾಗಿದೆ. ಸಮಸ್ಯೆ ಬಗೆಹರಿಸಿ ಎಂದರು. ತಾಂತ್ರಿಕ ಸಮಸ್ಯೆಯಿದೆ. ವರ್ಷದಿಂದ ಬಗೆಹರಿಸಲು ಕಷ್ಟವಾಗಿದೆ ಎಂದು ಎಇಇ ರಾಜೇಶ ಮಡಿವಾಳ ವಿವರಿಸಿದರು.ರೈತರೊಬ್ಬರು ಫ್ರುಟ್ಸ್ ಐಡಿ ತಾಂತ್ರಿಕ ಸಮಸ್ಯೆಯಿಂದ ಬೆಳೆ ಸಾಲ ಸಿಗದಂತಾಗಿದೆ ಎಂದು ತಿಳಿಸಿದರು.
ಬೆಳೆಗಳಿಗೆ ಮಂಗ ಹಾಗೂ ಕಾಡುಪ್ರಾಣಿಗಳ ಹಾವಳಿಯ ಕುರಿತು ರೈತರೊಬ್ಬರು ಪ್ರಸ್ತಾಪಿಸಿದರು. ಇ-ಪರಿಹಾರ ತಂತ್ರಾಂಶದಲ್ಲಿ ಅರಣ್ಯ ಸಿಬ್ಬಂದಿ ಬೆಳೆ ಹಾನಿ ಸರ್ವೆ ಮಾಡಿ, ಶಿಫಾರಸು ಮಾಡಿ, ನೇರವಾಗಿ ರೈತರ ಖಾತೆಗೆ ಪರಿಹಾರದ ಮೊತ್ತ ಜಮಾ ಮಾಡಲಾಗುತ್ತಿದೆ ಎಂದು ಕುಮಟಾ ಆರ್‌ಎಫ್‌ಒ ತಿಳಿಸಿದರು.
ಸಂಧ್ಯಾ ಸುರಕ್ಷಾ ಯೋಜನೆಯಡಿ ೫ ಅರ್ಜಿಗಳಿಗೆ ಸಭೆಯಲ್ಲಿಯೇ ಮಂಜೂರಿ ಆದೇಶದ ಪ್ರತಿ ವಿತರಿಸಲಾಯಿತು. ಕಾರ್ಮಿಕ ಇಲಾಖೆಯಿಂದ ೪ ಜನರಿಗೆ ಮದುವೆ ಸಹಾಯಧನದ ಆದೇಶದ ಪ್ರತಿ ನೀಡಲಾಯಿತು. ನಾಡಗೀತೆಯೊಂದಿಗೆ ಆರಂಭವಾದ ಸಭೆಯಲ್ಲಿ ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ ಸ್ವಾಗತಿಸಿ, ಸಭೆಯ ಉದ್ದೇಶ ತಿಳಿಸಿದರು. ಶಿಕ್ಷಕ ರಾಮಚಂದ್ರ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು.