ಅಧಿಕಾರ ಸ್ಥಾನದಲ್ಲಿರುವವರಿಗೆ ಸಮಾಜದ ಹಿತ ಮುಖ್ಯವಾಗಲಿ: ಶಾಸಕ ಆರಗ ಜ್ಞಾನೇಂದ್ರ

KannadaprabhaNewsNetwork |  
Published : Jun 26, 2026, 01:30 AM IST
ಫೋಟೋ 25 ಟಿಟಿಎಚ್ 01: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಆಭಿವೃದ್ದಿ ನಿಗಮದ ವತಿಯಿಂದ ಪಟ್ಟಣದ ಗ್ರಾಮೀಣಸೌಧದಲ್ಲಿ 83 ಮಹಿಳಾ ಫಲಾನುಭವಿಗಳಿಗೆ ಶಾಸಕ ಆರಗ ಜ್ಞಾನೇಂದ್ರ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿದರು. ಪಪಂ ಉಪಾಧ್ಯಕ್ಷೆ ಗೀತಾ ರಮೇಶ್ ಇದ್ದರು. | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ₹500 ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಲಜೀವನ್ ಯೋಜನೆ ಮುಂಬರುವ ಜನವರಿ ಒಳಗೆ ಪೂರ್ಣಗೊಳ್ಳಲಿದೆ. ಇದರಿಂದ ವಿಶೇಷವಾಗಿ ಬಡ ಕುಟುಂಬಗಳ ಜನರ ಆರೋಗ್ಯದ ದೃಷ್ಟಿಯಿಂದಲೂ ಅನುಕೂಲವಾಗಲಿದೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಿಸುವ ಯೋಜನೆಗಳು ಅವರ ಕುಟುಂಬದ ನೆರವಿಗೆ ಮಾತ್ರವಲ್ಲದೇ ದೇಶದ ಆರ್ಥಿಕ ಸುಧಾರಣೆಗೂ ಸಹಕಾರಿಯಾಗಬಲ್ಲದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಆಭಿವೃದ್ಧಿ ನಿಗಮದ ವತಿಯಿಂದ ಪಟ್ಟಣದ ಗ್ರಾಮೀಣಸೌಧದಲ್ಲಿ ಗುರುವಾರ ಹಿಂದುಳಿದ ವರ್ಗಗಳ 114 ಮಂದಿ ಮಹಿಳೆಯರು ಆಯ್ಕೆಯಾಗಿದ್ದು, ಅವರಲ್ಲಿ 83 ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿ ಮಾತನಾಡಿದರು.

ಮಹಿಳೆ ಅಡುಗೆ ಮನೆಗೆ ಸೀಮಿತವಾಗದೇ ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಇಂತಹ ಯೋಜನೆಗಳು ಸಹಕಾರಿಯಾಗಿವೆ. ಹೊಲಿಗೆ ಯಂತ್ರಗಳನ್ನು ಪಡೆದ ಮಹಿಳೆಯರು ಇದರ ಸದ್ಬಳಕೆ ಮಾಡಿಕೊಳ್ಳುವುದು ಅಗತ್ಯ. ಇಲ್ಲವಾದಲ್ಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ ನೀಡಲಾಗುವ ಸರ್ಕಾರದ ಸದಾಶಯದ ಯೋಜನೆಗಳು ಫಲಪ್ರದವಾಗುವುದಿಲ್ಲಾ ಎಂದೂ ಹೇಳಿದರು.

ಅಧಿಕಾರ ಸ್ಥಾನದಲ್ಲಿ ಇರುವವರಿಗೆ ಸಮಾಜದ ಹಿತ ಮುಖ್ಯವಾಗಬೇಕು. ಶೋಷಿತ ವರ್ಗದ ಧ್ವನಿಯಾಗಿ ಗೇಣಿ ಪದ್ಧತಿ ಮುಂತಾದ ಗಂಭೀರ ಸಾಮಾಜಿಕ ನ್ಯೂನತೆಗಳನ್ನು ಹೋಗಲಾಡಿಸಿ ಜನರ ಬದುಕಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನರ ಮನಸ್ಸಿನಲ್ಲಿ ಶಾಶ್ವತವಾಗಿದ್ದಾರೆ ಎಂದು ಹೇಳಿದರು.

ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರ ಶ್ರಮವನ್ನು ಕಡಿತಗೊಳಿಸಿ ಜನರಿಗೆ ಶುದ್ದ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರದ ₹500 ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಲಜೀವನ್ ಯೋಜನೆ ಮುಂಬರುವ ಜನವರಿ ಒಳಗೆ ಪೂರ್ಣಗೊಳ್ಳಲಿದೆ. ಇದರಿಂದ ವಿಶೇಷವಾಗಿ ಬಡ ಕುಟುಂಬಗಳ ಜನರ ಆರೋಗ್ಯದ ದೃಷ್ಟಿಯಿಂದಲೂ ಅನುಕೂಲವಾಗಲಿದೆ ಎಂದರು.

ಪಪಂ ಉಪಾಧ್ಯಕ್ಷೆ ಗೀತಾ ರಮೇಶ್ ಮಾತನಾಡಿ, ಮಹಿಳೆಯರ ಆರ್ಥಿಕ ಸಬಲೀಕರಣದ ಜೊತೆಗೆ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಲವಾರು ಯೋಜನೆಗಳು ಅತ್ಯಂತ ಉಪಯುಕ್ತವಾಗಿದ್ದು ಅರ್ಹ ಫಲಾನುಭವಿಗಳಿಗೆ ವಿತರಣೆಯಾಗಬೇಕಿದೆ. ಆದರೆ ಹೊಲಿಗೆ ಯಂತ್ರಗಳ ವಿತರಣೆಯ ವಿಚಾರ ಪಪಂ ಗಮನಕ್ಕೆ ಬಾರದಿರುವುದಕ್ಕೆ ಕಾರಣ ತಿಳಿಯಲಿಲ್ಲಾ. ಈ ಬಗ್ಗೆ ಸಂಭಂದಿಸಿದ ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದೂ ಹೇಳಿದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಆಭಿವೃದ್ದಿ ನಿಗಮದ ಅಧಿಕಾರಿ ರೂಪಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಗರಪೇಟೆ ಗುಡ್ಡದಲ್ಲಿ ಮಣ್ಣು ಗಣಿಗಾರಿಕೆ ನಿಲ್ಲಿಸಿ
ಹಿರೀಕಾಟಿ: ಒತ್ತುವರಿದಾರರಿಗೆ ಜಾಗ ತೆರವು ಮಾಡಲು ಖಡಕ್‌ ಆದೇಶ, 7 ದಿನದ ಗಡುವು