ಮಹಮ್ಮದ ರಫೀಕ್ ಬೀಳಗಿ
ಜಗದೀಶ ಶೆಟ್ಟರ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ತಮ್ಮ ಭಾಗಕ್ಕೆ ವಿಶೇಷ ಕೊಡುಗೆ ಎಂದು ಬಿಆರ್‌ಟಿಎಸ್‌ನ ಚಿಗರಿ ಓಟಕ್ಕೆ ಚಾಲನೆ ನೀಡಿದ್ದರು. ಅನೇಕ ಅಡೆತಡೆಗಳ ಮಧ್ಯೆ ಸುದೀರ್ಘ ಅವಧಿ ನಂತರ ಕಾಮಗಾರಿ ಆರಂಭ ಮಾಡಿದ್ದ ವೇಳೆ ಹುಬ್ಬಳ್ಳಿ ಧಾರವಾಡ ಮಧ್ಯದ ಸುಮಾರು 2500 ಮರಗಳನ್ನು ತೆರವು ಮಾಡಲಾಗಿತ್ತು. ಇದಕ್ಕೆ ಆಗ ಪರಿಸರ ಪ್ರೇಮಿಗಳಿಂದ ತೀವ್ರವಾದ ವಿರೋಧ ಎದುರಾಗಿತ್ತು. ಈ ವೇಳೆ ಬಿಆರ್‌ಟಿಎಸ್ ಯೋಜನೆಗೆ ತೆರವು ಮಾಡಿದ ಒಂದು ಮರಕ್ಕೆ ಪ್ರತಿಯಾಗಿ 10 ಮರ ನೆಡುವುದಾಗಿ ವಾಗ್ದಾನ ಮಾಡಿತ್ತು. ಅದರಂತೆ ಹಂತ ಹಂತವಾಗಿ ಅವಳಿ ನಗರದ ವಿವಿಧೆಡೆ ಸುಮಾರು 45,400 ಮರಗಳನ್ನು ನೆಟ್ಟು ಗುರಿಗಿಂತ ಹೆಚ್ಚು ಮರಗಳನ್ನು ನೆಟ್ಟು ಪರಿಸರಕ್ಕೆ ಉತ್ತಮ ಕೊಡುಗೆ ನೀಡಿದೆ.
ಎಲ್ಲೆಲ್ಲಿ?: ಹುಬ್ಬಳ್ಳಿಯ ನವೀನ್ ಹೋಟೆಲ್‌ನಿಂದ ಧಾರವಾಡದ ಗಾಂಧಿನಗರದ ವರೆಗಿನ ಕಾರಿಡಾರ್‌ನಲ್ಲಿ ಒಟ್ಟು 25000 ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಕಾರಿಡಾರ್‌ನಲ್ಲಿ ನೆಟ್ಟಿರುವ ಬಹುತೇಕ ಗಿಡಗಳು ಉತ್ತಮವಾಗಿವೆ. ಇವುಗಳಿಗೆ ನಿರಂತರವಾಗಿ ನೀರುಣಿಸುವ ಮತ್ತು ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ.ಹುಬ್ಬಳ್ಳಿಯ ಗಬ್ಬೂರಿನಲ್ಲಿರುವ ಎಸ್‌ಟಿಪಿ ಘಟಕದಲ್ಲಿ ಬಿಆರ್‌ಟಿಎಸ್ ಕಾಮಗಾರಿ ಆರಂಭದ ವೇಳೆ 2000 ಸಸಿ ನೆಟ್ಟಿದ್ದು ಅಲ್ಲಿಯೂ ಮರಗಳು ಸೊಂಪಾಗಿ ಬೆಳೆದಿವೆ. ಎಸ್‌ಡಿಎಂ ಆಸ್ಪತ್ರೆ ಆವರಣದಲ್ಲೂ ಬಿಆರ್‌ಟಿಎಸ್‌ನಿಂದ ಸಸಿಗಳನ್ನು ನೆಡಲಾಗಿದ್ದು, ಅಲ್ಲೂ ಸಮರ್ಪಕ ನಿರ್ವಹಣೆಯಿರುವುದರಿಂದ ಉತ್ತಮವಾಗಿವೆ.
ಬಿಆರ್‌ಟಿಎಸ್ ಯೋಜನೆ ಅನುಷ್ಠಾನದ ವೇಳೆ ಹೇಳಿದ್ದಕ್ಕಿಂತ ಹೆಚ್ಚಿನ ಸಸಿಗಳನ್ನು ನೆಡಲಾಗಿದ್ದು, ಅವುಗಳು ಉತ್ತಮ ಸ್ಥಿತಿಯಲ್ಲಿವೆ. ಸಂಸ್ಥೆ ಪರಿಸರ ಪೂರಕ ಕಾಮಗಾರಿಗಳಿಗೆ ಆದ್ಯತೆ ನೀಡಿದೆ ಎನ್ನುತ್ತಾರೆ ಅಧಿಕಾರಿಗಳು.