ಬಸ್‌ ನಿಲ್ದಾಣದ ಶೌಚಾಲಯಕ್ಕೆ ಸಾರ್ವಜನಿಕರಿಂದಲೇ ಬೀಗ: ಕೆಎಸ್ಆರ್ ಟಿಸಿ ಮೇಲ್ವಿಚಾರಕ ಮೇಲೆ ಆಕ್ರೋಶ

KannadaprabhaNewsNetwork |  
Published : Jun 01, 2025, 04:47 AM IST
30ಎಚ್ಎಸ್ಎನ್11 : ಬಸ್‌ ನಿಲ್ದಾಣದ ಶೌಚಾಲಯಕ್ಕೆ ಬೀಹ ಹಾಕಿ ಪ್ರತಿಬಟಿಸಿದ ಸಾರ್ವಜನಿಕರು ಹಾಗೂ ಆಟೋ ಚಾಲಕರು. | Kannada Prabha

ಸಾರಾಂಶ

ಬಸ್ ನಿಲ್ದಾಣದಿಂದ ಹೊರಬರುವ ಪ್ರಯಾಣಿಕರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಇದರ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಎಷ್ಟು ಮನವಿ ಮಾಡಿದ್ದರೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶಗೊಂಡ ಸಾರ್ವಜನಿಕರು ಹಾಗೂ ಆಟೋ ಚಾಲಕರು ನಿಲ್ದಾಣದ ಮೇಲ್ವಿಚಾರಕರನ್ನು ಕರೆದು ಶೌಚಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು‌.

ಕನ್ನಡಪ್ರಭ ವಾರ್ತೆ ಬೇಲೂರು

ಮೂಲಭೂತ ಸೌಕರ್ಯ ವ್ಯವಸ್ಥೆ ಇಲ್ಲದೆ ಗಬ್ಬು ನಾರುತ್ತಿದ್ದ ಬಸ್ ನಿಲ್ದಾಣದ ಶೌಚಾಲಯಕ್ಕೆ ಸಾರ್ವಜನಿಕರು ಹಾಗೂ ಆಟೋಚಾಲಕರು ಬೀಗ ಹಾಕಿದ ಘಟನೆ ನಡೆದಿದೆ.

ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಮಳೆಯಾಗುತ್ತಿದ್ದು, ಬಸ್ ನಿಲ್ದಾಣದ ಒಳಗೆ ನೀರು ನುಗ್ಗುತ್ತಿದೆ. ಪಟ್ಟಣದ ಬಸ್ ನಿಲ್ದಾಣದ ಶೌಚಾಲಯದಲ್ಲಿ ನೀರಿಲ್ಲದೆ, ಸ್ವಚ್ಛತೆ ಇಲ್ಲದೆ ಗಬ್ಬುನಾರುತ್ತಿದೆ. ಇದರ ಜೊತೆಯಲ್ಲಿ ಶೌಚಾಲಯದ ನೀರು ಹಾಗೂ ಹೊಟೇಲ್ ತ್ಯಾಜ್ಯದ ನೀರು ಬಸ್ ನಿಲ್ದಾಣದ ಹೊರಗೆ ಹರಿದು ಬಂದು ಆಟೋ ನಿಲ್ದಾಣ ಮುಂಭಾಗದ ರಸ್ತೆ ಗುಂಡಿಯಲ್ಲಿ ಶೇಖರಣೆಯಾಗುತ್ತಿದೆ. ಇದರಿಂದಾಗಿ ಮಲಮೂತ್ರದ ಗಬ್ಬು ವಾಸನೆ ನಾರುತ್ತಿದ್ದು, ಬಸ್ ನಿಲ್ದಾಣದಿಂದ ಹೊರಬರುವ ಪ್ರಯಾಣಿಕರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಇದರ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಎಷ್ಟು ಮನವಿ ಮಾಡಿದ್ದರೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶಗೊಂಡ ಸಾರ್ವಜನಿಕರು ಹಾಗೂ ಆಟೋ ಚಾಲಕರು ನಿಲ್ದಾಣದ ಮೇಲ್ವಿಚಾರಕರನ್ನು ಕರೆದು ಶೌಚಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು‌.

ಈ ವೇಳೆ ಮಾತನಾಡಿದ ಆಟೋ ಚಾಲಕರಾದ ಚಂದ್ರು ಹಾಗೂ ಕೇಶವ, ಕಳೆದ ಒಂದು ವಾರದಿಂದ ಬಸ್ ನಿಲ್ದಾಣದ ಶೌಚಾಲಯದ ನೀರು ಹೊರಭಾಗದಲ್ಲಿ ಹರಿದು ಬರುತ್ತಿದ್ದು, ಆಟೋ ಚಾಲಕರಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಎರಡು ದಿನಗಳ ಹಿಂದಷ್ಟೆ ಪುರಸಭೆ ಅಧ್ಯಕ್ಷರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡು ಪುರಸಭೆ ವತಿಯಿಂದ ಗುಂಡಿ ಮುಚ್ಚಿಸಿದ್ದರು. ಆದರೆ ಇಲ್ಲಿಯ ಅಧಿಕಾರಿಗಳು ಜಿಡ್ಡು ಹಿಡಿದು ಕೂತಿದ್ದು ಶೌಚಾಲಯದ ನೀರು ಫುಟ್ಪಾತ್ ಮೇಲೆ ಹರಿಯುತ್ತಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಕೂಡಲೇ ಇದನ್ನು ಸರಿಪಡಿಸಬೇಕು. ಈ ಹಿಂದೆ ಶಾಸಕ ಎಚ್ ಕೆ ಸುರೇಶ್ ಸಹ ಇವರಿಗೆ ತರಾಟೆಗೆ ತೆಗೆದುಕೊಂಡು ಕೆಲಸ ಮಾಡಲು ಸೂಚಿಸಿದ್ದರೂ ಕೆಲಸ ಮಾಡದೆ ಶೌಚಾಲಯದ ನೀರನ್ನು ಹೊರಗೆ ಬಿಟ್ಟಿದ್ದು ಅದನ್ನು ದುರಸ್ತಿಗೊಳಿಸುವವರೆಗೂ ಶೌಚಾಲಯದ ಬಾಗಿಲು ತೆಗೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಆಟೋ ಚಾಲಕರಾದ ಅಣ್ಣಪ್ಪ, ಪರಮೇಶ್, ದೇವರಾಜ್, ವಿನಯ್, ಜಯಣ್ಣ, ರವಿ, ರಂಜಿತ್, ಯೋಗೇಶ್ ಹಾಗೂ ಸಾರ್ವಜನಿಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ