ದೊಡ್ಡಬಳ್ಳಾಪುರ: ಇಲ್ಲಿನ ಕೊಂಗಾಡಿಯಪ್ಪ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆ ದುರಸ್ತಿಗೆ ಜಲ್ಲಿ ಕಲ್ಲುಗಳನ್ನು ಹರಡಿ ತಿಂಗಳುಗಳೇ ಕಳೆದರೂ ಡಾಂಬರು ಹಾಕದೆ ನಿರ್ಲಕ್ಷ್ಯ ವಹಿಸಿರುವ ನಗರಸಭೆ ವಿರುದ್ಧ ಮಂಗಳವಾರ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಸಫೀರ್ ಮಾತನಾಡಿ, ದೊಡ್ಡಬಳ್ಳಾಪುರ ನಗರದಲ್ಲಿನ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗಾಗಿ ನಗರೋತ್ಥಾನ ಅನುದಾನದಲ್ಲಿ 17 ಕೋಟಿ ರುಪಾಯಿ ಅನುದಾನ ಬಿಡುಗಡೆಯಾಗಿದೆ, ಈ ಅನುದಾನದ ಹಣದಲ್ಲಿ ರುಮಾಲೆ ಛತ್ರದಿಂದ ತೇರಿನ ಬೀದಿವರೆಗಿನ ರಸ್ತೆ ಅಭಿವೃದ್ಧಿ ಒಂದು ಪ್ರಮುಖ ಕಾಮಗಾರಿಯಾಗಿದೆ. 8 ತಿಂಗಳ ಹಿಂದೆಯೇ ಕಾಮಗಾರಿ ಆರಂಭವಾಗಿದ್ದು, ರಸ್ತೆಗೆ ಜಲ್ಲಿಕಲ್ಲು ಸುರಿದ ಗುತ್ತಿಗೆದಾರ ಡಾಂಬರು ಹಾಕದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ಮಾಜಿ ನಗರಸಭಾ ಸದಸ್ಯರಾದ ಜಿ.ಸತ್ಯನಾರಾಯಣ್ ಮಾತನಾಡಿ, ಗಣೇಶ ದೇವಸ್ಥಾನದಿಂದ ತೇರಿನ ಬೀದಿವರೆಗಿನ ರಸ್ತೆ ನಗರದ ಪ್ರಮುಖ ವಾಣಿಜ್ಯ ರಸ್ತೆಯಾಗಿದೆ. ಅದರೆ, ಅಪೂರ್ಣಗೊಂಡಿರುವ ಕಾಮಾಗಾರಿಯಿಂದ ಅಂಗಡಿಗಳಲ್ಲಿ ಧೂಳು ಅವರಿಸುತ್ತಿದೆ. ಇದರಿಂದ ವರ್ತಕರು ಸೇರಿದಂತೆ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿದೆ. ಮೊದಲೇ ಕಿರಿದಾದ ರಸ್ತೆ ಈಗ ಕಾಮಾಗಾರಿ ವಿಳಂಬದಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಹೋದರೆ ವರ್ತಕರೊಂದಿಗೆ ನಗರಸಭೆಗೆ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದರು.ವರ್ತಕ ಭರತ್ ಮಾತನಾಡಿ, 8 ತಿಂಗಳ ಹಿಂದೆ ರಸ್ತೆಗೆ ಜಲ್ಲಿಕಲ್ಲು ಸುರಿದು ಹೋದ ಗುತ್ತಿಗೆದಾರರು ಮತ್ತೆ ಬಂದಿಲ್ಲ, ರಸ್ತೆ ಯಾವ ಸ್ಥಿತಿಗೆ ತಲುಪಿದೆ ಎಂದು ತಿಳಿಯಲು ನಗರಸಭೆ ಅಧಿಕಾರಿಗಳು ಸಹ ಇಲ್ಲಿಗೆ ಬಂದಿಲ್ಲ. ಕಾಮಗಾರಿ ವಿಳಂಬದಿಂದ ಧೂಳಿನ ಸಮಸ್ಯೆ ಹೆಚ್ಚಾಗಿದ್ದು ಅಂಗಡಿಯಲ್ಲಿ ವ್ಯಾಪಾರ ಮಾಡುವುದಕ್ಕೂ ಸಮಸ್ಯೆಯಾಗಿದೆ. ಪೊಲೀಸರು ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.
7ಕೆಡಿಬಿಪಿ1- ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಮುಖ್ಯರಸ್ತೆ ದುಸ್ಥಿತಿ ಹಾಗೂ ಟ್ರಾಫಿಕ್ ಸಮಸ್ಯೆ ಬಗ್ಗೆ ಸ್ಥಳೀಯ ವರ್ತಕರು, ಮುಖಂಡರು ಪ್ರತಿಭಟನೆ ನಡೆಸಿದರು.