ಕನ್ನಡಪ್ರಭ ವಾರ್ತೆ ಮಂಡ್ಯ
ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಅಪಘಾತ ಪ್ರಕರಣಗಳು ಸಂಭವಿಸುವುದಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ- ಮಳವಳ್ಳಿ ರಸ್ತೆಯ ಮಣಿಗೆರೆ ಬಳಿ ಗೂಡ್ಸ್ ಆಟೋ ಹಾಗೂ ಕಾರು ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿ ಮಾತನಾಡಿದರು.
ಸಂಚಾರಿ ನಿಯಮ ರೂಪಿಸಿರುವುದು ಸಾರ್ವಜನಿಕರ ಜೀವ ರಕ್ಷಣೆಗಾಗಿ ಎಂಬುದರ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕಿದೆ. ಸಂಚಾರಿ ನಿಯಮದ ಪ್ರಕಾರ ಗೂಡ್ಸ್ ವಾಹನದಲ್ಲಿ ಜನರ ಸಂಚಾರ ನಿಷೇಧಿಸಲಾಗಿದೆ. ಇಂದು ನಡೆದ ಅಪಘಾತದಲ್ಲಿ ದೇವರ ದಯೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದರು.ಘಟನೆಯಲ್ಲಿ 20 ಜನಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಕೆಲವರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು. ಹೆಚ್ಚಿನ ಚಿಕಿತ್ಸೆ ಬೇಕಿರುವವರಿಗೆ ಅಗತ್ಯ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಜನರು ಸಂಚಾರಿ ನಿಯಮ ಪಾಲನೆ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಹೆಲ್ಮೆಟ್ ಧರಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ನಿಷೇಧಿಸುವುದು ಮುಂತಾದ ನಿಯಮಗಳನ್ನು ಜೀವ ರಕ್ಷಣೆಗಾಗಿ ಪಾಲಿಸಿ ಎಂದರು.ಈ ವೇಳೆ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ, ಡೀಸಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ , ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಇಂದು, ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯಮದ್ದೂರು: 66/11 ಕೆವಿ ತಾಲೂಕಿನ ಕೊಪ್ಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2 ನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಸೆ.20 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ತಾಲೂಕಿನ ಕೊಪ್ಪ, ಹೊಸಗಾವಿ, ನಂಬಿನಾಯಕನಹಳ್ಳಿ, ಬಿದರಕೋಟೆ, ಗೂಳೂರು, ಮತ್ತು ಆಬಲವಾಡಿ ಗ್ರಾಮಗಳ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ಅದೇ ರೀತಿ 66/11 ಕೆ.ವಿ. ಮದ್ದೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ 11 ಕೆವಿ. ಪರಿವರ್ತಕ, ಲೈನ್ ಮತ್ತು ಈ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಮಾರ್ಗಗಳ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಸೆ.21 ರಂದು ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೆ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಾದ ವಿವೇಕಾನಂದ ನಗರ (ಮದ್ದೂರು ಟೌನ್), ಸೋಮನಹಳ್ಳಿ, ಬೆಸಗರಹಳ್ಳಿ, ಸಿ.ಎ.ಕೆರೆ, ಮಠದದೊಡ್ಡಿ, ಗೆಜ್ಜಲಗೆರೆ ಕ್ಲೀನ್ ಪ್ಯಾಕ್ಸ್, ಛತ್ರದಹೊಸಹಳ್ಳಿ, ವಳಗೆರೆಹಳ್ಳಿ, ಸಾದೊಳಲು, ಗುರುದೇವಹಳ್ಳಿ, ಬಸವನಪುರ, ಈ ಫೀಡರ್ ಗಳ ಗ್ರಾಮ ಪಂಚಾಯಿತಿಗಳಾದ ಸಿ.ಎ.ಕೆರೆ, ಕ್ಯಾತಘಟ್ಟ, ನಗರಕೆರೆ, ಗೊರವನಹಳ್ಳಿ, ಗೆಜ್ಜಲಗೆರೆ, ಸಾದೊಳಲು, ವಳಗೆರೆಹಳ್ಳಿ ಮತ್ತು ಚಾಮನಹಳ್ಳಿ ವ್ಯಾಪ್ತಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.