ರವಿ ಕಾಂಬಳೆ ಕನ್ನಡಪ್ರಭ ವಾರ್ತೆ ಹುಕ್ಕೇರಿ ಇಲ್ಲಿನ ಪುರಸಭೆ ಆಕರಿಸುತ್ತಿರುವ ವಿವಿಧ ಆಸ್ತಿಗಳ ತೆರಿಗೆ ಜನರಿಗೆ ಹೊರೆಯಾಗಿ ಪರಿಣಮಿಸಿದ್ದು, ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಅದರಲ್ಲೂ ಬರದ ಸುಳಿಗೆ ಸಿಲುಕಿ ದುಸ್ತರ ಬದುಕು ಸವೆಸುತ್ತಿರುವ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಜತೆಗೆ ಆಸ್ತಿ ಕರ ಆಕರಣೆಯಲ್ಲಿ ತೆರಿಗೆದಾರರಿಂದ ಹೆಚ್ಚುವರಿ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಪುರಸಭೆ ವ್ಯಾಪ್ತಿಯಲ್ಲಿ ಬರುವ ಮನೆ, ನಿವೇಶನ ಮತ್ತಿತರ ಆಸ್ತಿಗಳ ಕರ ವಸೂಲಿಗೆ ಸ್ಪೇಷಲ್ ಡ್ರೈವ್ ನಡೆಸಿರುವ ಪುರಸಭೆ ಅಧಿಕಾರಿ-ಸಿಬ್ಬಂದಿ ತೆರಿಗೆದಾರರನ್ನು ವಂಚಿಸುತ್ತಿದ್ದಾರೆ ಎಂಬ ಗಂಭೀರ ದೂರುಗಳಿವೆ. ಆಸ್ತಿದಾರರಿಂದ ಬೇಕಾಬಿಟ್ಟಿ ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದು, ಒಂದರ್ಥದಲ್ಲಿ ಪುರಸಭೆ ಸಿಬ್ಬಂದಿ ಹಗಲು ದರೋಡೆ ನಡೆಸಿದ್ದಾರೆ ಎಂಬ ಆಪಾದನೆಗಳಿವೆ. ಪುರಸಭೆಯಲ್ಲಿ ನಿರಾಂತಕವಾಗಿ ನಡೆದಿರುವ ಹೆಚ್ಚುವರಿ ತೆರಿಗೆ ವಸೂಲಿಯಲ್ಲಿ ಸಿಬ್ಬಂದಿ ಕೈಚಳಕ ತೋರಿಸಿದ್ದು, ಜನರಿಗೆ ಆರ್ಥಿಕ ಹೊಡೆತ ನೀಡಿದ್ದಾರೆ. ಸಿಬ್ಬಂದಿ ಎಲ್ಲೇ ಮೀರಿ ವರ್ತನೆಗೆ ಸಾರ್ವಜನಿಕರ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. 1964ರ ಕರ್ನಾಟಕ ಪೌರ ಅಧಿನಿಯಮದಡಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಪ್ರಕಾರ ನೂರಾರು ತೆರಿಗೆದಾರರಿಗೆ ಬಾಕಿ ಮೊತ್ತ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಆಸ್ತಿಯ ಸ್ಥಳ ತನಿಖೆ ನಡೆಸಿ ಬಾಕಿ ಮೊತ್ತ ಪಾವತಿಗೆ 30 ದಿನಗಳ ಕಾಲಾವಧಿಯ ಗಡುವು ನೀಡಿದ್ದು ತಪ್ಪಿದ್ದಲ್ಲಿ ಆಸ್ತಿ ಜಪ್ತಿ ಮಾಡುವ ಬೆದರಿಕೆ ಹಾಕಲಾಗಿದೆ. ಆದರೆ, ಪುರಸಭೆ ನೀಡಿರುವ ಬಹುತೇಕ ನೋಟಿಸ್‌ಗಳಲ್ಲಿ ಯಡವಟ್ಟು ಕಾಣಿಸಿಕೊಂಡಿದ್ದು, ಈಗಾಗಲೇ ಬಾಕಿ ಪಾವತಿಸಿರುವ ಮೊತ್ತವನ್ನು ಮತ್ತೇ ದಾಖಲಿಸಲಾಗಿದೆ. ಹಳೆಯ ತೆರಿಗೆ ಪಾವತಿಸಿದ್ದರೂ ಬಹುತೇಕರಿಗೆ ಮತ್ತೇ ಕರ ಭರಣಾ ಮಾಡುವಂತೆ ಸೂಚಿಸಲಾಗಿದೆ. ಪುರಸಭೆ ನೋಟಿಸ್‌ನ ಪ್ರಕಾರ ಕೆಲ ತೆರಿಗೆದಾರರು ಹೆಚ್ಚುವರಿ ಹಣ ಪಾವತಿಸಿ ಕೈಸುಟ್ಟುಕೊಂಡ ಜ್ವಲಂತ ಉದಾಹಣೆಗಳಿದ್ದು, ಬರದಲ್ಲೂ ಜನರಿಗೆ ಬರೆ ಎಳೆದಿರುವುದಕ್ಕೆ ಸಾಕ್ಷಿಯಾಗಿದೆ. ಗಣೇಶ ನಗರ, ಆದರ್ಶ ನಗರ, ಆಂಜನೇಯ ನಗರ, ಗಾಂಧಿ ನಗರ, ಹಳೆ ಬಸ್-ಹೊಸ ಬಸ್ ನಿಲ್ದಾಣ, ಹಳ್ಳದಕೇರಿ, ಅಂಬೇಡ್ಕರ್ ನಗರ, ಸುಣಗಾರ ಓಣಿ, ಝೇಂಡಾ ಕಟ್ಟಿ ಸೇರಿದಂತೆ ಪಟ್ಟಣದ ಬಹುತೇಕ ಪ್ರದೇಶಗಳಲ್ಲಿ ಇಂಥ ನೂರಾರು ಉದಾಹಣೆಗಳಿವೆ. ಪಟ್ಟಣದ ಗಣೇಶ ನಗರದ 588/ಸಿ-7ರ ನಿವಾಸಿ ಸರೀತಾ ಕಾಂಬಳೆ ಎನ್ನುವವರಿಗೆ ನೀಡಿರುವ ನೋಟಿಸ್‌ನಲ್ಲಿ ಯಡವಟ್ಟು ಮಾಡಿರುವುದು ಬೆಳಕಿಗೆ ಬಂದಿದೆ. 2020ರವರೆಗೆ ನಿಯಮಿತವಾಗಿ ಮನೆ ಕರ ಪಾವತಿ ಮಾಡಿರುವ ಸರಿತಾಗೆ ಮತ್ತೇ 2015 ರಿಂದ ಸುಮಾರು ₹30 ಸಾವಿರ ತೆರಿಗೆ ಭರಣಾ ಮಾಡುವಂತೆ ಸೂಚಿಸಲಾಗಿದೆ. ಕೋರ್ಟ್‌ನಲ್ಲಿ ದಾವೆ: ಹುಕ್ಕೇರಿ ಪುರಸಭೆ ಅಧಿಕಾರಿ-ಸಿಬ್ಬಂದಿ ಎಸಗುತ್ತಿರುವ ಯದ್ವಾ-ತದ್ವಾ ಕರ ಆಕರಣೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೆಲ ತೆರಿಗೆದಾರರು ಕೋರ್ಟ್ ಮೆಟ್ಟಿಲು ಏರಲು ಅಗತ್ಯ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಹೆಚ್ಚುವರಿ ಹಣ ಸುಲಿಗೆ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲು ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಸರಿತಾ ಕಾಂಬಳೆ ತಿಳಿಸಿದ್ದಾರೆ. ನಿಧಾನವೇ ಪ್ರಧಾನ: ಸದ್ಯಕ್ಕೆ ಪುರಸಭೆ ಆಡಳಿತ ಮಂಡಳಿ ರಚನೆಯಾಗಿಲ್ಲ. ಇಲ್ಲಿ ಅಧಿಕಾರಿ-ಸಿಬ್ಬಂದಿಯದ್ದೇ ದರ್ಬಾರ್ ಎನ್ನುವ ವಾತಾವರಣವಿದೆ. ಇಂಥ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಅಹವಾಲು-ಸಮಸ್ಯೆಗಳಿಗೆ ಸ್ಪಂದಿಸಿ ಕಿವಿಯಾಗಬೇಕಿದ್ದ ಅಧಿಕಾರಿಗಳು ಕಂಡೂ, ಕೇಳಿಯೂ ಮೌನಿಗಳಂತೆ ವರ್ತಿಸುತ್ತಿದ್ದಾರೆ ಎನ್ನುವುದು ಜನರ ಆರೋಪವಾಗಿದೆ. ಕೆಲ ಸಿಬ್ಬಂದಿ ಮನಬಂದಂತೆ ಕಚೇರಿಗೆ ಆಗಮಿಸುತ್ತಿದ್ದು, ಸಮಯ ಪರಿಪಾಲನೆ ಸಂಪೂರ್ಣ ಮರೀಚಿಕೆಯಾಗಿದೆ. ಹುಕ್ಕೇರಿ ಪುರಸಭೆ ವ್ಯಾಪ್ತಿಯ ವಿವಿಧ ಆಸ್ತಿ ಕರ ವಸೂಲಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ತಪ್ಪು ಮಾಡಿರುವ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು. ತೆರಿಗೆದಾರರಿಗೆ ಯಾವುದೇ ರೀತಿಯ ವಂಚನೆಯಾಗದಂತೆ ನೋಡಿಕೊಳ್ಳಲಾಗುವುದು. -ಕಿಶೋರ ಬೆಣ್ಣಿ, ಮುಖ್ಯಾಧಿಕಾರಿ