ಗ್ರಾಮಸ್ಥರು ಎಚ್ಚರವಾಗುತ್ತಿದ್ದಂತೆ ಜೆಸಿಬಿ ಸಹಿತ ಪರಾರಿಯಾದ ಕಿಡಿಗೇಡಿಗಳು । ಸ್ಥಳಕ್ಕೆ ಪೊಲೀಸ್- ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ
ವಿದ್ಯಾರ್ಥಿಗಳ ಕೊರತೆಯಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ಕೇಳಿದ್ದೇವೆ. ಆದರೆ, ಇಲ್ಲಿ ವಿದ್ಯಾರ್ಥಿಗಳಿದ್ದರೂ ಸರ್ಕಾರಿ ಶಾಲೆ ಕಟ್ಟಡವನ್ನು ರಾತ್ರೋ ರಾತ್ರಿ ಕಿಡಿಗೇಡಿಗಳು ಜೆಸಿಬಿಯಿಂದ ಧ್ವಂಸ ಮಾಡಲು ಯತ್ನಿಸಿದ ಘಟನೆ ತಾಲೂಕಿನ ಈಶ್ವರಹಳ್ಳಿ ಸಮೀಪದ ವಡೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ಮಧ್ಯ ರಾತ್ರಿ ಒಂದು ಗಂಟೆ ವೇಳೆಗೆ ಗ್ರಾಮದ ಮಧ್ಯ ಭಾಗದಲ್ಲಿರುವ ಶಾಲೆ ಕಟ್ಟಡವನ್ನು ಕೆಡವಲು ಯತ್ನಿಸಲಾಗಿದೆ. ಈ ಸಂಬಂಧ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವ ಹಿನ್ನಲೆಯಲ್ಲಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದ ಮೇರೆಗೆ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ವಡೇರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಮಂಜುನಾಥ್ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಹಜರ್ ನಡೆಸಿದರು. ಕಾನೂನು ಬಾಹಿರ:
ಆದರೆ, ಶಾಲೆಯಿಂದ ಆಗಲೀ, ಶಿಕ್ಷಣ ಇಲಾಖೆಯಿಂದಾಗಲೀ ಈ ರೀತಿ ಪ್ರಕ್ರಿಯೆ ಈವರೆಗೆ ಇಲಾಖಾ ಮಟ್ಟದಲ್ಲಿ ನಡೆದಿಲ್ಲ. ಜೆಸಿಬಿ ತಂದು ರಾತ್ರೋ ರಾತ್ರಿ ಶಾಲೆ ಗೋಡೆಗಳನ್ನು ಕೆಡವಿ ಹಾಕಲಾಗಿದೆ. ಇದಕ್ಕೂ ಮುನ್ನ ಶಾಲೆಯನ್ನು ಈ ಸ್ಥಳದಿಂದ ತೆರವುಗೊಳಿಸಬೇಕೆಂದು ಕಾನೂನು ಬಾಹಿರ ಹೆಜ್ಜೆಯನ್ನು ಸ್ಥಳೀಯರು ಹಂತ ಹಂತವಾಗಿ ಇಡುತ್ತಾ ಬಂದಿದ್ದಾರೆ.
ಸರ್ಕಾರಿ ಶಾಲೆ ಕಟ್ಟಡವನ್ನು ತೆರವುಗೊಳಿಸಲು ಸ್ಥಳೀಯರು ಹಂತ ಹಂತವಾಗಿ ನಡೆಸಿದ ಪ್ರಯತ್ನದ ಬಗ್ಗೆ ಶಾಲೆಯ ಮುಖ್ಯೋಪಾ ಧ್ಯಾಯರು ಆಗಾಗ ಲಿಖಿತವಾಗಿ ಶಿಕ್ಷಣ ಇಲಾಖೆ ಗಮನಕ್ಕೆ ತಂದರೂ ಕೂಡ ಇಲಾಖೆ ಅಧಿಕಾರಿಗಳು ಜಾಣ ಕುರುಡರಂತೆ ನಡೆಸಿಕೊಂಡಿದ್ದ ಪರಿಣಾಮ ರಾತ್ರಿ ವೇಳೆಯಲ್ಲಿ ಶಾಲೆಯ ಕಟ್ಟಡ ಕೆಡಹುವ ಯತ್ನ ನಡೆಸಿದೆ.ಸಮುದಾಯ ಭವನಕ್ಕೆ ಶಿಫ್ಟ್: ಅಡುಗೆ ಕೋಣೆ ಸೇರಿದಂತೆ 3 ಕೊಠಡಿಗಳ ಈ ಶಾಲಾ ಕಟ್ಟಡ ಬಳಕೆಗೆ ಯೋಗ್ಯವಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆಯಾಗಲೀ, ಶಾಲೆಯಲ್ಲಿ ಮಕ್ಕಳೇ ಇಲ್ಲ, ಶಾಲೆಯನ್ನು ಮುಚ್ಚಬೇಕೆಂದು ಸ್ಥಳೀಯ ರಾಗಲೀ, ಮುಖ್ಯೋಪಾಧ್ಯಾಯರಾಗಲೀ ಶಿಕ್ಷಣ ಇಲಾಖೆಗೆ ದೂರು ನೀಡಿಲ್ಲ. ಆದರೂ ಸಹ ಇಲ್ಲಿನ ಮಕ್ಕಳನ್ನು ಸಮುದಾಯ ಭವನದ ಕಟ್ಟಡಕ್ಕೆ ಶಿಫ್ಟ್ ಮಾಡಿ, ಆ ಕಟ್ಟಡಕ್ಕೆ ಸರ್ಕಾರಿ ಶಾಲೆ ನಾಮಫಲಕ ಹಾಕಿದ್ದಾರೆ.
ಖಾಸಗಿ ಶಾಲೆಗಳ ಉಪಟಳದ ನಡುವೆ ತಮ್ಮ ಅಸ್ತಿತ್ವ ಉಳಿಸಿಕೊಂಡಿರುವ ಸರ್ಕಾರಿ ಶಾಲೆಯನ್ನು ಮುಚ್ಚುವ ಷಡ್ಯಂತ್ರ ಇದರ ಹಿಂದೆ ಕೆಲಸ ಮಾಡಿದೆ ಎಂಬ ಮಾತುಗಳು ಸ್ಥಳೀಯವಾಗಿ ಕೇಳಿ ಬರುತ್ತಿದೆ.--- ಬಾಕ್ಸ್ --ಶಾಲೆಯ ಕಟ್ಟಡವನ್ನು ಕೆಡವಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಬಂದಿರುವ ಹಿನ್ನಲೆಯಲ್ಲಿ ವರದಿ ಕೇಳಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಲಾಗಿದೆ.- ಪುಟ್ಟರಾಜು
----
ಶಾಲೆಯ ಕಟ್ಟಡ ಕೆಡವಿರುವುದು ಗಮನಕ್ಕೆ ಬಂದ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಈ ಸಂಬಂಧ ಸರ್ಕಾರಿ ಕಟ್ಟಡ ಹಾನಿಗೊಳಿಸಿರುವವರ ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಶಾಲೆಯ ಮುಖ್ಯೋಪಾ ಧ್ಯಾಯರು ದೂರು ನೀಡಿದ್ದಾರೆ. ಸ್ಥಳ ಮಹಜರ್ ಕೂಡ ಆಗಿದೆ.- ರವೀಶ್ಕ್ಷೇತ್ರ ಶಿಕ್ಷಣಾಧಿಕಾರಿ, ಚಿಕ್ಕಮಗಳೂರು
4 ಕೆಸಿಕೆಎಂ 6ಚಿಕ್ಕಮಗಳೂರು ತಾಲೂಕಿನ ವಡೇರಹಳ್ಳಿಯ ಸರ್ಕಾರಿ ಶಾಲೆಯ ಕಟ್ಟಡದ ಹೆಂಚು ತೆಗೆದಿರುವುದು.
--- 4 ಕೆಸಿಕೆಎಂ 7ಶಾಲೆಯ ಕಟ್ಟಡವನ್ನು ಜೆಸಿಬಿಯಿಂದ ಧ್ವಂಸ ಮಾಡಿರುವುದು.